ಬೆಂಗಳೂರು:ಕೊರೊನಾ ವೈರಸ್ ವಿಚಾರದಲ್ಲಿ ರಾಜ್ಯದ ಜನತೆ 45 ದಿನಗಳಿಂದಲೂ ಸರ್ಕಾರಕ್ಕೆ ಸಹಕಾರ ನೀಡುತ್ತಾ ಬಂದಿದ್ದಾರೆ. ಆದರೆ, ಈ ವಿಚಾರದಲ್ಲಿ ಸರ್ಕಾರದ ಸಾಧನೆ ಶೂನ್ಯ ಎಂದು ಮಾಜಿ ಸಚಿವ ಯು.ಟಿ.ಖಾದರ್ ಅಭಿಪ್ರಾಯಪಟ್ಟಿದ್ದಾರೆ.
ನಗರದ ಕ್ವೀನ್ಸ್ ರಸ್ತೆಯ ಕಾಂಗ್ರೆಸ್ ಭವನದಲ್ಲಿ ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಜೊತೆ ಜಂಟಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಅಂದು ಮಾಡಿದ ಚರ್ಚೆಯನ್ನೇ ಇಂದಿಗೂ ಮಾಡುತ್ತಿದ್ದೇವೆ. ರೋಗ ನಿಯಂತ್ರಣ ವಿಚಾರದಲ್ಲಿ ಸ್ಪಷ್ಟತೆ, ನಿಖರತೆ ಇಲ್ಲವಾಗಿದೆ. ರೋಗ ಹೇಗೆ ವ್ಯಾಪಿಸಿದೆ, ಸಮುದಾಯವನ್ನು ತಲುಪಿದೆಯಾ? ಇಲ್ಲವಾ? ಅನ್ನುವುದನ್ನು ಐಸಿಎಂಆರ್ ವರದಿ ಮೂಲಕ ತಿಳಿಸಬೇಕು. ಈವರೆಗೂ ರಾಜ್ಯ ಸರ್ಕಾರಕ್ಕೆ ವರದಿ ಕೊಟ್ಟಿಲ್ಲ. ಈ ವಿಚಾರವಾಗಿ ರಾಜ್ಯದ ಅಧಿಕಾರಿಗಳು ಐಸಿಎಂಆರ್‌ಗೆ ಪತ್ರ ಕೂಡ ಬರೆದಿದ್ದಾರೆ. ಈ ವಿಚಾರದಲ್ಲಿ ಸರ್ಕಾರಕ್ಕೆ ವರದಿ ಬಹಿರಂಗ ಪಡಿಸದಿದ್ದಲ್ಲಿ, ಕೋರ್ಟ್ ಮುಖೇನ ಮುಂದುವರಿಯಲಾಗುವುದು ಎಂದರು.
ಅನ್ಯ ರಾಜ್ಯಗಳಲ್ಲಿ ಸಿಲುಕಿರುವ ಕನ್ನಡಿಗರನ್ನು ಬಸ್ನಲ್ಲಿ ಕರೆತರುವ ಕೆಲಸ ಆಗಬೇಕು. ವಿದೇಶದಿಂದ ಕನ್ನಡಿಗರನ್ನು ಕರೆತರುವ ಕೆಲಸ ಆಗ್ತಿದೆ. ಕರಾವಳಿ ಭಾಗದ ಜನರೂ ವಿದೇಶದಲ್ಲಿ ಇದ್ದಾರೆ. ಬೆಂಗಳೂರು ಹಾಗೂ ಮಂಗಳೂರಿಗೆ ವಿಮಾನದ ಮೂಲಕ ಕರೆತರುವ ವ್ಯವಸ್ಥೆ ಮಾಡಬೇಕು. ಈವರೆಗೆ ಎಷ್ಟು ಜನರನ್ನು ಕ್ವಾರೆಂಟೈನ್ ಮಾಡಿರುವುದಾಗಿ ಪಟ್ಟಿ ಕೊಟ್ಟಿಲ್ಲ. ಲಾಕ್ಡೌನ್ ವಿಚಾರದಲ್ಲಿ ಸರ್ಕಾರ ಸೂಕ್ತ ಪ್ಲ್ಯಾನ್ ಮಾಡಿಲ್ಲ. ಕ್ರಿಯಾ ಯೋಜನೆ ರೂಪಿಸುವಲ್ಲಿಯೂ ಎಡವಿದೆ ಎಂದರು.