ಬೆಂಗಳೂರು: ರಾಜ್ಯದಲ್ಲಿ ಆನ್‌ಲೈನ್ ಜೂಜು ಮತ್ತು ಬೆಟ್ಟಿಂಗ್ ನಿಷೇಧಿಸುವ ನಿಟ್ಟಿನಲ್ಲಿ ಕರ್ನಾಟಕ ಪೊಲೀಸ್ ಕಾಯ್ದೆಗೆ ತಿದ್ದುಪಡಿ ತಂದಿರುವ ಕ್ರಮವನ್ನು ರಾಜ್ಯ ಸರ್ಕಾರ ಹೈಕೋರ್ಟ್ ನಲ್ಲಿ ಬಲವಾಗಿ ಸಮರ್ಥಿಸಿಕೊಂಡಿದೆ.
ಆನ್‌ಲೈನ್ ಜೂಜಿನಿಂದ ಸಾಕಷ್ಟು ಕುಟುಂಬಗಳ ನೆಮ್ಮದಿ ಹಾಳಾಗುತ್ತಿದೆ ಎಂಬ ಕಾರಣಕ್ಕಾಗಿಯೇ ರಾಜ್ಯ ಸರ್ಕಾರ ಆನ್‌ಲೈನ್ ಆಟಗಳನ್ನು ನಿಷೇಧಿಸುವ ನಿರ್ಧಾರ ಕೈಗೊಂಡಿದೆ ಎಂದು ಸರ್ಕಾರದ ಪರ ವಾದ ಮಂಡಿಸಿದ ಅಡ್ವೊಕೇಟ್ ಜನರಲ್ ಹೈಕೋರ್ಟ್‌ಗೆ ತಿಳಿಸಿದ್ದಾರೆ.
ಕರ್ನಾಟಕ ಪೊಲೀಸ್ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ರಾಜ್ಯದಲ್ಲಿ ಆನ್‌ಲೈನ್ ಗೇಮ್ ರದ್ದುಪಡಿಸಿರುವ ಸರ್ಕಾರದ ಕ್ರಮ ಪ್ರಶ್ನಿಸಿ ಆಲ್ ಇಂಡಿಯಾ ಗೇಮಿಂಗ್ ಫೆಡರೇಷನ್ ಹಾಗೂ ಇತರೆ ಗೇಮಿಂಗ್ ಕಂಪನಿಗಳು ಸಲ್ಲಿಸಿರುವ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ ಸರ್ಕಾರದ ಪರ ವಾದಿಸಿದ ಅಡ್ವೊಕೇಟ್ ಜನರಲ್ ಪ್ರಭುಲಿಂಗ್ ನಾವದಗಿ, ಆನ್‌ಲೈನ್ ಜೂಜು ನಿಷೇಧವನ್ನು ಸಮರ್ಥಿಸಿಕೊಂಡರು. ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯದ ಉದಾಹರಣೆ ನೀಡಿದ ಎಜಿ, ಇದು ಕೌಶಲ್ಯದ ಕ್ರೀಡೆ. ಆದರೆ, ಗೊತ್ತಿಲ್ಲದ ಫಲಿತಾಂಶಕ್ಕೆ ನಾವು ಬೇರೆಯವರಿಂದ ಹಣ ಸಂಗ್ರಹ ಮಾಡಿದರೆ ಅಥವಾ ಜೂಜು ಕಟ್ಟಿಸಿಕೊಂಡರೆ ಅದು ಅಪರಾಧವಾಗುತ್ತದೆ. ಆನ್‌ಲೈನ್ ಆಟಗಳ ಮೂಲಕ ಬೆಟ್ಟಿಂಗ್ ನಡೆಸಿದರೆ ಅದು ಶಿಕ್ಷಾರ್ಹವಾಗುತ್ತದೆ. ಆನ್‌ಲೈನ್ ಜೂಜು ನಿಷೇಧ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳು ಅರ್ಹತೆ ಹೊಂದಿಲ್ಲ ಮತ್ತು ವಜಾಗೊಳಿಸಲು ಅರ್ಹವಾಗಿವೆ ಎಂದು ವಿವರಿಸಿದರು. ವಾದ ಆಲಿಸಿದ ಪೀಠ ವಿಚಾರಣೆಯನ್ನು ನ.30ಕ್ಕೆ ಮುಂದೂಡಿತು.