ಬೆಂಗಳೂರು:ಸಿದ್ದರಾಮಯ್ಯನವರ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡು ತಿಂಗಳುಗಳಲ್ಲಿಯೇ ದಲಿತ ವಿರೋಧಿ ಎಂಬುದನ್ನು ಸಾಬೀತು ಪಡಿಸಲು ಹೊರಟಿದೆ. ದಲಿತ ವರ್ಗದ ಶ್ರೇಯೋಭಿವೃದ್ಧಿಗಾಗಿ ಮೀಸಲಿಟ್ಟಿರುವ ಎಸ್.ಸಿ - ಎಸ್.ಟಿ / ಟಿ.ಎಸ್.ಪಿ ಯೋಜನೆಯ 11,130 ಕೋಟಿ ರೂಪಾಯಿಗಳನ್ನು ಗ್ಯಾರಂಟಿಗಳಿಗಾಗಿ ವಿನಿಯೋಗಿಸುತ್ತಿರುವುದು ದಲಿತ ವರ್ಗಕ್ಕೆ ಮಾಡಿದ ಮಹಾ ಅನ್ಯಾಯ ಎಂದು ಆಮ್ ಆದ್ಮಿ ಪಕ್ಷದ ಎಸ್ಸಿ, ಎಸ್ಟಿ ವಿಭಾಗದ ರಾಜ್ಯಾಧ್ಯಕ್ಷ ಪುರುಷೋತ್ತಮ್ ಮಾಧ್ಯಮಗೋಷ್ಟಿ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೋರಾಟದ ಹಾದಿಯನ್ನು ತುಳಿಯುತ್ತೇವೆ : ಇಂದು ರಾಜ್ಯ ಎಎಪಿ ಕಚೇರಿಯಲ್ಲಿ ಮಾಧ್ಯಮಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ದಲಿತರ ಹಣವನ್ನು ದುರ್ಬಳಕೆ ಮಾಡಿಕೊಂಡು ಬಂದಿದ್ದ ಈ ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಪಕ್ಷಕ್ಕೆ ಮತನೀಡಿದ ದಲಿತ ವರ್ಗ ಇಂದು ಮಹಾ ಮೋಸಕ್ಕೆ ಒಳಗಾಗುತ್ತಿರುವುದು ದುರಂತ. 14 ಬಾರಿ ಬಜೆಟ್ ಮಂಡಿಸಿರುವ ಮುಖ್ಯಮಂತ್ರಿಗಳು, ಈ ಬಾರಿ 4079 ಕೋಟಿ ರೂಪಾಯಿಗಳನ್ನು ಹೆಚ್ಚುವರಿಯಾಗಿ ಈ ಯೋಜನೆಯಲ್ಲಿ ಇಟ್ಟಿದ್ದೇವೆಂದು ತಮ್ಮ ಬಜೆಟ್ ಭಾಷಣದಲ್ಲಿ ಹೇಳುತ್ತ ಚಪ್ಪಾಳೆ ಗಿಟ್ಟಿಸಿಕೊಂಡಿದ್ದರು. ಇದೀಗ ದಲಿತ ವರ್ಗದಿಂದ ಛೀಮಾರಿ ಹಾಕಿಸಿಕೊಳ್ಳುವ ಪರಿಸ್ಥಿತಿ ಬಂದಿದೆ. ಯಾವುದೇ ಕಾರಣಕ್ಕೂ ದಲಿತ ವರ್ಗಕ್ಕೆ ಈ ರೀತಿ ಅನ್ಯಾಯವಾಗುವುದನ್ನು ನಾವು ಸಹಿಸುವುದಿಲ್ಲ. ಹೋರಾಟದ ಹಾದಿಯನ್ನು ತುಳಿಯುತ್ತೇವೆ ಎಂದು ಎಚ್ಚರಿಸಿದರು.
ಫ್ರೀಡಂ ಪಾರ್ಕಿನಲ್ಲಿ ಬೃಹತ್ ಪ್ರತಿಭಟನೆ: ಈ ಸಂದರ್ಭದಲ್ಲಿ ಮಾತನಾಡಿದ ಪಕ್ಷದ ಉಪಾಧ್ಯಕ್ಷ ಸುರೇಶ್ ರಾಥೋಡ್, ಹೇಳುವುದು ಒಂದು, ಮಾಡುವುದು ಇನ್ನೊಂದು ಎನ್ನುವುದು ಕಾಂಗ್ರೆಸ್ ಸರ್ಕಾರದ ಪರಿಪಾಠವಾಗಿದೆ. ಈ ಬಗ್ಗೆ ರಾಜ್ಯವ್ಯಾಪಿ ಹೋರಾಟವನ್ನು ರೂಪಿಸುತ್ತೇವೆ. ಇದೇ ತಿಂಗಳ ಆಗಸ್ಟ್ 5 ರಂದು ನಗರದ ಫ್ರೀಡಂ ಪಾರ್ಕಿನಲ್ಲಿ ಬೃಹತ್ ಪ್ರತಿಭಟನೆ ನಡೆಸುವ ಮೂಲಕ ಸರ್ಕಾರದ ದಲಿತ ನೀತಿಯ ವಿರುದ್ಧದ ಬಗ್ಗೆ ಹೋರಾಟ ಮಾಡಲಿದ್ದೇವೆ. ನಮ್ಮ ಪ್ರತಿಭಟನೆಗೆ ಅನೇಕ ದಲಿತ ಸಂಘಟನೆಗಳು ಬೆಂಬಲ ಸೂಚಿಸಿವೆ ಎಂದು ತಿಳಿಸಿದರು. ಈ ವೇಳೆ ಪಕ್ಷದ ಮುಖಂಡ ಗಂಗಬೈಲಪ್ಪ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.