ಬೆಂಗಳೂರು:ನವೀಕರಿಸಬಹುದಾದ ಇಂಧನ, ಅನಿಮೇಷನ್, ಗೇಮಿಂಗ್, ರೆಗ್ಯುಲೇಟರಿ ಸ್ಯಾಂಡ್ ಬಾಕ್ಸಸ್ ಸೇರಿದಂತೆ ವಿವಿಧ ವಲಯದಲ್ಲಿ ರಾಜ್ಯದೊಂದಿಗೆ ಸಹಭಾಗಿತ್ವ ವಹಿಸುವಂತೆ ಯುಕೆ ಸರ್ಕಾರಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಹ್ವಾನ ನೀಡಿದ್ದಾರೆ.
ಯುಕೆ ಸರ್ಕಾರದೊಂದಿಗೆ ಸಿಎಂ ಬಿಎಸ್ವೈ ಸಭೆ ಯುನೈಟೆಡ್ ಕಿಂಗ್ಡಮ್ ಸರ್ಕಾರದ ಎಂಎಸ್ಒ ಲಾರ್ಡ್ ತಾರಿಖ್ ಅಹಮ್ಮದ್ ಜೊತೆ ಗೃಹ ಕಚೇರಿ ಕೃಷ್ಣಾದಿಂದ ಸಭೆ ನಡೆಸಿ ಮಾತನಾಡಿದ ಸಿಎಂ, ಕರ್ನಾಟಕ ಜಾಗತಿಕ ಮಟ್ಟದಲ್ಲಿ ವೇಗವಾಗಿ ಬೆಳೆಯುತ್ತಿರುವ ತಾಂತ್ರಿಕ ಹಬ್ ಆಗಿದೆ. 2019ನೇ ಸಾಲಿನ ಆವಿಷ್ಕಾರದಲ್ಲಿ ರಾಜ್ಯ ಮೊದಲ ಸ್ಥಾನದಲ್ಲಿದೆ ಎನ್ನುವ ವರದಿಯನ್ನು ನೀತಿ ಆಯೋಗ ಬಿಡುಗಡೆ ಮಾಡಿದೆ. ಜಾಗತಿಕ ಕಂಪನಿಗಳ ಹೂಡಿಕೆಗೆ ಕರ್ನಾಟಕ ಅತ್ಯುತ್ತಮ ತಾಣವಾಗಿದೆ. ಕೌಶಲ್ಯಯುತರ ಲಭ್ಯತೆ ಸಾಕಷ್ಟಿದೆ. ಪರಸ್ಪರ ಸಹಕಾರದಿಂದ ಅಭಿವೃದ್ಧಿ ದಿಕ್ಕಿನತ್ತ ಸಾಗಬಹುದು ಎಂದು ರಾಜ್ಯದಲ್ಲಿ ಹೂಡಿಕೆ ಮಾಡಲು ಯುನೈಟೆಡ್ ಕಿಂಗ್ಡಮ್ಗೆ ಆಹ್ವಾನ ನೀಡಿದರು. ಪವನ ಶಕ್ತಿ ಮತ್ತು ಸೌರಶಕ್ತಿ ಉತ್ಪಾದನೆಗೆ ಕರ್ನಾಟಕ ಉತ್ತಮ ತಾಣವಾಗಿದೆ. ಶೇ. 62ರಷ್ಟು ನವೀಕರಿಸಬಹುದಾದ ಇಂಧನ ಮೂಲಕ್ಕೆ ಬೇಡಿಕೆ ಇದೆ. ನವೀಕರಿಸಬಹುದಾದ ಇಂಧನ ಉತ್ಪಾದನಾ ಪ್ಲಾಂಟ್ಅನ್ನು ಯುಕೆ ಜೊತೆ ಆರಂಭಿಸಲು ಚಿಂತನೆ ಮಾಡಿದ್ದೇವೆ. ಕೈಗಾರಿಕಾ ಪ್ರದೇಶದ ವ್ಯಾಪ್ತಿಯಲ್ಲಿ ಪರಿಸರ ಗುಣಮಟ್ಟ ಹೆಚ್ಚಿಸಲು ಕ್ರಿಯಾಯೋಜನೆ ರೂಪಿಸಲಾಗುತ್ತಿದೆ. ನೀರು ಶುದ್ಧೀಕರಣ ಮಾಡಲು ಮತ್ತು ಆ ನೀರಿನ ಮರು ಬಳಕೆ ಮಾಡುವ ತಂತ್ರಜ್ಞಾನ, ಘನ ತ್ಯಾಜ್ಯ ನಿರ್ವಹಣೆ ತಂತ್ರಜ್ಞಾನ ಕುರಿತು ಚರ್ಚೆ ನಡೆಸಲಾಗುತ್ತಿದೆ. ಎಲ್ಲಾ ರೀತಿಯಲ್ಲೂ ಹೂಡಿಕೆಗೆ ಪೂರಕ ವಾತಾವರಣ ಇದ್ದು, ವಿವಿಧ ವಲಯಗಳಲ್ಲಿ ರಾಜ್ಯ ಸರ್ಕಾರದೊಂದಿಗೆ ಸಹಭಾಗಿತ್ವ ವಹಿಸುವಂತೆ ಆಹ್ವಾನ ನೀಡಿದರು. ಯುಕೆ ಸರ್ಕಾರದೊಂದಿಗೆ ಸಿಎಂ ಬಿಎಸ್ವೈ ಸಭೆ ರಾಜ್ಯ ಸರ್ಕಾರದ ಜೊತೆ ಸಹಭಾಗಿತ್ವ ವಹಿಸುವ ಕುರಿತು ನಮ್ಮ ಅಧಿಕಾರಿಗಳು ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ. ಅನುಮಾನಗಳಿಗೆ ಪರಿಹಾರ ನೀಡಲಿದ್ದಾರೆ. ಖುದ್ದು ಭೇಟಿ ಮಾಡಿ ಪರಿಶೀಲಿಸಿ ಎಂದು ಸಲಹೆ ನೀಡಿದರು. ಕರ್ನಾಟಕ ಮತ್ತು ಕೇರಳ ರಾಜ್ಯದ ಬ್ರಿಟಿಷ್ ಡೆಪ್ಯುಟಿ ಹೈಕಮೀಷನರ್ ಪಿಲ್ಮೋರ್ ಬೆಡ್ ಫೋರ್ಡ್ ಹಾಗೂ ರಾಜ್ಯದ ಅಧಿಕಾರಿಗಳು ವರ್ಚುವಲ್ ಸಭೆಯಲ್ಲಿ ಉಪಸ್ಥಿತರಿದ್ದರು.