ಕರ್ನಾಟಕ

karnataka

ETV Bharat / state

ರೋಹಿಣಿ ಸಿಂಧೂರಿ, ರೂಪಾ ಬಹಿರಂಗ ಜಟಾಪಟಿ; ರಾಜ್ಯ ಸರ್ಕಾರದಿಂದ ನೋಟಿಸ್ ಜಾರಿ

ರೋಹಿಣಿ ಸಿಂಧೂರಿ, ಡಿ.ರೂಪಾ ಬಹಿರಂಗ ತಿಕ್ಕಾಟ- ರಾಜ್ಯ ಸರ್ಕಾರದಿಂದ ನೋಟಿಸ್ ಜಾರಿ- ಸೇವಾ ನಿಯಮ ಉಲ್ಲಂಘಿಸದಂತೆ ಎಚ್ಚರಿಕೆ

notice
ರೋಹಿಣಿ ಸಿಂಧೂರಿ, ರೂಪಾ

By

Published : Feb 21, 2023, 11:13 AM IST

ಬೆಂಗಳೂರು: ಸಾರ್ವಜನಿಕವಾಗಿ ಒಬ್ಬರ ಮೇಲೊಬ್ಬರು ಪರಸ್ಪರ ಆರೋಪದೊಂದಿಗೆ ತಿಕ್ಕಾಟಕ್ಕಿಳಿದಿರುವ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಐಪಿಎಸ್ ಅಧಿಕಾರಿ ಡಿ.ರೂಪಾಗೆ ರಾಜ್ಯ ಸರ್ಕಾರ ನೋಟಿಸ್ ನೀಡಿದೆ. ಸಿಬ್ಬಂದಿ ಮತ್ತು ಆಡಳಿತ ಇಲಾಖೆಯಿಂದ ನೋಟಿಸ್ ಜಾರಿಯಾಗಿದೆ. ಸರ್ಕಾರದ ಅಧೀನ ಕಾರ್ಯದರ್ಶಿ ಜೇಮ್ಸ್ ತಾರಕನ್ ನೋಟಿಸ್ ನೀಡಿದ್ದು, ಸೇವಾ ನಿಯಮದ ಉಲ್ಲಂಘನೆ‌‌ ಮಾಡದಂತೆ ಇಬ್ಬರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ನೋಟಿಸ್​ನಲ್ಲಿ ಪರಸ್ಪರ ಆರೋಪಗಳಿಗಾಗಿ ಮಾಧ್ಯಮಗಳನ್ನು ಬಳಸಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಲಾಗಿದೆ. "ತಮ್ಮ ಆಕ್ಷೇಪ, ದೂರುಗಳನ್ನು ನೀಡಲು ಸೂಕ್ತ ವೇದಿಕೆ ಇದ್ದರೂ ನೇರವಾಗಿ ಮಾಧ್ಯಮಗಳ ಮುಂದೆ ಹೋಗಿದ್ದೀರ. ಇದರಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಹಾಗೂ ಮುಜುಗರ ಉಂಟಾಗಿದೆ" ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

"ಸರ್ಕಾರಿ ಅಧಿಕಾರಿಯಾಗಿ ಈ ರೀತಿಯ ವರ್ತನೆ ಸಮಂಜಸವಲ್ಲ. ಇದು ಸೇವಾ ನಿಯಮದ ವಿರುದ್ಧವಾಗಿದೆ. ನಿಯಮದ ಪ್ರಕಾರ ಸರ್ಕಾರಿ ಅಧಿಕಾರಿ ತಮ್ಮ ಕರ್ತವ್ಯ ನಿರ್ವಹಣೆ, ಸರ್ಕಾರಿ ಯೋಜನೆಗಳು ಪ್ರಚಾರಪಡಿಸಲು ಮಾತ್ರ ಮಾಧ್ಯಮಗಳ ಮುಂದೆ ಹೋಗಬಹುದಾಗಿದೆ. ತಮ್ಮ ಆರೋಪ, ದೂರುಗಳನ್ನು ಸಕ್ಷಮ ಪ್ರಾಧಿಕಾರಕ್ಕೆ ಸಲ್ಲಿಸುವ ಬದಲು ಮಾಧ್ಯಮಗಳ ಮುಂದೆ ಹೋಗುವುದನ್ನು ತಪ್ಪಿಸಬಹುದಾಗಿತ್ತು" ಎಂದು ನೋಟಿಸ್​ನಲ್ಲಿ ತಿಳಿಸಿದೆ.

ಇದನ್ನೂ ಓದಿ:ಡಿ.ರೂಪಾ ವಿರುದ್ಧ ಮುಖ್ಯ ಕಾರ್ಯದರ್ಶಿಗೆ ದೂರು ನೀಡಿದ ರೋಹಿಣಿ ಸಿಂಧೂರಿ

ಇನ್ನು ಮುಂದೆ ಈ ಸಂಬಂಧ ಮಾಧ್ಯಮಗಳನ್ನು ಸಂಪರ್ಕಿಸದಂತೆ ಖಡಕ್ ಸೂಚನೆ ನೀಡಲಾಗಿದೆ. ಸೇವಾ ನಿಯಮ ಹಾಗೂ ಶಿಸ್ತು ಪಾಲನೆಯ ಸುತ್ತೋಲೆಯ ಅಂಶಗಳನ್ನು ಪಾಲಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸಿಎಂ ಬಸವರಾಜ ಬೊಮ್ಮಾಯಿ‌ ಸೂಚನೆ ಮೇರೆಗೆ ಅಧಿಕಾರಿಗಳಿಗೆ ನೋಟಿಸ್ ನೀಡಲಾಗಿದೆ.

ಸೋಮವಾರ ಇಬ್ಬರೂ ಅಧಿಕಾರಿಗಳು ಮುಖ್ಯ ಕಾರ್ಯದರ್ಶಿಯನ್ನು ಭೇಟಿ ಮಾಡಿ ದೂರನ್ನು ಸಲ್ಲಿಸಿದ್ದರು. ಈ ವೇಳೆ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ರೋಹಿಣಿ ಸಿಂಧೂರಿ ಹಾಗೂ ಡಿ.ರೂಪಾಗೆ ಮಾಧ್ಯಮಗಳ ಮುಂದೆ ಹೋಗದಂತೆ ನಿರ್ದೇಶನ ನೀಡಿದ್ದರು. ಜೊತೆಗೆ ಸೇವಾ ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದರು.

ಇತ್ತ ಇಬ್ಬರು ಅಧಿಕಾರಿಗಳ ಜಗಳ ಸಾರ್ವಜನಿಕ ವಲಯದಲ್ಲೂ ಸಾಕಷ್ಟು ಆಕ್ಷೇಪಕ್ಕೆ ಕಾರಣವಾಗಿದೆ. ಹಿರಿಯ ಸಚಿವರುಗಳು ಇಬ್ಬರು ಹಿರಿಯ ಅಧಿಕಾರಿಗಳ ಈ ರಂಪಾಟದ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಇದೀಗ ಪರಸ್ಪರ ತಿಕ್ಕಾಟಕ್ಕೆ ಇಳಿದಿರುವ ಮಹಿಳಾ ಅಧಿಕಾರಿಗಳಿಗೆ ರಾಜ್ಯ ಸರ್ಕಾರ ನೋಟಿಸ್ ನೀಡಿ, ಸೇವಾ ನಿಯಮ ಉಲ್ಲಂಘಿಸದಂತೆ ಖಡಕ್ ಸೂಚನೆ ನೀಡಿದೆ.

ಇದನ್ನೂ ಓದಿ:ರೂಪಾ ಕೇಳಿರುವ ಪ್ರಶ್ನೆಗಳು ನೈತಿಕವಾಗಿವೆ, ಸಂಬಂಧಿಸಿದವರು ಉತ್ತರಿಸಲಿ: ಪ್ರತಾಪ್ ಸಿಂಹ

ABOUT THE AUTHOR

...view details