ಬೆಂಗಳೂರು: ನಗರದ ಬಿಬಿಎಂಪಿ ವ್ಯಾಪ್ತಿಯಲ್ಲಿ ರೂಪಿಸಿರುವ ಹೊರಾಂಗಣ ಜಾಹೀರಾತು ಮತ್ತು ಸಾರ್ವಜನಿಕ ಸಂದೇಶ ಬೈಲಾ-2018’ಅನ್ನು ಅನುಮೋದಿಸಿ ಸೆ.6ರಂದು ಗೆಜೆಟ್ ಅಧಿಸೂಚನೆ ಹೊರಡಿಸಲಾಗಿದೆ ಎಂದು ರಾಜ್ಯ ಸರ್ಕಾರ ಹೈಕೋರ್ಟ್ಗೆ ಮಾಹಿತಿ ನೀಡಿದೆ.
ಬಿಬಿಎಂಪಿ ಜಾಹೀರಾತು ನೀತಿಗೆ ಅಸ್ತು :ರಾಜ್ಯ ಸರ್ಕಾರದಿಂದ ಹೈಕೋರ್ಟ್ಗೆ ಮಾಹಿತಿ - ಮುಖ್ಯ ನ್ಯಾಯಮೂರ್ತಿ
ಅಕ್ರಮ ಜಾಹೀರಾತುಗಳ ಹಾವಳಿ ತಡೆಯಲು ಬಿಬಿಎಂಪಿ ಹಾಗೂ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸುವಂತೆ ಕೋರಿ, ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ, ಮುಖ್ಯ ನ್ಯಾಯಮೂರ್ತಿಗಳಿದ್ದ ವಿಭಾಗೀಯ ಪೀಠದಲ್ಲಿ ವಿಚಾರಣೆ ನಡೆಯಿತು.
ಮುಖ್ಯ ನ್ಯಾಯಮೂರ್ತಿಗಳಿದ್ದ ವಿಭಾಗೀಯ ಪೀಠದ ವಿಚಾರಣೆ ವೇಳೆ, ಸರ್ಕಾರದ ಪರ ವಕೀಲರು ನಗರದಲ್ಲಿ ಅನಧೀಕೃತ ಜಾಹೀರಾತು ಫಲಕ ಅಳವಡಿಸಿರುವವರ ವಿರುದ್ಧ ಕೈಗೊಂಡ ಕ್ರಮಗಳ ಕುರಿತು ವರದಿ ಸಲ್ಲಿಸಿದರು. ವರದಿಯಲ್ಲಿ ನಗರದ 7 ವಲಯಗಳಲ್ಲಿ ಒಟ್ಟು 206 ಪ್ರಕರಣಗಳನ್ನು ದಾಖಲಿಸಲಾಗಿದ್ದು, 121 ಪ್ರಕರಗಳಲ್ಲಿ ಆರೋಪಿಗಳನ್ನು ತಪ್ಪಿತಸ್ಥರೆಂದು ಪರಿಗಣಿಸಲಾಗಿದೆ. 24 ಪ್ರಕರಣಗಳಲ್ಲಿ ದೋಷಾರೋಪ ನಿಗದಿಯಾಗಬೇಕಿದೆ ಎಂದು ತಿಳಿಸಿದರು.
ಇದನ್ನ ಪರಿಗಣಿಸಿದ ನ್ಯಾಯಾಲಯ ಕೇವಲ ಇಂಗ್ಲಿಷ್ ಭಾಷೆಯಲ್ಲಿ ಅಧಿಸೂಚನೆ ಹೊರಡಿಸಿರುವುದು ಸರಿಯಲ್ಲ, ಕನ್ನಡ ಭಾಷೆಯಲ್ಲೂ ಗೆಜೆಟ್ ಅಧಿಸೂಚನೆ ಪ್ರಕಟಿಸಿ ಎಂದು ಸರ್ಕಾರಕ್ಕೆ ಸೂಚಿಸಿ ವಿಚಾರಣೆ ಸೆ.25ಕ್ಕೆ ಮುಂದೂಡಿದೆ.