ಕರ್ನಾಟಕ

karnataka

ETV Bharat / state

ರಾಜ್ಯ ಸರ್ಕಾರ ಕ್ಷಮೆ ಕೇಳಬೇಕು: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆಗ್ರಹ - ಈಟಿವಿ ಭಾರತ್ ಕನ್ನಡ ಸುದ್ದಿ

ರಾಜಕೀಯ ಕಾರ್ಯಕ್ರಮಕ್ಕೆ ಬಂದಿದ್ದ ಗಣ್ಯರಿಗೆ ಆತಿಥ್ಯ ನೀಡಲು ಐಎಎಸ್​ ಅಧಿಕಾರಿಗಳನ್ನು ದುರ್ಬಳಕೆ ಮಾಡಲಾಗಿದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ವಿಧಾನಸಭೆಯಲ್ಲಿ ಇಂದು ಆರೋಪಿಸಿದ್ದಾರೆ.

ಮಾಜಿ ಸಿಎಂ ಬಸವರಾಜ ಬೊಮ್ಮಾಯಿ
ಮಾಜಿ ಸಿಎಂ ಬಸವರಾಜ ಬೊಮ್ಮಾಯಿ

By

Published : Jul 19, 2023, 5:39 PM IST

Updated : Jul 19, 2023, 5:58 PM IST

ಮಾಜಿ ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು :ರಾಜಕೀಯ ಕಾರ್ಯಕ್ರಮಕ್ಕೆ ಆಗಮಿಸಿದ್ದ ಗಣ್ಯರಿಗೆ ಆತಿಥ್ಯ ನೀಡಲು ಐಎಎಸ್ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಈ ವಿಚಾರದಲ್ಲಿ ಸರ್ಕಾರ ಕ್ಷಮೆ ಕೇಳಬೇಕೆಂದು ವಿಧಾನಸಭೆಯಲ್ಲಿ ಇಂದು ಆಗ್ರಹಿಸಿದ್ದಾರೆ.

ಬಿಜೆಪಿ ಶಾಸಕರ ಧರಣಿ ನಡುವೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ರಾಜಕೀಯ ಕಾರ್ಯಕ್ರಮ ನಡೆದಿರುವುದು ಮೊದಲ ಬಾರಿಯಲ್ಲ. ಆದರೂ ಯಾವುದೇ ಕಾರ್ಯಕ್ರಮಕ್ಕೆ ಐಎಎಸ್ ಅಧಿಕಾರಿಗಳನ್ನು ನಿಯೋಜನೆ ಮಾಡಿ ದುರ್ಬಳಕೆ ಮಾಡಿಕೊಂಡಿರಲಿಲ್ಲ. ಪ್ರಧಾನ ಕಾರ್ಯದರ್ಶಿ ಅಧಿಕಾರಿಗಳನ್ನು ಬಳಕೆ ಮಾಡಿಕೊಂಡಿದ್ದಾರೆ. ಶಿಷ್ಟಾಚಾರದ ಪ್ರಕಾರ ಸಂಸದರು, ಶಾಸಕರು ಅಲ್ಲದವರಿಗೂ ಐಎಎಸ್ ಅಧಿಕಾರಿಗಳಿಂದ ಆತಿಥ್ಯ ನೀಡಲಾಗಿದೆ ಎಂದು ಆರೋಪಿಸಿ, ಕಾರ್ಯಕ್ರಮಕ್ಕೆ ಆಗಮಿಸಿದ್ದ ಗಣ್ಯರೆನ್ನಲಾದ ಸಂಜಯ್ ಯಾದವ್, ಖಾದರ್ ಮೊಹಿದ್ದೀನ್, ರೇಣುಕಾ ದೇವಿ, ದೇವರಾಜನ್, ಪಿ ಜೆ ಜೋಸೆಫ್, ಕೃಷ್ಣಪಟೇಲ್ ಇವರು ಯಾರೂ ಕೂಡ ಶಾಸಕರು, ಸಂಸದರಲ್ಲ. ಜೋಸೆಫ್ ಅವರನ್ನು ವಿಧಾನಸಭೆ ಸದಸ್ಯರೆಂದು ಉಲ್ಲೇಖಿಸಲಾಗಿದೆ. ಅವರು ಈ ಸದನದ ಸದಸ್ಯರೇ? ಎಂದು ಪ್ರಶ್ನಿಸಿದರು.

ಅವರ ರಾಜ್ಯಗಳಲ್ಲೇ ಕೇಳುವವರಿಲ್ಲ. ಪುಡಿ ಪಾರ್ಟಿ ಅಧ್ಯಕ್ಷರಿಗೆ ರಾಜ ಆತಿಥ್ಯ ನೀಡಲಾಗಿದೆ. ರಾಜ್ಯದ ಮಾನಮರ್ಯಾದೆ ಹರಾಜಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು. ಮುಖ್ಯಮಂತ್ರಿ, ಮಾಜಿ ಮುಖ್ಯಮಂತ್ರಿ, ಸಚಿವರಿಗೆ ಶಿಷ್ಟಾಚಾರದ ಪ್ರಕಾರ ಗೌರವ ಕೊಡುವುದಿದೆ. ಆದರೆ ಐಎಎಸ್ ಅಧಿಕಾರಿಗಳನ್ನು ನಿಯೋಜಿಸಬೇಕೆಂದಿಲ್ಲ. ವಿಮಾನ ನಿಲ್ದಾಣ ಹಾಗೂ ಹೋಟೆಲ್ ಬಾಗಿಲುಗಳನ್ನು ಐಎಎಸ್ ಅಧಿಕಾರಿಗಳು ಕಾದಿದ್ದಾರೆ. ಇದರಿಂದ ರಾಜ್ಯದ ಮರ್ಯಾದೆ ಹರಾಜಾಗಿದೆ. ರಾಜಕೀಯಕ್ಕಾಗಿ ಕರ್ನಾಟಕದ ಕಿಮ್ಮತ್ತನ್ನು ಹರಾಜು ಹಾಕಲಾಗುತ್ತಿದೆ. ಇದರಿಂದ ಯಾವುದೇ ಲಾಭವಿಲ್ಲ. ರಾಜಕೀಯ ದರ್ಲಾಭಕ್ಕಾಗಿ ಬಳಕೆ ಮಾಡಿಕೊಳ್ಳಲಾಗಿದೆ. ಆತಿಥ್ಯಕ್ಕೆ ನಿಯೋಜನೆ ಮಾಡಿದ್ದ ಐಎಎಸ್ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ಕೊಡಬೇಕು, ವೇತನ ತಡೆಹಿಡಿಯಬೇಕು, ಮುಖ್ಯ ಕಾರ್ಯದರ್ಶಿ ಯಾವ ಕಾನೂನು ಪ್ರಕಾರ ಅನುಮತಿ ಕೊಟ್ಟಿದ್ದಾರೆ. ಐಎಎಸ್ ಅಧಿಕಾರಿ ಕೂಡ ತಮ್ಮ ಕರ್ತವ್ಯವನ್ನು ಮರೆತಿದ್ದಾರೆ ಎಂದು ಬೊಮ್ಮಾಯಿ ವಾಗ್ದಾಳಿ ನಡೆಸಿದರು.

ಹೆದರುವುದಿಲ್ಲವೆಂದ ಸಿಎಂ ಸಿದ್ದರಾಮಯ್ಯ : ಹೊರರಾಜ್ಯದ ಮುಖ್ಯಮಂತ್ರಿಗಳು ಸೇರಿದಂತೆ ಗಣ್ಯರಿಗೆ ಶಿಷ್ಟಾಚಾರದ ಪ್ರಕಾರ ರಾಜ್ಯದ ಆತಿಥ್ಯ ನೀಡಿರುವ ಬಗ್ಗೆ ಸಮರ್ಥಿಸಿಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜಕೀಯಕ್ಕಾಗಿ ಬಿಜೆಪಿ, ಜೆಡಿಎಸ್ ಶಾಸಕರು ಧರಣಿ ಮಾಡುತ್ತಿದ್ದಾರೆ. ಇದಕ್ಕೆ ನಾವು ಹೆದರುವುದಿಲ್ಲ. ಸೊಪ್ಪು ಹಾಕುವುದಿಲ್ಲ ಎಂದು ಹೇಳಿದರು. ಮೊದಲಿನಿಂದಲೂ ಶಿಷ್ಟಾಚಾರದ ಪ್ರಕಾರ ರಾಜ್ಯದ ಆತಿಥ್ಯ ನಡೆದುಕೊಂಡು ಬಂದಿದೆ. ಆದರೂ ಐಎಎಸ್ ಅಧಿಕಾರಿಗಳನ್ನು ಆತಿಥ್ಯಕ್ಕೆ ನಿಯೋಜಿಸಿದ್ದಾರೆ ಎಂದು ಆರೋಪಿಸಿ ಸದನದಲ್ಲಿ ಗದ್ದಲ ಎಬ್ಬಿಸುತ್ತಿದ್ದಾರೆ. ಈ ಬೆದರಿಕೆಗೆ ನಾವು ಹೆದರುವುದಿಲ್ಲ ಎಂದು ಗುಡುಗಿದರು.

ಈ ಹಿಂದೆಯೂ ಆತಿಥ್ಯ ನೀಡಿದ ನಿದರ್ಶನವಿದೆ. ಹೆಚ್ ಡಿ ಕುಮಾರಸ್ವಾಮಿ ಅವರು ಮೈತ್ರಿ ಸರ್ಕಾರದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ವೇಳೆ ಐಎಎಸ್ ಅಧಿಕಾರಿಗಳನ್ನು ಬಳಕೆ ಮಾಡಿಕೊಳ್ಳಲಾಗಿತ್ತು. ಬಿಜೆಪಿ ಕೂಡ ಅವರ ಪಕ್ಷದ ರಾಷ್ಟ್ರೀಯ ನಾಯಕರಿಗೆ ಈ ರೀತಿಯ ಆತಿಥ್ಯ ನೀಡಿದ್ದರು. ಕುಮಾರಕೃಪದಲ್ಲೂ ಕೂಡ ಇದೇ ರೀತಿ ಆತಿಥ್ಯ ಕೊಟ್ಟಿದ್ದರು ಎಂದು ಆರೋಪಿಸಿದರು.

ರಾಜಕೀಯಕ್ಕಾಗಿ ಗದ್ದಲ ಎಬ್ಬಿಸುತ್ತಿದ್ದಾರೆ:ಉತ್ತಮ ಬಜೆಟ್​ ಅನ್ನು ಮಂಡನೆ ಮಾಡಿದ್ದು, ಅದರ ಬಗ್ಗೆ ಚರ್ಚೆ ಮಾಡಲು ವಿರೋಧ ಪಕ್ಷಗಳಿಗೆ ಏನೂ ಉಳಿದಿಲ್ಲ. ರಾಜಕೀಯಕ್ಕಾಗಿ ಗದ್ದಲ ಎಬ್ಬಿಸುತ್ತಿದ್ದಾರೆ. ಇವರಿಗೆ ಮಾನ-ಮರ್ಯಾದೆ ಇಲ್ಲ ಎಂದಾಗ, ಏರಿದ ದನಿಯಲ್ಲಿ ಪ್ರತಿಪಕ್ಷದ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಆಗ ಆಡಳಿತ ಪಕ್ಷದ ಸದಸ್ಯರು ಆಕ್ಷೇಪಿಸಿ ಮಾತನಾಡಿದಾಗ ಸದನದಲ್ಲಿ ಗದ್ದಲ ಉಂಟಾಯಿತು.

ಮಧ್ಯಪ್ರವೇಶಿಸಿದ ಹೆಚ್ ಡಿ ಕುಮಾರಸ್ವಾಮಿ ರಾಜ್ಯ ಸರ್ಕಾರದ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರಿಗೆ ಆತಿಥ್ಯವನ್ನು ನೀಡಲಾಗಿತ್ತು. ಅವತ್ತು ಈ ವಿಚಾರವನ್ನು ಪ್ರಸ್ತಾಪಿಸಲು ನಿಮಗೇನಾಗಿತ್ತು? ಎಂದು ತಿರುಗೇಟು ನೀಡಿದರು.

ಇದನ್ನೂ ಓದಿ :ವಿಧಾನಸಭೆಯಲ್ಲಿ ಬಿಜೆಪಿ ಶಾಸಕರ ತೀವ್ರ ಪ್ರತಿಭಟನೆ: ಸ್ಪೀಕರ್ ಪೀಠದತ್ತ ಪೇಪರ್ ಎಸೆದು ಘೋಷಣೆ

Last Updated : Jul 19, 2023, 5:58 PM IST

ABOUT THE AUTHOR

...view details