ಬೆಂಗಳೂರು :ರಾಜ್ಯ ಸರ್ಕಾರ ಈ ಹಣಕಾಸು ವರ್ಷದಲ್ಲಿ ಆರ್ಬಿಐ ಮೂಲಕ ಮುಕ್ತ ಮಾರುಕಟ್ಟೆಯಿಂದ ಸಾಲ ಎತ್ತುವಳಿಯನ್ನು ಪ್ರಾರಂಭಿಸಿದೆ. ಆದಾಯ ಕೊರತೆ ಎದುರಿಸುತ್ತಿರುವ ಸರ್ಕಾರ ಈ ಬಾರಿ 71,332 ಕೋಟಿ ಸಾಲ ಮಾಡಲು ನಿರ್ಧರಿಸಿದೆ. ಅದರಂತೆ ಇದೀಗ ತನ್ನ ಮೊದಲ ಕಂತಿನ ಸಾಲ ಎತ್ತುವಳಿ ಮಾಡಿದೆ.
ಕೋವಿಡ್ ಲಾಕ್ಡೌನ್ನಿಂದ ರಾಜ್ಯದ ಆರ್ಥಿಕತೆ ಸಂಪೂರ್ಣ ಮಂಡಿಯೂರಿದೆ. ಈ ಬಾರಿಯೂ ಆದಾಯ ಕೊರತೆ ಎದುರಾಗುವ ಸಾಧ್ಯತೆ ಹೆಚ್ಚಿದೆ. ಒಂದು ಅಂದಾಜಿನ ಪ್ರಕಾರ ಈ ಆರ್ಥಿಕ ವರ್ಷದಲ್ಲೂ ಸುಮಾರು 20,000 ಕೋಟಿ ರೂ. ಆದಾಯ ಕೊರತೆ ಎದುರಾಗಲಿದೆ.
ತೆರಿಗೆ ಸಂಗ್ರಹದಲ್ಲಿ ಚೇತರಿಕೆ ಕಾಣಿತ್ತಿದೆಯಾದರೂ ನಿರೀಕ್ಷಿತ ಗುರಿ ಮುಟ್ಟುವುದು ಅನುಮಾನ ಎಂಬುದನ್ನು ಆರ್ಥಿಕ ಇಲಾಖೆ ಅಧಿಕಾರಿಗಳೇ ಒಪ್ಪಿಕೊಂಡಿದ್ದಾರೆ. ಹೀಗಾಗಿ, ಸಾಲ ಮಾಡುವುದು ಅನಿವಾರ್ಯವಾಗಿದೆ. 2021-22ನೇ ಸಾಲಿನಲ್ಲಿ ಅಂದಾಜು 71,332 ಸಾಲ ಮಾಡುವುದಾಗಿ ಸರ್ಕಾರ ಈಗಾಗಲೇ ತಿಳಿಸಿದೆ.
ಅದರ ಭಾಗವಾಗಿ ಮೊದಲ ಎರಡು ತ್ರೈಮಾಸಿಕದಲ್ಲಿ ಸರ್ಕಾರ ಆರ್ಬಿಐ ಮೂಲಕ ಯಾವುದೇ ಸಾಲ ಎತ್ತುವಳಿ ಮಾಡಿರಲಿಲ್ಲ. ಜುಲೈ-ಸೆಪ್ಟೆಂಬರ್ವರೆಗಿನ 2ನೇ ತ್ರೈಮಾಸಿಕದಲ್ಲಿ ಸಾಲ ಎತ್ತುವಳಿ ಮಾಡುವುದಾಗಿ ಆರ್ಬಿಐಗೆ ತಿಳಿಸಿತ್ತು.
ಆರ್ಬಿಐಗೆ ತಿಳಿಸಿದಂತೆ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ತಲಾ 4,000 ಕೋಟಿಯಂತೆ ಒಟ್ಟು 8,000 ಕೋಟಿ ರೂ. ಸಾಲ ಎತ್ತುವಳಿ ಮಾಡುವುದಾಗಿ ಹೇಳಿತ್ತು. ಆದರೆ, ಸಾಲದ ಮೊರೆ ಹೋಗಿರಲಿಲ್ಲ. ಇದೀಗ ಮೂರನೇ ತ್ರೈಮಾಸಿಕದಲ್ಲಿ ಸಾಲ ಎತ್ತುವಳಿ ಮಾಡಲು ಪ್ರಾರಂಭಿಸಿದೆ.
4 ಸಾವಿರ ಕೋಟಿ ಸಾಲ ಎತ್ತುವಳಿ :ಮೂರನೇ ತ್ರೈಮಾಸಿಕದಲ್ಲಿ ರಾಜ್ಯ ಆರ್ಬಿಐ ಮೂಲಕ ಮುಕ್ತ ಮಾರುಕಟ್ಟೆಯಿಂದ ಈ ವರ್ಷದ ಮೊದಲ ಸಾಲ ಮಾಡಲು ಪ್ರಾರಂಭಿಸಿದೆ. ಅಕ್ಟೋಬರ್-ಡಿಸೆಂಬರ್ವರೆಗಿನ ಮೂರನೇ ತ್ರೈಮಾಸಿಕದಲ್ಲಿ ರಾಜ್ಯ ಸರ್ಕಾರ ಆರ್ಬಿಐ ಮೂಲಕ ಮಾರುಕಟ್ಟೆಯಿಂದ ಸಾಲ ಎತ್ತುವಳಿ ಮಾಡುವುದಾಗಿ ಈಗಾಗಲೇ ತಿಳಿಸಿದೆ. ಅದರಂತೆ ಆರ್ಬಿಐ ಮೂಲಕ ಈವರೆಗೆ 4,000 ಕೋಟಿ ರೂ. ರಾಜ್ಯ ಅಭಿವೃದ್ಧಿ ಸಾಲ (ಎಸ್ಡಿಎಲ್) ಎತ್ತುವಳಿ ಮಾಡಿದೆ.
ರಾಜ್ಯ ಸರ್ಕಾರ ಸೆಪ್ಟೆಂಬರ್ ತಿಂಗಳಲ್ಲಿ ಆರ್ಬಿಐಗೆ ಅಕ್ಟೋಬರ್ನಿಂದ ಡಿಸೆಂಬರ್ವರೆಗೆ 20,000 ಕೋಟಿ ರೂ. ಸಾಲ ಎತ್ತುವಳಿ ಮಾಡುವುದಾಗಿ ತಿಳಿಸಿತ್ತು. ಕರ್ನಾಟಕ ಸರ್ಕಾರ ಅಕ್ಟೋಬರ್ನಲ್ಲಿ ಮೂರು ಬಾರಿ ತಲಾ 2,000 ಕೋಟಿಯಂತೆ ಒಟ್ಟು 6,000 ಕೋಟಿ ರೂ. ಸಾಲ ಎತ್ತುವಳಿ ಮಾಡಲು ನಿರ್ಧರಿಸಿದೆ.
ಅದರಂತೆ ಅ.5ರಂದು ಆರ್ಬಿಐ ನಡೆಸಿದ ಹರಾಜಿನಲ್ಲಿ ಮುಕ್ತ ಮಾರುಕಟ್ಟೆಯಿಂದ 2,000 ಕೋಟಿ ರೂ.ಸಾಲ ಮಾಡಿದ್ದರೆ, ಅ.12ರಂದು 2,000 ಕೋಟಿ ರೂ. ಸಾಲ ಎತ್ತುವಳಿ ಮಾಡಿದೆ. ಆ ಮೂಲಕ ಆರ್ಬಿಐ ಮೂಲಕ ಅಕ್ಟೋಬರ್ ತಿಂಗಳಲ್ಲಿ ಈವರೆಗೆ ಒಟ್ಟು 4,000 ಸಾಲ ಮಾಡಿದೆ. ಮುಂದಿನ ವಾರ ನಡೆಯುವ ಹರಾಜಿನಲ್ಲಿ ಮತ್ತೆ 2,000 ಕೋಟಿ ರೂ. ಸಾಲ ಮಾಡಲಿದೆ. ಆ ಮೂಲಕ ಈ ತಿಂಗಳು ಒಟ್ಟು 6,000 ಕೋಟಿ ರೂ. ಸಾಲ ಮಾಡಲಿದೆ.
ನವಂಬರ್ ತಿಂಗಳಲ್ಲೂ ಮೂರು ಬಾರಿ ತಲಾ 2,000 ಕೋಟಿಯಂತೆ 6,000 ಕೋಟಿ ರೂ. ಸಾಲ ಮಾಡಲಿದೆ. ಡಿಸೆಂಬರ್ ತಿಂಗಳಲ್ಲಿ ನಾಲ್ಕು ಬಾರಿ ತಲಾ 2,000 ಕೋಟಿಯಂತೆ 8,000 ಕೋಟಿ ರೂ. ಸಾಲ ಎತ್ತುವಳಿ ಮಾಡುವುದಾಗಿ ತಿಳಿಸಿದೆ. ಎರಡು ತ್ರೈಮಾಸಿಕದಲ್ಲಿ ಯಾವುದೇ ಸಾಲ ಮಾಡದ ರಾಜ್ಯ ಸರ್ಕಾರ ಅಕ್ಟೋಬರ್ನಿಂದ ಮಾರ್ಚ್ವರೆಗೆ ಪ್ರತಿ ತಿಂಗಳು ನಿರಂತರ ಸಾಲ ಎತ್ತುವಳಿ ಮಾಡಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನನ್ನೂ ಓದಿ:ಕಾಂಗ್ರೆಸ್ ಭ್ರಷ್ಟಾಚಾರದ ಗಂಗೋತ್ರಿ: ಸಿದ್ದರಾಮಯ್ಯಗೆ ಅಚ್ಛೇದಿನ್ ಬರಲ್ಲ ಎಂದ ಸಿಎಂ