ಬೆಂಗಳೂರು: ಹೆಚ್ಚುವರಿಯಾಗಿ 22 ಬರಪೀಡಿತ ತಾಲೂಕುಗಳನ್ನು ರಾಜ್ಯ ಸರ್ಕಾರ ಘೋಷಣೆ ಮಾಡಿದೆ. ರಾಜ್ಯದ 31 ಜಿಲ್ಲೆಗಳ 236 ತಾಲೂಕುಗಳ ಪೈಕಿ 216 ತಾಲೂಕುಗಳು ಬರಪೀಡಿತವಾಗಿವೆ. 189 ತೀವ್ರ ಬರಪೀಡಿತ ತಾಲೂಕು, 17 ಸಾಧಾರಣ ಬರಪೀಡಿತ ತಾಲೂಕುಗಳಾಗಿವೆ. ಕೇಂದ್ರ ಸರ್ಕಾರದ ಬರ ಘೋಷಣೆ ಮಾರ್ಗಸೂಚಿಯಲ್ಲಿನ ಮಾನದಂಡಗಳನ್ವಯ ಜಿಲ್ಲಾಧಿಕಾರಿಗಳಿಗೆ ನೀಡಿರುವ ಬೆಳೆ ಹಾನಿ ಸಮೀಕ್ಷೆಯ ವರದಿ ಆಧರಿಸಿ 216 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ.
ಹೆಚ್ಚುವರಿ 22 ಬರಪೀಡಿತ ತಾಲೂಕುಗಳ ಪೈಕಿ 17 ತಾಲೂಕು ತೀವ್ರ ಬರಪೀಡಿತವಾಗಿದ್ದು, 4 ತಾಲೂಕು ಸಾಧಾರಣ ಬರಪೀಡಿತವಾಗಿವೆ. ಈ ಹಿಂದೆ ಘೋಷಣೆ ಮಾಡಿದ್ದ 195 ತಾಲೂಕುಗಳ ಪೈಕಿ 161 ತಾಲೂಕುಗಳು ಬರಪೀಡಿತವಾಗಿದ್ದವು. ಸಾಧಾರಣ ಬರಪೀಡಿತವೆಂದು ಗುರುತಿಸಲಾಗಿದ್ದ 34 ತಾಲೂಕುಗಳ ಪೈಕಿ 22 ತಾಲೂಕುಗಳ ಬಗ್ಗೆ ಜಿಲ್ಲಾಧಿಕಾರಿಗಳು ನೀಡಿರುವ ವರದಿ ಆಧರಿಸಿ 11 ತಾಲೂಕುಗಳು ತೀವ್ರ ಬರ ಹಾಗೂ 11 ಸಾಧಾರಣ ಬರ ಎಂದು ಘೋಷಿಸುವ ಅರ್ಹತೆ ಪಡೆದಿದೆ ಎಂದು ಸರ್ಕಾರ ಹೊರಡಿಸಿರುವ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಸೆಪ್ಟೆಂಬರ್ ಅಂತ್ಯದವರಿಗೆ ಬರ ಪರಿಸ್ಥಿತಿ ಕಂಡು ಬಂದ 28 ತಾಲೂಕುಗಳ ಪೈಕಿ 18 ತಾಲೂಕುಗಳನ್ನು ತೀವ್ರ ಬರಪೀಡಿತ ಹಾಗೂ 4 ಸಾಧಾರಣ ಬರಪೀಡಿತ ಎಂದು ಗುರುತಿಸಲಾಗಿದೆ. ಹೆಚ್ಚುವರಿ 22 ಬರಪೀಡಿತ ತಾಲೂಕುಗಳ ಪೈಕಿ ಬೆಳಗಾವಿ, ಖಾನಾಪುರ, ಚಾಮರಾಜನಗರ, ಅಳ್ನಾವರ, ಅಣ್ಣೀಗೇರಿ, ಕಲಘಟಗಿ, ಮುಂಡರಗಿ, ಆಲೂರು, ಅರಸೀಕೆರೆ, ಹಾಸನ, ಬ್ಯಾಡಗಿ, ಹಾನಗಲ್, ಶಿಗ್ಗಾವಿ, ಪೊನ್ನಂಪೇಟೆ, ಕೆಆರ್ ನಗರ, ಹೆಬ್ರಿ ಹಾಗೂ ದಾಂಡೇಲಿ ತೀವ್ರ ಬರಪೀಡಿತ ತಾಲೂಕುಗಳೆಂದು ಘೋಷಿಸಲಾಗಿದೆ.