ಬೆಂಗಳೂರು: ಕೋವಿಡ್ 3 ನೇ ಅಲೆ ಭೀತಿ ಮಧ್ಯೆ ಗೌರಿ - ಗಣೇಶ ಚತುರ್ಥಿ ಹಬ್ಬ ಬಂದಿದೆ. ಈ ಹಬ್ಬದ ಬಗ್ಗೆ ರಾಜ್ಯ ಸರ್ಕಾರ ಇನ್ನೂ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಹಬ್ಬದ ಸಂಭ್ರಮಕ್ಕೆ ಈ ಬಾರಿ ಆದ್ರೂ ಅನುಮತಿ ಸಿಗುತ್ತಾ? ಅನ್ನುವ ಅನುಮಾನ ಸೃಷ್ಟಿಯಾಗಿದೆ.
ಒಂದು ವೇಳೆ ಅನುಮತಿ ನೀಡಿದ್ರೂ, ಸರ್ಕಾರ ಷರತ್ತುಬದ್ಧ ಅನುಮತಿ ನೀಡಲು ಚಿಂತನೆ ನಡೆಸಿದೆಯಾ? ಎನ್ನುವ ಗೊಂದಲ ಎದುರಾಗಿದೆ. ಹೀಗಾಗಿ, ಈ ಎಲ್ಲಾ ಅನುಮಾನ ಗೊಂದಲಗಳಿಗೆ ಸಿ ಎಂ ಬಸವರಾಜ್ ಬೊಮ್ಮಾಯಿ ಸೆಪ್ಟೆಂಬರ್ 5 ರಂದು ಅಂತಿಮ ತೀರ್ಮಾನ ಮಾಡಲಿದ್ದಾರೆ.
ಈಗಾಗಲೇ ಗಣೇಶೋತ್ಸವ ಆಚರಣೆಗೆ ಬಿಜೆಪಿ ಮುಖಂಡರೇ ಒತ್ತಾಯಿಸಿದ್ದಾರೆ. ಹೀಗಾಗಿ, ಕೆಲ ನಿರ್ಬಂಧ ವಿಧಿಸಿ ಅನುಮತಿ ನೀಡಲೂಬಹುದು ಎನ್ನಲಾಗ್ತಿದೆ. ಕೋವಿಡ್ ಹಿನ್ನೆಲೆ ಅನುಮತಿ ನೀಡಬೇಕೇ? ಬೇಡವೇ? ಎಂಬ ಗೊಂದಲದಲ್ಲಿ ಸರ್ಕಾರ ಇದೆ. ಷರತ್ತುಬದ್ಧ ಸಾರ್ವಜನಿಕ ಗಣೇಶೋತ್ಸವಕ್ಕೆ ಅನುಮತಿ ನೀಡಲು ಸರ್ಕಾರ ಪ್ಲಾನ್ ಮಾಡಲಿದೆ ಎಂದು ಹೇಳಲಾಗಿದೆ. ಸಾರ್ವಜನಿಕ ಗಣೇಶೋತ್ಸವದ ಬೇಕು- ಬೇಡಗಳ ಬಗ್ಗೆ ಸರ್ಕಾರಕ್ಕೆ ತಜ್ಞರು ಸಲಹೆ ನೀಡಿದ್ದಾರೆ. ಹೀಗಾಗಿ, ರಾಜ್ಯ ಸರ್ಕಾರ ಭಕ್ತಾದಿಗಳು ಹಾಗೂ ತಜ್ಞರ ಸಲಹೆಗಳ ನಡುವೆ ಸಿಲುಕಿದೆ.
ಮುಂದಿನ ವಾರ ಬರಲಿರುವ ಗೌರಿ-ಗಣೇಶ ಹಬ್ಬಕ್ಕೆ ರಾಜ್ಯ ಸರ್ಕಾರ ಭಕ್ತಾದಿಗಳ ಒತ್ತಡಕ್ಕೆ ಮಣಿಯುತ್ತಾ ಅಥವಾ ತಜ್ಞರ ಸಲಹೆಯನ್ನು ಸ್ವೀಕಾರ ಮಾಡುತ್ತಾ ಎಂಬುದನ್ನು ಕಾದು ನೋಡಬೇಕಿದೆ.
ಗೌರಿ-ಗಣೇಶ ಹಬ್ಬಕ್ಕೆ ತಜ್ಞರ ಸಲಹೆ ಏನು?
* ಗಣೇಶ ಹಬ್ಬವನ್ನ ಸರಳವಾಗಿ ತಮ್ಮ ತಮ್ಮ ಮನೆಯಲ್ಲಿ ಹಾಗೂ ದೇವಸ್ಥಾನಗಳಲ್ಲಿ ಆಚರಿಸಿ.
* ಸಾರ್ವಜನಿಕ ಸ್ಥಳ, ಹೊರಾಂಗಣ ವೇದಿಕೆಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಈ ವರ್ಷವೂ ಅವಕಾಶ ಬೇಡ.
* ಹೊರಾಂಗಣ ವೇದಿಕೆಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ನೀಡಿದ್ರೂ, ಕಡ್ಡಾಯ ಮಾರ್ಗಸೂಚಿ ಪಾಲನೆ.
* ಗಣೇಶ ಮೂರ್ತಿ ತರುವಾಗ ಹಾಗೂ ನಿಮಜ್ಜನ ಮಾಡುವಾಗ ಯಾವುದೇ ಮೆರವಣಿಗೆಗೆ ಅವಕಾಶ ನಿರ್ಬಂಧ.
* ಉತ್ಸವ ಹಾಗೂ ಮನರಂಜನಾ ಕಾರ್ಯಕ್ರಮಕ್ಕೆ ಬ್ರೇಕ್.
* ಪಾರಂಪರಿಕ ಮೂರ್ತಿಗಳನ್ನ ಮನೆಯಲ್ಲಿಯೇ ನಿಮಜ್ಜನ ಮಾಡಬೇಕು ಅಥವಾ ಸಮೀಪದ ಪಾಲಿಕೆಯ ಜಿಲ್ಲಾಡಳಿತ ಹೊಂಡ ಕಲ್ಯಾಣಿಗಳಲ್ಲಿ ನಿಮಜ್ಜನ ನೆರವೇರಿಸಬೇಕು.
* ಗಣೇಶ ಚತುರ್ಥಿ ಆಚರಿಸುವ ದೇವಸ್ಥಾನಗಳಲ್ಲಿ ದಿನನಿತ್ಯ ಸ್ಯಾನಿಟೈಸ್ ಕಡ್ಡಾಯ.
* ದೇವಸ್ಥಾನಗಳಲ್ಲಿ ದರ್ಶನಕ್ಕೆ ಬರುವ ಭಕ್ತರಿಗೆ ಕಡ್ಡಾಯ ಥರ್ಮಲ್ ಸ್ಕ್ರೀನಿಂಗ್, ಮಾಸ್ಕ್ ಕಡ್ಡಾಯ.
* ದೇವಸ್ಥಾನಗಳಲ್ಲಿ ಆರು ಅಡಿಗೊಂದರಂತೆ ಮಾರ್ಕ್ ಮಾಡಬೇಕು. ಭಕ್ತರು ಕಡ್ಡಾಯ ಸಾಮಾಜಿಕ ಅಂತರ ಕಾಪಾಡುವಂತೆ ನೋಡಿಕೊಳ್ಳಬೇಕು.
* ಗೌರಿ – ಗಣೇಶ ಹಬ್ಬದ ವೇಳೆ ಹೆಚ್ಚು ಜನದಟ್ಟಣೆಯಾಗದಂತೆ ಕ್ರಮವಹಿಸುವುದು.
ಓದಿ:ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರವಾಗಿ ಕೈ ಹಾಕಿದ್ರೆ ಕಾಂಗ್ರೆಸ್ ಸರ್ವನಾಶ: ಬಿ ಸಿ ಪಾಟೀಲ್