ಬೆಂಗಳೂರು: ಲಾಕ್ಡೌನ್ ಹಿನ್ನೆಲೆ ರಾಜ್ಯ ಆರ್ಥಿಕವಾಗಿ ಸಂಕಷ್ಟಕ್ಕೊಳಗಾಗಿದೆ. ಇದಕ್ಕಾಗಿ ಸರ್ಕಾರ ದುಂದು ವೆಚ್ಚ ಕಡಿತದ ಮೊರೆ ಹೋಗಿದೆ. ಅಗತ್ಯ ವೆಚ್ಚಗಳು ಬಿಟ್ಟು ಬೇರೆ ಯಾವುದೇ ಖರ್ಚು ವೆಚ್ಚಗಳನ್ನು ಮಾಡದಂತೆ ಈಗಾಗಲೇ ಆರ್ಥಿಕ ಇಲಾಖೆ ಎಲ್ಲಾ ವಿಭಾಗಗಳಿಗೆ ಸುತ್ತೋಲೆ ಹೊರಡಿಸಿದೆ.
ಇದರ ಅಂಗವಾಗಿನೇ ಕೇಂದ್ರ ಸರ್ಕಾರದ ಮಾದರಿಯಲ್ಲೇ ರಾಜ್ಯ ಸರ್ಕಾರ ತನ್ನ ನೌಕರರ ತುಟ್ಟಿ ಭತ್ಯೆಯನ್ನು (ಡಿಎ) 2021ರ ಜುಲೈ ವರೆಗೆ ತಡೆ ಹಿಡಿದಿದೆ. ಇದರ ಜೊತೆಗೆ ಸರ್ಕಾರಿ ನೌಕರರ ಗಳಿಕೆ ರಜೆಗೂ ಕತ್ತರಿ ಹಾಕಿದೆ. ಗಳಿಕೆ ರಜೆಯನ್ನು ಸಂಬಳವಾಗಿ ಪರಿವರ್ತಿಸುವ ಅವಕಾಶವನ್ನು ರದ್ದುಪಡಿಸಿದೆ.
ಸರ್ಕಾರಿ ನೌಕರರ ಡಿಎಗೆ ತಡೆ ನೀಡಿರುವುದರ ಜೊತೆಗೆ ಕೆಲ ಇಲಾಖೆಗಳ ವಿಲೀನದ ಬಗ್ಗೆನೂ ಸರ್ಕಾರ ಚಿಂತನೆ ನಡೆಸಿದೆ. ಆ ಮೂಲಕ ಸರ್ಕಾರದ ಮೇಲಾಗುತ್ತಿರುವ ಹೊರೆಯನ್ನು ಕಡಿಮೆಗೊಳಿಸಲು ಮುಂದಾಗಿದೆ. ಆದರೆ ಸರ್ಕಾರದ ಈ ನಡೆಗೆ ಸರ್ಕಾರಿ ನೌಕರರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಲಾಕ್ಡೌನ್ ಹಿನ್ನೆಲೆ ಜನರ ಸಂಕಷ್ಟ, ಸರ್ಕಾರದ ಆರ್ಥಿಕ ಸಂಕಷ್ಟ ನೋಡಿ ಸರ್ಕಾರದ ಕಠಿಣ ನಿರ್ಧಾರಗಳನ್ನು ನೌಕರರು ಅರೆ ಮನಸ್ಸಿನಿಂದ ಒಪ್ಪಿಕೊಂಡಿದ್ದಾರೆ. ಈಗ ಆರ್ಥಿಕ ಚಟುವಟಿಕೆ ನಿಧಾನವಾಗಿ ಪ್ರಾರಂಭವಾಗಿರುವ ಹಿನ್ನೆಲೆ ಇದೀಗ ಸರ್ಕಾರಿ ನೌಕರರು ತಡೆ ಹಿಡಿದಿರುವ ಡಿಎ ಅನ್ನು ಆದಷ್ಟು ಬೇಗ ಬಿಡುಗಡೆ ಮಾಡುವಂತೆ ಸರ್ಕಾರವನ್ನು ಆಗ್ರಹಿಸಲು ಮುಂದಾಗಿದೆ.
ಡಿಎ ತಡೆ ಹಿಡಿದಿರುವುದಕ್ಕೆ ಕೇಂದ್ರ ಸರ್ಕಾರದತ್ತ ಕೈ ತೋರಿಸಲಾಗುತ್ತಿದೆ. ಆದರೆ ಕೇಂದ್ರ ಸರ್ಕಾರ ನೌಕರರ ವೇತನಕ್ಕೂ ನಮಗೂ ಭಾರಿ ವ್ಯತ್ಯಾಸ ಇದೆ. ನಾವು ದೇಶದಲ್ಲೇ ಅತಿ ಕಡಿಮೆ ವೇತನ ಪಡೆಯುತ್ತಿದ್ದೇವೆ. ಹೀಗಾಗಿ ಡಿಎ ತಡೆಹಿಡಿದು ಅನ್ಯಾಯ ಮಾಡಬಾರದು. ಅದನ್ನು ಮುಂದಿನ ವರ್ಷ ಜೂನ್ ತಿಂಗಳು ಒಟ್ಟಿಗೆ ಬಿಡುಗಡೆ ಮಾಡಬೇಕು. ಜೊತೆಗೂ ವೇತನವನ್ನೂ ಕಡಿತಗೊಳಿಸಬಾರದು ಎಂದು ಸಚಿವಾಲಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪಿ.ಗುರುಮೂರ್ತಿ ಆಗ್ರಹಿಸಿದ್ದಾರೆ.