ಕರ್ನಾಟಕ

karnataka

ETV Bharat / state

ರಾಜ್ಯ ಸರ್ಕಾರದ ಹಣಕಾಸಿನ ವ್ಯವಹಾರಗಳ ಲೆಕ್ಕಪರಿಶೋಧನಾ ವರದಿ ಮಂಡನೆ

ವಿಧಾನಸಭೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ರಾಜ್ಯ ಸರ್ಕಾರದ ಹಣಕಾಸಿನ ವ್ಯವಹಾರಗಳ ಮೇಲೆ ನೀಡಿರುವ ಲೆಕ್ಕಪರಿಶೋಧನಾ ವರದಿ ಮಂಡಿಸಿದರು.

CM Basavaraja Bommai
ಸಿಎಂ ಬಸವರಾಜ ಬೊಮ್ಮಾಯಿ

By

Published : Sep 15, 2021, 10:31 PM IST

ಬೆಂಗಳೂರು:ರಾಜ್ಯ ಸರ್ಕಾರದ ಹಣಕಾಸಿನ ವ್ಯವಹಾರಗಳ ಮೇಲೆ ನೀಡಿರುವ ಲೆಕ್ಕಪರಿಶೋಧನಾ ವರದಿಯನ್ನು ಸಿಎಂ ಬಸವರಾಜ ಬೊಮ್ಮಾಯಿ ಇಂದು ವಿಧಾನಸಭೆಯಲ್ಲಿ ಮಂಡಿಸಿದರು.

ಭಾರತದ ಲೆಕ್ಕನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರು ನೀಡಿರುವ ರಾಜ್ಯ ಸರ್ಕಾರದ ಹಣಕಾಸಿನ ವ್ಯವಹಾರಗಳ ಮೇಲೆ ನೀಡಿರುವ ಲೆಕ್ಕಪರಿಶೋಧನಾ ವರದಿ (2021ನೇ ವರ್ಷದ ವರದಿ ಸಂಖ್ಯೆ:1) ಹಾಗೂ ಭಾರತದ ಲೆಕ್ಕನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರು ನೀಡಿರುವ ಬೆಂಗಳೂರು ನಗರ ಪ್ರದೇಶದಲ್ಲಿ ಮಳೆನೀರು ನಿರ್ವಹಣೆಯ ಮೇಲಿನ ಕಾರ್ಯ ನಿರ್ವಹಣಾ ಲೆಕ್ಕಪರಿಶೋಧನಾ ವರದಿಯನ್ನು (2021ನೇ ವರ್ಷದ ವರದಿ ಸಂಖ್ಯೆ:2) ಸಿಎಂ ಮಂಡಿಸಿದರು.

ರಾಜ್ಯ ಸರ್ಕಾರದ ಬಜೆಟ್‌ನಲ್ಲಿ ಹೆಚ್ಚು ವಾಸ್ತವಿಕವಾಗಿರಬೇಕಾದ ಅಗತ್ಯತೆ ಎಂದು ಲೆಕ್ಕ ನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರ (ಸಿಎಜಿ) ವರದಿಯು ಶಿಫಾರಸು ಮಾಡಿದ್ದು, 2019-20 ನೇ ಸಾಲಿನಲ್ಲಿ ಶೇ.11ರಷ್ಟು ಬಳಕೆಯಾಗದೆ ಉಳಿದಿದೆ ಎಂದು ತಿಳಿಸಿದೆ.

ಕಳೆದ ಮೂರು ವರ್ಷಗಳ ಬಜೆಟ್ ಮತ್ತು ವೆಚ್ಚಗಳನ್ನು ಹೋಲಿಸಿದರೆ ಸರ್ಕಾರದ ಆದಾಯ ಮತ್ತು ಬಂಡವಾಳ ಸಮರ್ಪಕವಾಗಿ ಬಳಕೆಯಾಗದಿರುವುದು ಕಂಡು ಬಂದಿದೆ. ಬಜೆಟ್ ಹಂಚಿಕೆಗಳು ಪ್ರತಿ ವರ್ಷವೂ ಬಳಕೆಯಾಗದಿರುವುದನ್ನು ಗಮನಿಸಲಾಗಿದೆ. ಇದು ಆಯಾ ವರ್ಷಗಳಲ್ಲಿ ಯೋಜಿತ ಹಣಕಾಸಿನ ವೆಚ್ಚಗಳನ್ನು ಸಾಧಿಸದಿರುವುದನ್ನು ಸೂಚಿಸುತ್ತದೆ. ಹಿಂದಿನ ವರ್ಷಗಳ ವೆಚ್ಚವನ್ನು ಪರಿಗಣಿಸದೆ ಬಜೆಟ್ ಹಂಚಿಕೆಗಳನ್ನು ಮಾಡಲಾಗಿದೆ ಎಂದು ಉಲ್ಲೇಖಿಸಲಾಗಿದೆ.

ರಾಜ್ಯಕ್ಕೆ ಲಭ್ಯ ಇರುವ ನಿವ್ವಳ ಸಾಲದ ಹೆಚ್ಚಳವು ಮುಖ್ಯವಾಗಿ 2018-19 ನೇ ಸಾಲಿನಲ್ಲಿ 40.470 ಕೋಟಿ ರೂ.ನಿಂದ 2019-20 ನೇ ಸಾಲಿನಲ್ಲಿ 49,784 ಕೋಟಿ ರೂ.ಗೆ ಆಂತರಿಕ ಸಾಲದ ಅಡಿಯಲ್ಲಿ ಹೆಚ್ಚಳಕ್ಕೆ ಕಾರಣವಾಗಿದೆ. 2019-20 ನೇ ಸಾಲಿನಲ್ಲಿ ರಾಜ್ಯವು ಅಗತ್ಯಕ್ಕಿಂತ ಹೆಚ್ಚು ಸಾಲವನ್ನು ಪಡೆದುಕೊಂಡಿದೆ. ಮುಕ್ತ ಮಾರುಕಟ್ಟೆ ಸಾಲಗಳು ರಾಜ್ಯದ ಒಟ್ಟು ಹಣಕಾಸಿನ ಹೊಣೆಗಾರಿಕೆಯ ಶೇ.59 ರಷ್ಟಿದೆ. ಹೆಚ್ಚುತ್ತಿರುವ ಸಾಲವು ಆತಂಕಕ್ಕೆ ಕಾರಣವಾಗಿದೆ. ರಾಜ್ಯದ ತೆರಿಗೆ ಆದಾಯದಲ್ಲಿ ಇಳಿಕೆಯಾಗಿರುವ ಕಾರಣ ತೆರಿಗೆಯೇತರ ಬಳಕೆದಾರರ ಶುಲ್ಕಗಳನ್ನು ತರ್ಕಬದ್ಧಗೊಳಿಸಬೇಕು. ತೆರಿಗೆಯಲ್ಲದ ಆದಾಯಗಳ ಮರುಪಡೆಯುವಿಕೆ ಮತ್ತು ಬಳಕೆದಾರರ ಶುಲ್ಕಗಳ ಪರಿಷ್ಕರಣೆಯ ಪರಿಣಾಮಕಾರಿ ಜಾರಿಗಾಗಿ ಪ್ರಯತ್ನಗಳನ್ನು ಮಾಡಬೇಕಾಗಿದೆ ಎಂದು ಸಿಎಜಿ ತಿಳಿಸಿದೆ.

ವೈಯಕ್ತಿಕ ಠೇವಣಿ (ಪಿಡಿ) ಖಾತೆಗಳಲ್ಲಿ ದೊಡ್ಡ ಮೊತ್ತದ ಹಣವನ್ನು ಉಳಿಸಿಕೊಳ್ಳುವುದು, ನಿಷ್ಕ್ರಿಯ ವೈಯಕ್ತಿಕ ಠೇವಣಿ ಖಾತೆಗಳನ್ನು ಮುಚ್ಚದಿರುವುದು, ಖಾತೆಯಲ್ಲಿನ ಹಣವನ್ನು ಸಮನ್ವಯಗೊಳಿಸದಿರುವುದು ಶಾಸಕಬದ್ಧ ಹಣಕಾಸು ನಿಯಂತ್ರಣ ತತ್ವಗಳಿಗೆ ವಿರುದ್ಧವಾಗಿದೆ. ಸುಮಾರು 23 ಪಿಡಿ ಖಾತೆಗಳನ್ನು ರದ್ದುಗೊಳಿಸುವುದು ಒಳ್ಳೆಯದು. 2016-20 ರ ಅವಧಿಯಲ್ಲಿ 10 ಸರ್ಕಾರಿ ಕಂಪನಿಗಳು/ನಿಗಮಗಳು 2020ರ ಮಾರ್ಚ್ 31 ಕೊನೆಗೊಂಡ ವರ್ಷಕ್ಕೆ ಸರ್ಕಾರದ ಅನುದಾನದಲ್ಲಿ ಗಳಿಸಿದ ಬಡ್ಡಿಯನ್ನು (803.99 ಕೋಟಿ ರೂ.) ಹಣಕಾಸು ಇಲಾಖೆ ನೀಡಿರುವ ಸೂಚನೆಗಳಿಗೆ ವಿರುದ್ಧವಾಗಿ ಸರ್ಕಾರಿ ಖಾತೆಗೆ ಸಂದಾಯ ಮಾಡಿಲ್ಲ ಎಂದು ಹೇಳಿದೆ.

2019-20ರ ಅವಧಿಯಲ್ಲಿ ಖಜಾನೆಯಿಂದ ಪಡೆದ 2,109 ಸಂಕ್ಷಿಪ್ತ ಸಾದಿಲ್ವಾರು ಬಿಲ್‌ಗಳಲ್ಲಿ 426 ಬಿಲ್‌ಗಳು ಸಲ್ಲಿಕೆಯಾಗದೆ ಬಾಕಿ ಉಳಿದಿವೆ. 14 ಇಲಾಖೆಗಳು 25 ಲಕ್ಷ ರೂ. ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತದ ಅನುದಾನವನ್ನು ಬಿಡುಗಡೆ ಮಾಡಿರುವ ಸಂಸ್ಥೆಗಳಿಗೆ ಸಂಬಂಧಿಸಿದ ಮಾಹಿತಿಯನ್ನು ನೀಡಿಲ್ಲ ಎಂದು ಹೇಳಲಾಗಿದೆ.

ಇದನ್ನೂಓದಿ: ವಿಧಾನಸಭೆಯಲಿ 3ನೇ ದಿನ.. ಆಡಳಿತ-ಪ್ರತಿಪಕ್ಷಗಳ 'ತೈಲ' ವಾಗ್ಯುದ್ಧ.. ಸರ್ಕಾರಕ್ಕೆ ಮೈ'ಶುಗರ್‌'ತಂದ ಮೀಸಲು ಹೆಚ್ಚಳ..

For All Latest Updates

ABOUT THE AUTHOR

...view details