ಬೆಂಗಳೂರು :ಮರುಬಳಕೆ ಮಾಡಬಹುದಾದ ಎಲೆಕ್ಟ್ರಿಕ್ ಬ್ಯಾಟರಿಗಳನ್ನು ತಯಾರಿಸುವ ಇಂಟರ್ ನ್ಯಾಷನಲ್ ಬ್ಯಾಟರಿ ಕಂಪನಿ (ಐಬಿಸಿ) ಮತ್ತು ರಾಜ್ಯ ಸರ್ಕಾರ 8,000 ಕೋಟಿ ರೂ. ಹೂಡಿಕೆಗೆ ಅವಕಾಶ ಮಾಡಿಕೊಡಲು ಒಡಂಬಡಿಕೆ ಮಾಡಿಕೊಂಡಿದೆ. ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಎಂ.ಬಿ ಪಾಟೀಲ್ ಸಮ್ಮುಖದಲ್ಲಿ ಈ ಒಡಂಬಡಿಕೆಗೆ ಸರ್ಕಾರದ ಪರವಾಗಿ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ ಮತ್ತು ಐಬಿಸಿ ಇಂಡಿಯಾ ಪರವಾಗಿ ಅದರ ಭಾರತದ ವ್ಯವಹಾರಗಳ ಮುಖ್ಯಸ್ಥ ವೆಂಕಟೇಶ ವಲ್ಲೂರಿ ಸಹಿ ಹಾಕಿದರು.
ಇತ್ತೀಚೆಗೆ ಅಸ್ತಿತ್ವಕ್ಕೆ ಬಂದ ಸರ್ಕಾರದಲ್ಲಿ ಎಂ.ಬಿ ಪಾಟೀಲ್ ಅವರು ಈ ಖಾತೆಯ ಹೊಣೆ ವಹಿಸಿಕೊಂಡ ಮೇಲೆ ಬಂಡವಾಳ ಆಕರ್ಷಣೆಯಲ್ಲಿ ಇದೊಂದು ಮೈಲಿಗಲ್ಲಾಗಿದೆ. ಮರುಬಳಕೆಗೆ ಬರುವಂತಹ ಲಿಥಿಯಾನ್ ಬ್ಯಾಟರಿಗಳ ಉತ್ಪಾದನೆಯನ್ನು ಈ ಕಂಪನಿಯು ಇನ್ನು ಒಂದು ವರ್ಷದಲ್ಲಿ ರಾಜ್ಯದಲ್ಲಿ ಪ್ರಾರಂಭಿಸಲಿದೆ. ಈ ಉದ್ದೇಶಕ್ಕಾಗಿ ಕಂಪನಿಯ ಕೋರಿಕೆಯಂತೆ ಬೆಂಗಳೂರು ಗ್ರಾಮಾಂತರ ವಲಯದಲ್ಲಿ 100 ಎಕರೆ ಜಮೀನನ್ನು ಕೊಡಲಿದೆ. ತಾವು ಸಚಿವರಾಗಿ ಅಧಿಕಾರ ವಹಿಸಿಕೊಂಡ ನಂತರ ಈ ಕಂಪನಿಯೊಂದಿಗೆ ಮೂರು ಸುತ್ತು ಮಾತುಕತೆ ನಡೆಸಿ, ರಾಜ್ಯದಲ್ಲೇ ಹೂಡಿಕೆ ಮಾಡುವಂತೆ ಮನದಟ್ಟು ಮಾಡಿಕೊಡಲಾಗಿತ್ತು ಎಂದು ಸಚಿವರು ತಿಳಿಸಿದರು.
ಈ ಕಂಪನಿಯು ಇಂತಹ ಬ್ಯಾಟರಿಗಳನ್ನು ದಕ್ಷಿಣ ಕೊರಿಯಾದಲ್ಲಿ ಪರೀಕ್ಷಾರ್ಥವಾಗಿ ತಯಾರಿಸುವ ಘಟಕವನ್ನು ಹೊಂದಿದ್ದು, ಅದು ಕೂಡ ಸದ್ಯದಲ್ಲೇ ಕಾರ್ಯಾರಂಭ ಮಾಡಲಿದೆ. ಅತ್ಯುತ್ತಮ ಬ್ಯಾಟರಿಗಳ ಉತ್ಪಾದನೆಗೆ ಡ್ರೈ ರೂಮ್ ಮತ್ತು ಕ್ಲೀನ್ ರೂಮ್‌ಗಳನ್ನು ಕಂಪನಿ ಸ್ಥಾಪಿಸಲಿದೆ. ಇದು ರಾಜ್ಯದಲ್ಲಿ ಇಂತಹ ಎರಡನೇ ಘಟಕವಾಗಿದ್ದು, ಈ ಕ್ಷೇತ್ರದಲ್ಲಿ ರಾಜ್ಯವು ಇಡೀ ದೇಶಕ್ಕೇ ಅಗ್ರಸ್ಥಾನದಲ್ಲಿದೆ ಎಂದು ಅವರು ತಿಳಿಸಿದರು. ಕಾರ್ಯಕ್ರಮದಲ್ಲಿ ಕೈಗಾರಿಕಾ ಇಲಾಖೆ ಆಯುಕ್ತೆ ಗುಂಜನ್ ಕೃಷ್ಣ, ಐಬಿಸಿ ಸಂಸ್ಥಾಪಕ ಮತ್ತು ಸಿಇಒ ಡಾ.ಪ್ರಿಯದರ್ಶಿ ಪಾಂಡಾ, ಕಂಪನಿಯ ಸಿಒಒ ಶಶಿ ಕುಪ್ಪಣ್ಣಗಾರಿ ಉಪಸ್ಥಿತರಿದ್ದರು.