ಬೆಂಗಳೂರು:ರಾಜ್ಯ ಮಾನವ ಹಕ್ಕುಗಳ ಆಯೋಗದಲ್ಲಿ ದಾಖಲಾಗಿರುವ 150 ಪ್ರಕರಣಗಳನ್ನು ತಕ್ಷಣವೇ ತನಿಖೆ ಮಾಡುವಂತೆ ಸೂಚಿಸಲಾಗಿದ್ದು, 18 ಪೊಲೀಸ್ ಇನ್ಸ್ಪೆಕ್ಟರ್ಗಳಿಗೆ ಸಂಕಷ್ಟ ಎದುರಾಗಿದೆ. ರಾಜ್ಯದಲ್ಲಿ ನಡೆದ 39 ಜೈಲ್ ಡೆತ್, ಲಾಕ್ ಅಪ್ ಡೆತ್ ಸೇರಿದಂತೆ ಘೋರ ಅಪರಾಧ ಪ್ರಕರಣಗಳನ್ನು ಶೀಘ್ರ ತನಿಖೆ ಮಾಡಲು ಸೂಚಿಸಲಾಗಿದೆ. ಇದರಲ್ಲಿ ಶೇ 90ರಷ್ಟು ಪ್ರಕರಣಗಳಲ್ಲಿ ಪೊಲೀಸರ ವಿರುದ್ದವೇ ಆರೋಪಗಳಿವೆ. ಆದ್ದರಿಂದ ಸಂಬಂಧಪಟ್ಟ ಇನ್ಸ್ಪೆಕ್ಟರ್ಗಳಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಲು ಆಯೋಗದಲ್ಲಿ ಸಿದ್ಧತೆ ನಡೆದಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
ಆಯೋಗದಲ್ಲಿ ಈ ವರ್ಷ ದಾಖಲಾಗಿರುವ 4,500ಕ್ಕೂ ಹೆಚ್ಚು ಪ್ರಕರಣಗಳಲ್ಲಿ 150 ಪ್ರಕರಣಗಳ ತನಿಖೆ ನಡೆಸಿ ಜನವರಿಯೊಳಗೆ ವರದಿ ಸಲ್ಲಿಸಲು ಸಿದ್ಧತೆಯಾಗಿದೆ. ಇವುಗಳಲ್ಲಿ ಪೊಲೀಸರ ವಿರುದ್ಧ ಸುಮಾರು 135 ಪ್ರಕರಣಗಳಿವೆ. ಅಕ್ರಮ ಬಂಧನ, ಸಾಕ್ಷ್ಯಾಧಾರ ನಾಶ, ಸುಳ್ಳು ಪ್ರಕರಣ, ಬಂಧನದಲ್ಲಿದ್ದಾಗ ಹಲ್ಲೆ, ಅಕ್ರಮವಾಗಿ ಬಂಧಿಸಿ ಹಣ ಪಡೆದು ಬಿಟ್ಟಿರುವುದು ಸೇರಿದಂತೆ ಗಂಭೀರ ಸ್ವರೂರದ ಪ್ರಕರಣಗಳನ್ನು ಪೊಲೀಸರು ಎದುರಿಸುತ್ತಿದ್ದಾರೆ.