ಬೆಂಗಳೂರು: "ತೆರಿಗೆ ವಂಚಿಸುತ್ತಿದ್ದ ವ್ಯವಸ್ಥೆಯನ್ನು ಪತ್ತೆ ಹಚ್ಚಿ ಸ್ಟ್ರೀಮ್ ಲೈನ್ಗೆ ತಂದ ಪರಿಣಾಮ ರಾಜ್ಯವು ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಸಂಗ್ರಹದಲ್ಲಿ ದೇಶದಲ್ಲೇ ಎರಡನೇ ಸ್ಥಾನಕ್ಕೆ ತಲುಪಿದೆ. ಇದಕ್ಕೆ ನಮ್ಮ ತೆರಿಗೆ ಇಲಾಖೆ ಅಧಿಕಾರಿಗಳ ಕ್ಷಮತೆಯೂ ಕಾರಣ" ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ವಿಪ್ ಪ್ರಕಾಶ್ ರಾಥೋಡ್ ಪರ ನಾಗರಾಜ್ ಯಾದವ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿಎಂ, "ಹೊಸ ಹೊಸ ತಂತ್ರಜ್ಞಾನ ಬಳಸಿಕೊಳ್ಳಲಾಗಿದೆ. ನಮ್ಮಲ್ಲಿ ವಿಚಕ್ಷಣ ದಳ ಬಹಳ ಶಕ್ತಿಯುತವಾಗಿದೆ. ಕೆಲವು ವಸ್ತುಗಳ ಮಾರಾಟದಲ್ಲಿ ವ್ಯವಸ್ಥಿತವಾದ ಜಾಲಗಳಿವೆ" ಎಂದರು.
"ಕರ್ನಾಟಕದಿಂದ ಉತ್ಪಾದನೆ ಇರಲಿ, ಬೇರೆ ಕಡೆಯಿಂದ ಇಲ್ಲಿಗೆ ಬರಲಿ, ಯಾರೂ ಈ ಉತ್ಪನ್ನ ಮುಟ್ಟಲ್ಲ ಎನ್ನುವ ಪದ್ಧತಿ ಇತ್ತು. ಅಂಥವನ್ನು ಗುರುತಿಸಿ ನಾವು ತೆರಿಗೆ ವ್ಯಾಪ್ತಿಯಲ್ಲಿ ತಂದಿದ್ದೇವೆ. ವಿದೇಶದಿಂದ ಬರುವ ಮತ್ತು ಇಲ್ಲೇ ಉತ್ಪಾದನೆಯಾಗುವ ಸ್ಕ್ರ್ಯಾಪ್ಗೆ ಲೆಕ್ಕವೇ ಇಲ್ಲ. ಮಂಗಳೂರಿಗೆ ಬಂದ ಸ್ಕ್ರ್ಯಾಪ್ ಅನ್ನು ದೆಹಲಿಯಲ್ಲಿ ತೆರಿಗೆ ಇಲ್ಲದೆ ಮಾರಾಟ ಮಾಡಲಾಗುತ್ತಿತ್ತು. ಈಗ ಅದನ್ನು ತೆರಿಗೆ ವ್ಯಾಪ್ತಿಗೆ ತರಲಾಗಿದೆ. ಇದರಿಂದಾಗಿ ನಾವು ವಾರ್ಷಿಕ 800-1000 ಕೋಟಿ ಹೆಚ್ಚು ತೆರಿಗೆ ಸಂಗ್ರಹ ಮಾಡುತ್ತಿದ್ದೇವೆ."
"ದಾಖಲೆ ಇಲ್ಲದೇ, ಬಿಲ್ ಇಲ್ಲದೇ ಮಾರಾಟ ಮಾಡಲಾಗುತ್ತಿದ್ದ ವ್ಯವಸ್ಥೆಯನ್ನು ಸ್ಟ್ರೀಮ್ ಲೈನ್ ಮಾಡಿದ್ದೇವೆ. ಜಿಎಸ್ಟಿಯಿಂದ ತಪ್ಪಿಸಿಕೊಳ್ಳದಂತೆ ನೋಡಿಕೊಳ್ಳಲಾಗುತ್ತಿದೆ. ಆದಾಯ ಹೆಚ್ಚು ತರಲು ಕ್ರಮ ವಹಿಸಲಾಗುತ್ತಿದೆ. ಹಾಗಾಗಿ ನಾವು ಜಿಎಸ್ಟಿ ಸಂಗ್ರಹದಲ್ಲಿ ಎರಡನೇ ಸ್ಥಾನ ತಲುಪಿದ್ದೇವೆ" ಎಂದರು.
ಬೆಂಗಳೂರು ಕಸಮಯವಾಗಲು ಬಿಡಲ್ಲ: "ರಾಜ್ಯ ರಾಜಧಾನಿ ಬೆಂಗಳೂರು ಕಸಮಯ ಆಗಿಲ್ಲ, ಕಸಮಯ ಆಗಲು ಬಿಡುವುದೂ ಇಲ್ಲ, ಕಸ ನಿರ್ವಹಣೆ ಗುತ್ತಿಗೆ ಷರತ್ತು ಪಾಲನೆ ಮಾಡದಿದ್ದರೆ ಪೇಮೆಂಟ್ ನಿಲ್ಲಿಸಲಾಗುತ್ತದೆ. ಈಗ ಪಾವತಿ ಮಾಡಬೇಕಿರುವ ಬಾಕಿಯನ್ನೂ ಪರಿಶೀಲನೆ ನಂತರವೇ ಪಾವತಿಸಲಾಗುತ್ತದೆ" ಎಂದು ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.
ಕಲಾಪದಲ್ಲಿ ಘನತ್ಯಾಜ್ಯ ನಿರ್ವಹಣೆ ಅವ್ಯವಸ್ಥೆ ಕುರಿತು ಕಾಂಗ್ರೆಸ್ ಸದಸ್ಯ ಪಿ.ಆರ್.ರಮೇಶ್ ಪ್ರಶ್ನೆಗೆ ಉತ್ತರಿಸಿದ ಸಿಎಂ, "ಕಸ ನಿರ್ವಹಣೆ ಟೆಂಡರ್ದಾರರು ಬ್ಯಾಂಕ್ ಗ್ಯಾರಂಟಿ ಸೇರಿ ಟೆಂಡರ್ ಷರತ್ತು ಪಾಲಿಸುವುದು ಕಡ್ಡಾಯವಾಗಿದೆ. ಈಗ ನಿರ್ವಹಣೆ ಮಾಡುತ್ತಿರುವ ಗುತ್ತಿಗೆದಾರರು ಇದರ ಪಾಲನೆ ಮಾಡಿದ್ದಾರಾ? ಇಲ್ಲವಾ? ಎನ್ನುವ ಮಾಹಿತಿ ಇಲ್ಲ. ಅದನ್ನು ಮಾಹಿತಿ ತರಿಸಿಕೊಂಡು ಪರಿಶೀಲನೆ ಮಾಡುತ್ತೇನೆ. 11 ಕೋಟಿ ಬಿಲ್ ಪಾವತಿ ಮಾಡಬೇಕಿದ್ದು, ಅದನ್ನು ತಡೆದು ಪರಿಶೀಲನೆ ನಡೆಸಿ ನಂತರವೇ ಪಾವತಿ ಮಾಡಲಾಗುತ್ತದೆ" ಎಂದರು.
ಅಲ್ಪಸಂಖ್ಯಾತ ಮತ್ತು ಓಬಿಸಿ ಪೋಸ್ಟ್ ಮೆಟ್ರಿಕ್ ಮಕ್ಕಳ ವಿದ್ಯಾರ್ಥಿ ವೇತನ ಕೇಂದ್ರ ನೀಡದೇ ಇದ್ದಲ್ಲಿ ರಾಜ್ಯ ಸರ್ಕಾರವೇ ಭರಿಸಲಿದೆ. ಮುಂದಿನ ವರ್ಷದಿಂದ ಪ್ರೀ ಮೆಟ್ರಿಕ್ಗೂ ರಾಜ್ಯವೇ ಅನುದಾನ ಕೊಡುವ ಕೆಲಸ ಮಾಡಲಿದೆ ಎಂದು ಬೊಮ್ಮಾಯಿ ತಿಳಿಸಿದ್ದಾರೆ. ಕಲಾಪದಲ್ಲಿ ಅಲ್ಪಸಂಖ್ಯಾತ ಮಕ್ಕಳ ಶಿಕ್ಷಣಕ್ಕೆ ಅನುದಾನ ಕಡಿಮೆ ಆಗುತ್ತಿದೆ. 2021-22 ರಲ್ಲಿ 273 ಕೋಟಿ ಇತ್ತು. ಈಗ ಕೇವಲ 67 ಕೋಟಿ ನೀಡಲಾಗಿದೆ. ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಲಾಗುತ್ತಿದೆ. ವಿದ್ಯಾರ್ಥಿ ವೇತನ ಹೆಚ್ಚಳ ಮಾಡಬೇಕು ಎಂದು ಕಾಂಗ್ರೆಸ್ ನಜೀರ್ ಅಹಮದ್ ಆಗ್ರಹಿಸಿದರು. ತಿಪ್ಪೇಸ್ವಾಮಿ ಮಾತನಾಡಿ, ಕೇಂದ್ರ ಸರ್ಕಾರ ಅಲ್ಪಸಂಖ್ಯಾತ ಮತ್ತು ಓಬಿಸಿ ಮಕ್ಕಳ ವಿದ್ಯಾರ್ಥಿ ವೇತನ ತಡೆ ಹಿಡಿದಿದೆ. ಇದನ್ನು ರಾಜ್ಯವೇ ಕೊಡಬೇಕು ಎಂದರು.
ಇದಕ್ಕೆ ಉತ್ತರಿಸಿದ ಸಿಎಂ, "ಪ್ರಿ ಮೆಟ್ರಿಕ್ಗೆ ಕೇಂದ್ರ ಸರ್ಕಾರ ವಿದ್ಯಾರ್ಥಿ ವೇತನ ನಿಲ್ಲಿಸಿದೆ. ಪೋಸ್ಟ್ ಮೆಟ್ರಿಕ್ಗೆ ಯಾವುದೇ ವಿದ್ಯಾರ್ಥಿ ವೇತನ ತಡೆದಿಲ್ಲ. ಈಗಾಗಲೇ ಅರ್ಜಿ ಹಾಕಿರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಕೊಡುವಂತೆ ಕೇಂದ್ರಕ್ಕೆ ಪತ್ರ ಬರೆದಿದ್ದೇವೆ. ಕೇಂದ್ರ ಕೊಡದೇ ಹೋದರೆ ನಾವೇ ಅದನ್ನು ಭರಿಸುವ ವ್ಯವಸ್ಥೆ ಮಾಡುತ್ತೇವೆ. ಮುಂದಿನ ವರ್ಷದಿಂದ ಪ್ರೀ ಮೆಟ್ರಿಕ್ಗೂ ರಾಜ್ಯವೇ ಅನುದಾನ ಕೊಡುವ ಕೆಲಸ ಮಾಡಲಿದೆ" ಎಂದರು.
ಇದನ್ನೂ ಓದಿ:ಶಿಕ್ಷಣ ಹೆಚ್ಚಾದರೂ ದುರದೃಷ್ಟವಶಾತ್ ಅಪರಾಧ ಪ್ರಕರಣ ಹೆಚ್ಚುತ್ತಿದೆ: ಬೇಸರ ಹೊರ ಹಾಕಿದ ಆರಗ ಜ್ಞಾನೇಂದ್ರ