ಕರ್ನಾಟಕ

karnataka

ರಾಜ್ಯ ಸರ್ಕಾರ ಜಿಎಸ್‌ಟಿ ಸೋರಿಕೆ ತಡೆಯಲು ಅಗತ್ಯ ಕ್ರಮ ಕೈಗೊಳ್ಳಬೇಕು: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ

By

Published : Jul 14, 2023, 7:57 PM IST

ಕರ್ನಾಟಕ ಉತ್ಪಾದನಾ ರಾಜ್ಯ. ಇಲ್ಲಿ ತೆರಿಗೆ ಸಂಗ್ರಹ ಹೆಚ್ಚಳವಾದಷ್ಟು ರಾಜ್ಯಕ್ಕೆ ಹೆಚ್ಚು ಅನುಕೂಲವಾಗುತ್ತದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದಾರೆ.

ಮಾಜಿ ಸಿಎಂ ಬಸವರಾಜ ಬೊಮ್ಮಾಯಿ
ಮಾಜಿ ಸಿಎಂ ಬಸವರಾಜ ಬೊಮ್ಮಾಯಿ

ಮಾಜಿ ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು :ರಾಜ್ಯ ಸರ್ಕಾರ ಜಿಎಸ್‌ಟಿ ಸೋರಿಕೆ ತಡೆಯಲು ಅಗತ್ಯ ಕ್ರಮ ಕೈಗೊಳ್ಳಬೇಕು. ತೆರಿಗೆ ರಿಟರ್ನ್ಸ್ ಸಲ್ಲಿಸಲು‌ ಮೂರು ವರ್ಷದ ಅವಧಿ ಕಲ್ಪಿಸುವುದು ದುರುಪಯೋಗಕ್ಕೆ ಕಾರಣವಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ವಿಧಾನಸಭೆಯಲ್ಲಿ ಇಂದು ವಿಧೇಯಕಗಳ ಮೇಲಿನ ಪರ್ಯಾಲೋಚನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸರಕು ಮತ್ತು ಸೇವೆಗಳ ತೆರಿಗೆ ಇಡೀ ರಾಷ್ಟ್ರದಲ್ಲಿ ಏಕ ರೂಪವಾಗಿ ಇರಬೇಕೆಂದು 2017ರಲ್ಲಿ ಸಂವಿಧಾ‌ನ ತಿದ್ದುಪಡಿ ಮಾಡಲಾಯಿತು. ಕೆಲವು ರಾಜ್ಯಗಳು ಉತ್ಪಾದನಾ ರಾಜ್ಯಗಳಾಗಿವೆ. ಕೆಲವು ರಾಜ್ಯಗಳು ಬಳಕೆ ರಾಜ್ಯಗಳಾಗಿವೆ. ಹಲವಾರು ರಾಜ್ಯಗಳ ಸಲಹೆ ಪಡೆದು ಜಿಎಸ್​ಟಿಯನ್ನು ಬದಲಾವಣೆ ಮಾಡುತ್ತಾ ಬಂದಿದ್ದೇವೆ. ಜಿಎಸ್​ಟಿ ರೆಜಿಸ್ಟ್ರೇಷನ್ ಮಾಡುವುದೇ ಬಹಳ ಕಷ್ಟವಾಗುತ್ತಿತ್ತು. ಅದನ್ನು ಸರಳೀಕರಣ ಮಾಡಲು ತಿದ್ದುಪಡಿ ತಂದಿರುವುದು ಸ್ವಾಗತಾರ್ಹ ಎಂದರು.

ಸಣ್ಣ ವ್ಯಾಪಾರಸ್ಥರಿಗೆ ಜಿಎಸ್​ಟಿಯಿಂದ ಹೊರಗಿಡಲಾಗಿದೆ: ರಿಟರ್ನ್ಸ್ ಫೈಲ್ ಮಾಡುವಾಗ ಸರ್ವರ್ ಡೌನ್ ಆಗಿ ಸಮಸ್ಯೆಯಾಗುತ್ತಿತ್ತು. ಕರ್ನಾಟಕ ಉತ್ಪಾದನಾ ರಾಜ್ಯ. ಇಲ್ಲಿ ತೆರಿಗೆ ಸಂಗ್ರಹ ಹೆಚ್ಚಳವಾದಷ್ಟು ರಾಜ್ಯಕ್ಕೆ ಹೆಚ್ಚು ಅನುಕೂಲವಾಗುತ್ತದೆ. ಯಾರಿಗೆ ಜಿಎಸ್​ಟಿ ಬಗ್ಗೆ‌ ಮಾಹಿತಿ ಇದೆ. ಅವರು ಜಿಎಸ್​ಟಿ ನೋಂದಣಿ ಮಾಡುತ್ತಾರೆ. ಬಹುತೇಕ ವ್ಯವಹಾರಗಳು ಹಣಕಾಸು ಚಲಾವಣೆಯ ಮೂಲಕ ಆಗುತ್ತವೆ. ಬಹಳಷ್ಟು ವ್ಯವಹಾರ ಅಧಿಕೃತವಾಗಿಯೇ ಆಗುವುದಿಲ್ಲ. ಸಣ್ಣ ವ್ಯಾಪಾರಸ್ಥರಿಗೆ ಜಿಎಸ್​ಟಿಯಿಂದ ಹೊರಗಿಡಲಾಗಿದೆ. ಆದರೆ, ಅವರನ್ನು ರೆಜಿಸ್ಟ್ರೆಶನ್​ನಿಂದ ಹೊರಗಿಡುವುದು ಸರಿಯಲ್ಲ ಹಾಗೂ ರಿಟರ್ನ್ಸ್ ಸಲ್ಲಿಸಲು, ಜಿಎಸ್​ಟಿ ಒಮ್ಮೆಲೆ‌ ಕಟ್ಟಲು ಮೂರು ವರ್ಷ ಅವಕಾಶ ಕಲ್ಪಿಸಿರುವುದು ಹೆಚ್ಚಿನ ಸಮಯ ನೀಡಿದಂತಾಗುತ್ತದೆ. ಅದನ್ನು ಕಡಿಮೆ ಮಾಡುವಂತೆ ಸಲಹೆ ನೀಡಿದರು.

ತೆರಿಗೆ ವಂಚನೆ ಮಾಡುವ ಪ್ರಕರಣಗಳು ಕರ್ನಾಟಕದಲ್ಲಿ ಸಾಕಷ್ಟಿವೆ. ಅದನ್ನು ನಿಯಂತ್ರಿಸಲು ಕಾನೂನಾತ್ಮಕ ಕ್ರಮದ ಬಗ್ಗೆ ಪ್ರಸ್ತಾಪ ಇಲ್ಲ. ಮೂರು ವರ್ಷಗಳವರೆಗೆ ದಾಖಲೆಗಳನ್ನು ಕಾಯ್ದಿಟ್ಟುಕೊಳ್ಳುವುದು ಕಷ್ಟ. ಮೂರು ವರ್ಷ ಸುದೀರ್ಘ ಅವಧಿಯಾಯಿತು. ಈ ಬಗ್ಗೆ‌ ಪರಿಶೀಲಿಸಬೇಕು ಎಂದು ಹೇಳಿದರು.

ಈ ಕಾನೂನಿನಲ್ಲಿ ಇನ್ನಷ್ಟು ಬದಲಾವಣೆ ತರುವ ಅಗತ್ಯ ಇದೆ: ಕೇಂದ್ರ ಸರ್ಕಾರ ಮಾದರಿಯಲ್ಲಿ ಅಫಿಲಿಯೇಟ್ ಟ್ರಿಬ್ಯುನಲ್ ಮಾಡಿರುವುದು ಸರಿ ಇದೆ. ಈ ಕಾಮರ್ಸ್​ಗಳ ಮೇಲೆ ಗಮನ ಇಡುವ ಅಗತ್ಯವಿದೆ. ಇ ಕಾಮರ್ಸ್ ಕೂಡ ಸಮಸ್ಯೆ ಇದೆ.‌ ಇ ಕಾಮರ್ಸ್ ಕಚೇರಿ ನಗರದಲ್ಲಿ ಇರುತ್ತದೆ. ಅದರ ಕಾರ್ಯ ಚಟುವಟಿಕೆಗಳು ಬೇರೆ ಬೇರೆ ಕಡೆ ಇರುತ್ತದೆ. ನಮ್ಮ ರಾಜ್ಯದ ಅಧಿಕಾರಿಗಳು ಉತ್ತಮ ಕೆಲಸ ಮಾಡಿದ್ದಾರೆ. ಉತ್ತರ ಭಾರತದ ರಾಜ್ಯಗಳಿಗೆ ಅಡಿಕೆ ದೊಡ್ಡ ಪ್ರಮಾಣದಲ್ಲೇ ಹೋಗುತ್ತಿದೆ. ನೋಂದಣಿ ಇಲ್ಲದೇ ವ್ಯವಹಾರ ನಡೆಸಿದರೆ ದೊಡ್ಡ ಸಮಸ್ಯೆಯಾಗುತ್ತದೆ. ದೊಡ್ಡ ಡೀಲರ್ಸ್​ಗಳು ಸಣ್ಣ ವ್ಯವಹಾರಸ್ಥರನ್ನು ಇಟ್ಟುಕೊಂಡೇ ವ್ಯವಹಾರ ನಡೆಸುತ್ತಾರೆ. ಈ ವ್ಯವಸ್ಥೆಯಲ್ಲಿ ಇನ್ನಷ್ಟು ದಕ್ಷತೆ ಬರಬೇಕಾದರೆ ಈ ಕಾನೂನಿನಲ್ಲಿ ಇನ್ನಷ್ಟು ಬದಲಾವಣೆ ತರುವ ಅಗತ್ಯ ಇದೆ ಎಂದು ಹೇಳಿದರು.

ಟಿ ಬಿ ಜಯಚಂದ್ರ ಸದನಕ್ಕೆ ಹಿರಿಯರು : ರಾಜ್ಯ ಸರ್ಕಾರದ ದೆಹಲಿ ಪ್ರತಿನಿಧಿ ಟಿ ಬಿ ಜಯಚಂದ್ರ ವಿಧಾನಸಭೆಗೆ ಅತ್ಯಂತ ಹಿರಿಯ ಸದಸ್ಯರು. ಅವರನ್ನು ದೆಹಲಿ ಪ್ರತಿನಿಧಿ ಮಾಡಿ ದೆಹಲಿಗೆ ಕಳುಹಿಸುವುದು ಸರಿಯಲ್ಲ ಎಂದು ಬೊಮ್ಮಾಯಿ ಅಭಿಪ್ರಾಯಪಟ್ಟರು.

ರಾಜ್ಯ ಸರ್ಕಾರದ ದೆಹಲಿ ಪ್ರತಿನಿಧಿ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರ ನೇಮಕ ಈಗಾಗಲೇ ಆಗಿದೆ. ನೇಮಕ ಮಾಡಿ ಈಗ ವಿನಾಯ್ತಿ ಕೊಡಲು ಕಾಯ್ದೆ ತಿದ್ದುಪಡಿ ಮಾಡುವುದು ಸರಿಯಲ್ಲ ಎಂದು ಸರ್ಕಾರಕ್ಕೆ ಸಲಹೆ ನೀಡಿದರು. ಟಿ.ಬಿ ಜಯಚಂದ್ರ ಅವರು ಅತ್ಯಂತ ಹಿರಿಯ ಸದಸ್ಯರು. ಅವರು 1978 ರಲ್ಲಿ ಸದನಕ್ಕೆ ಬಂದಿದ್ದಾರೆ. ಸಿದ್ದರಾಮಯ್ಯ ಅವರು ತಾವೇ ಸದನಕ್ಕೆ ಹಿರಿಯರು ಅಂತ ಹೇಳಿದ್ದಾರೆ‌. ಆದರೆ, ಜಯಚಂದ್ರ ಈ ಸದನದಲ್ಲಿ ಎಲ್ಲರಿಗಿಂತಲೂ ಹಿರಿಯರು. ಅಂತಹ ಹಿರಿಯರನ್ನು ದೆಹಲಿಗೆ ಕಳುಹಿಸಿ ಚಳಿಯಲ್ಲಿ‌ ನಡುಗಿಸುವುದು ಸರಿಯಲ್ಲ ಎಂದರು.

ಇದನ್ನೂ ಓದಿ:ಕರ್ನಾಟಕ ಸರಕು ಸೇವೆಗಳ ತೆರಿಗೆ ಮಸೂದೆಗೆ ಅಂಗೀಕಾರ ನೀಡಿದ ವಿಧಾನಸಭೆ

ABOUT THE AUTHOR

...view details