ಬೆಂಗಳೂರು : ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಮುಂದೆ ಸಮರ್ಥವಾಗಿ ವರದಿ ಸಲ್ಲಿಸುವಲ್ಲಿ ರಾಜ್ಯ ಸರ್ಕಾರಗಳು ವಿಫಲವಾಗಿದೆ. ರಾಜ್ಯ ನಾಯಕರಿಗೆ ಕಾಳಜಿ ಇಲ್ಲವೆಂದು ಕರ್ನಾಟಕ ರಕ್ಷಣ ವೇದಿಕೆ ರಾಜ್ಯಾಧ್ಯಕ್ಷ ಶಿವರಾಮೇಗೌಡ ಅವರು ಕಿಡಿಕಾರಿದ್ದಾರೆ.
ಗಡಿಭಾಗ ಆನೇಕಲ್ - ಅತ್ತಿಬೆಲೆಯಲ್ಲಿ ಅಂತಾರಾಜ್ಯ ಹೆದ್ದಾರಿ ತಡೆದು ಕರವೇ ಶಿವರಾಮೇಗೌಡ ಬಣ ಪ್ರತಿಭಟನೆ ನಡೆಸಿತು. ಈ ಸಂದರ್ಭದಲ್ಲಿ ಮಾತನಾಡಿದ ಶಿವರಾಮೇಗೌಡ ಅವರು, ಕಾವೇರಿ ಹೋರಾಟಕ್ಕೆ ಈ ರಾಜ್ಯದ ಪ್ರತಿಯೊಬ್ಬ ಕನ್ನಡಿಗನೂ ಬೆಂಬಲವನ್ನು ನೀಡುತ್ತಾನೆ. ರಾಜ್ಯದ ಎಲ್ಲಾ ಜಿಲ್ಲಾ ಹೆದ್ದಾರಿಗಳನ್ನು ತಡೆದು ಪ್ರತಿಭಟನೆ ಮಾಡುತ್ತೇವೆ. ಈ ಬಗ್ಗೆ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಮಾಹಿತಿ ರವಾನಿಸುತ್ತೇವೆ. ಅಲ್ಲದೆ, ಪ್ರಾಧಿಕಾರಕ್ಕೆ, ನ್ಯಾಯಾಂಗಕ್ಕೆ, ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಕನ್ನಡಿಗರ ಭಾವನೆಯನ್ನು ಅರ್ಥ ಮಾಡಿಸುವ ರೀತಿಯಲ್ಲಿ ನಾಳೆ ಕರ್ನಾಟಕ ಬಂದ್ ಮಾಡಿ ತಿಳಿಸುತ್ತೇವೆ.
ರಾಜ್ಯ ಸರ್ಕಾರಗಳು ಪ್ರತಿ ಬಾರಿ ಕಾವೇರಿ ನದಿ ನೀರು ಹಂಚಿಕೆ ನ್ಯಾಯಾಧಿಕರಣದ ಹಿಂದಿನ ದಿನ ಫ್ಲೈಟ್ ಹತ್ತಿ ಯುದ್ಧಕಾಲದಲ್ಲಿ ಶಸ್ತ್ರಾಭ್ಯಾಸಕ್ಕೆ ತೊಡಗಿ ಕರ್ನಾಟಕದ ಜನತೆ ಪಾಲಿಗೆ ತೊಡಕಾಗಿದ್ದಾರೆ. ಆದರೆ ಅದೇ ತೀರ್ಪಿನ ತಿಂಗಳ ಮುಂಚೆ ತಮಿಳುನಾಡಿನ ಪ್ರತಿನಿಧಿಗಳು ಸಮರ್ಥವಾಗಿ ವರದಿ ಮಂಡಿಸಿ ನೀರು ಪಡೆಯುವಲ್ಲಿ ಗೆಲುವು ಸಾಧಿಸಿದ್ದಾರೆ. ರಾಜ್ಯಸಭೆಯಲ್ಲಿ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ಕಾವೇರಿ ವಿಚಾರವಾಗಿ ಮಾತನಾಡಿದ್ದಾರು. ಅದರೇ, ನಮ್ಮ ಸಂಸದರು ತುಟ್ಟಿ ಬಿಚ್ಚಿಲ್ಲ ಎಂದು ವಾಗ್ದಾಳಿ ನಡೆಸಿದರು.
ಮೇಕೆದಾಟು ಪಾದಯಾತ್ರೆ ಒಂದು ರಾಜಕೀಯ ಪ್ರೇರಿತ ನಾಟಕವಲ್ಲದೆ ಮತ್ತೇನೂ ಅಲ್ಲ. ಇದರ ಹಿಂದೆ ಅಧಿಕಾರ ಪಡೆಯುವ ಉದ್ದೇಶವಷ್ಟೇ ಅಡಗಿದೆ. ಹೀಗಾಗಿ ರಾಜ್ಯದಲ್ಲಿ ಕಾವೇರಿ, ಜನತೆಯ ಅಸ್ಮಿತೆ ಎನ್ನುವುದನ್ನು ಪ್ರತಿ ಪಕ್ಷಗಳೂ ಮರೆತಿವೆ. ರಾಕೇಶ್ ಸಿಂಗ್ ಎಂಬುವವರಿಗೆ ಐದು ಇಲಾಖೆಗಳ ಉಸ್ತುವಾರಿ ಕೊಟ್ಟು ಪ್ರಾಧಿಕಾರದ ಅಧ್ಯಕ್ಷನನ್ನಾಗಿಸಿದೆ ಸರ್ಕಾರ. ಅವರು ಯಾವ ಕಡೆ ಹೇಗೆ ಕೆಲಸ ಮಾಡಬೇಕು. ಹೀಗಾಗಿ ಬೇಜವಾಬ್ದಾರಿತನದಿಂದ ಸರ್ಕಾರಗಳು ನಮ್ಮನ್ನಾಳುತ್ತಿವೆ ಎಂದು ಆರೋಪಿಸಿದರು.