ಬೆಂಗಳೂರು:ಕೋವಿಡ್ ಬಗ್ಗೆ ಸರ್ಕಾರ ಉಪೇಕ್ಷೆ ಮಾಡಬಾರದು. ಮಂಗಳವಾರ ಒಂದೇ ದಿನ 41 ಸಾವಿರ ಕೇಸ್ಗಳು ಬಂದಿವೆ. ಇದು ಎಚ್ಚರಿಕೆಯ ಗಂಟೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.
ಪಕ್ಷದ ಕಚೇರಿ ಜೆ ಪಿ ಭವನದಲ್ಲಿಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕೊರೊನಾ ಸೋಂಕಿನ ಪ್ರಮಾಣವನ್ನು ತಡೆಯಲೇಬೇಕು. ಜನರ ಪರಿಸ್ಥಿತಿ ಮತ್ತು ಅವರ ಜೀವನ ನೋಡಿಕೊಂಡು ಸರ್ಕಾರ ಕ್ರಮ ವಹಿಸಬೇಕು. ವೀಕೆಂಡ್ ಹಾಗೂ ನೈಟ್ ಕರ್ಫ್ಯೂ ವಿಚಾರದ ಬಗ್ಗೆ ಸರ್ಕಾರ ನಡೆಸುವ ಪಕ್ಷದಲ್ಲೇ ಸಹಮತ ಇಲ್ಲ. ಅವರೇ ಗೊಂದಲದಲ್ಲಿದ್ದಾರೆ. ಹೀಗಿರುವಾಗ ಪರಿಸ್ಥಿತಿ ಹೇಗೆ ನಿಭಾಯಿಸುತ್ತಾರೆ. ನೈಟ್ ಕರ್ಫ್ಯೂ ಬಗ್ಗೆ ಬಿಜೆಪಿಯ ಪ್ರಮುಖರೆ ವಿರೋಧ ಮಾಡ್ತಾ ಇದ್ದಾರೆ ಎಂದು ವ್ಯಂಗ್ಯವಾಡಿದರು.
ಸರ್ಕಾರ ದಾರಿ ತಪ್ಪಿಸುತ್ತಿದೆ:
ದೇಶದಲ್ಲಿ ಹಸಿವಿನಿಂದ ಯಾರೂ ಸತ್ತಿಲ್ಲ ಎಂದು ಕೇಂದ್ರ ಸರ್ಕಾರ ಕೋರ್ಟ್ ಮುಂದೆ ಹೇಳಿದೆ. ನಮ್ಮಲ್ಲಿ ಎರಡು ಹೊತ್ತಿನ ಊಟ ಇಲ್ಲದೆ ಸಾಯುವವರಿದ್ದಾರೆ. ಜನ ಎಷ್ಟು ಕಷ್ಟದಲ್ಲಿದ್ದಾರೆ ಎನ್ನುವುದನ್ನು ಸರ್ಕಾರ ನೋಡಬೇಕು. ಸೋಂಕಿನ ಕಾರಣದಿಂದ ಜನ ಬದುಕಿಗಾಗಿ ಹೋರಾಟ ನಡೆಸುತ್ತಿದ್ದಾರೆ. ನಿಜ ಸ್ಥಿತಿ ಹೀಗಿರುವಾಗ ದಾರಿ ತಪ್ಪಿಸುವ ಕೆಲಸ ಆಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜನರಿಗೆ ಸಂಕಷ್ಟ ಕಾಲದಲ್ಲಿ ಸಹಾಯಕ್ಕೆ ನಿಲ್ಲುವುದು ಎಲ್ಲಾ ಸರ್ಕಾರಗಳ ಜವಾಬ್ದಾರಿ. ಸಣ್ಣ ರೈತರಿಗೆ ಮಾರಾಟ ವ್ಯವಸ್ಥೆ, ಬೀದಿಬದಿ ವ್ಯಾಪಾರಸ್ಥರಿಗೆ ಆರ್ಥಿಕ ನೆರವು ನೀಡಬೇಕು. ಜನರ ಕಷ್ಟಕ್ಕೆ ಮಿಡಿಯದಿದ್ದರೆ ಯಾವ ಕಾರಣಕ್ಕೆ ಸರ್ಕಾರ ಇರಬೇಕು ಎಂದು ಪ್ರಶ್ನಿಸಿದರು.
ಒಂದೊಡೆ ಸೋಂಕನ್ನು ನಿಯಂತ್ರಣ ಮಾಡುವುದರ ಜೊತೆಗೆ ಜನರ ಸಮಸ್ಯೆ ನಿವಾರಣೆಗೆ ಆದ್ಯತೆ ಕೊಡಬೇಕು. ಜೀವ ಉಳಿಯಬೇಕು, ಜೀವನವೂ ನಡೆಯಬೇಕು. ಸರ್ಕಾರ ಇದನ್ನು ಅರ್ಥ ಮಾಡಿಕೊಳ್ಳಬೇಕು. ಸಣ್ಣ-ಸಣ್ಣ ಕೆಲಸ ಮಾಡಿ ಜನರು ಜೀವನ ಮಾಡುತ್ತಿದ್ದಾರೆ. ಕರ್ಫ್ಯೂನಿಂದ ಅವರಿಗೆ ತೊಂದರೆ ಆಗುತ್ತದೆ ಎಂಬುದನ್ನು ಸರ್ಕಾರ ಗಮನಿಸಬೇಕು. ತಜ್ಞರ ವರದಿ ಹಾಗೂ ಪರ-ವಿರೋಧಗಳನ್ನು ನೋಡಬೇಕಾಗುತ್ತದೆ. ಇದನ್ನೆಲ್ಲ ತಿಳಿದುಕೊಂಡು ರಾಜ್ಯ ಸರ್ಕಾರ ತೀರ್ಮಾನ ಮಾಡಬೇಕು ಎಂದು ಹೇಳಿದರು.