ಬೆಂಗಳೂರು:ಜಿಲ್ಲಾಧಿಕಾರಿಗಳ ಪಿಡಿ ಖಾತೆಯನ್ನು ಮುಚ್ಚದೇ ರಾಜ್ಯ ಸರ್ಕಾರ ಕರ್ನಾಟಕ ಹಣಕಾಸು ನೀತಿಯನ್ನು ಉಲ್ಲಂಘಿಸುವ ಮೂಲಕ ಲೋಪ ಎಸಗಿದೆ ಎಂದು ಸಿಎಜಿ ವರದಿಯಲ್ಲಿ ತಿಳಿಸಲಾಗಿದೆ.
ರಾಜ್ಯ ಸರ್ಕಾರ ಮಾರ್ಚ್ 2020 ಅಂತ್ಯಕ್ಕೆ 76 ಪಿಡಿ ಖಾತೆಯಲ್ಲಿ 4,421.56 ಕೋಟಿ ರೂ. ಖರ್ಚಾಗದೇ ಉಳಿದಿದೆ. 76 ಪಿಡಿ ಖಾತೆಯನ್ನು ಕ್ಲೋಸ್ ಮಾಡದೇ ತನ್ನದೇ ಹಣಕಾಸು ನೀತಿಯನ್ನು ಉಲ್ಲಂಘಿಸಿದೆ ಎಂದು ತನ್ನ ವರದಿಯಲ್ಲಿ ತಿಳಿಸಿದೆ.
ಹಣಕಾಸು ವರ್ಷ ಅಂತ್ಯವಾಗುವಷ್ಟರೊಳಗೆ ಡಿಸಿಗಳ ಪಿಡಿ ಖಾತೆಯಲ್ಲಿ ಖರ್ಚಾಗದೇ ಉಳಿದ ಬಾಕಿ ಹಣವನ್ನು ರಾಜ್ಯದ ಸಂಚಿತ ನಿಧಿಗೆ ವರ್ಗಾವಣೆ ಮಾಡದೇ ಇದ್ದರೆ, ಹಣ ದುರ್ಬಳಕೆ, ಅವ್ಯವಹಾರ ನಡೆಯುವ ಅಪಾಯ ಇದೆ ಎಂದು ಸಿಎಜಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಈ ಮೊತ್ತದಲ್ಲಿ 2,741.52 ಕೋಟಿ ರೂ. ವಿವಿಧ ಯೋಜನೆಗಳಿಗೆ ಬಳಕೆಯಾಗದೇ ಸುಮಾರು ಮೂರು ವರ್ಷಕ್ಕಿಂತಲೂ ಅಧಿಕ ಅವಧಿಗೆ ಖರ್ಚಾಗದೇ ಹಾಗೇ ಬಾಕಿ ಉಳಿದುಕೊಂಡಿದೆ.
ಕರ್ನಾಟಕ ಹಣಕಾಸು ನೀತಿ 1958 ಪ್ರಕಾರ ವಿವಿಧ ಯೋಜನೆಗಳ ಕಾಮಗಾರಿಗಳಿಗೆ ಪಾವತಿ ಮಾಡುವ ಉದ್ದೇಶದೊಂದಿಗೆ ಪಿಡಿ ಖಾತೆಗಳನ್ನು ಸೃಷ್ಟಿಸಲಾಗುತ್ತದೆ. ರಾಜ್ಯ ಸಂಚಿತ ನಿಧಿಯಿಂದ ಈ ಖಾತೆಗಳಿಗೆ ಹಣ ವರ್ಗಾವಣೆ ಮಾಡಲಾಗುತ್ತದೆ. ಈ ಖಾತೆಯನ್ನು ಹಣಕಾಸು ವರ್ಷದ ಅಂತ್ಯಕ್ಕೆ ಕ್ಲೋಸ್ ಮಾಡಬೇಕು. ಆದರೆ, ಇಂತಹ ಹಲವು ಪಿಡಿ ಖಾತೆಗಳನ್ನು ಕ್ಲೋಸ್ ಮಾಡದೇ ನಿಯಮ ಉಲ್ಲಂಘಿಸಿರುವ ಬಗ್ಗೆ ಸಿಎಜಿ ಆಕ್ಷೇಪ ವ್ಯಕ್ತಪಡಿಸಿದೆ.
ಹಣಕಾಸು ವರ್ಷದ ಅಂತ್ಯದ ತಿಂಗಳಲ್ಲಿ ಸರ್ಕಾರ ಪಿಡಿ ಖಾತೆಗಳಿಗೆ ಹಣ ಬಿಡುಗಡೆ ಮಾಡುತ್ತದೆ. ಫೆಬ್ರವರಿ ಮತ್ತು ಮಾರ್ಚ್ನಲ್ಲಿ ಹಣ ಬಿಡುಗಡೆ ಮಾಡಿದರೆ, ಅಧಿಕಾರಿಗಳಿಗೆ ಟೆಂಡರ್ ಕರೆಯಲು ಹಾಗೂ ಕೆಲಸ ಪ್ರಾರಂಭಿಸಲು ಸಮಯಾವಕಾಶ ಇರುವುದಿಲ್ಲ. ಹೀಗಾಗಿ ಆ ಹಣವನ್ನು ಪಿಡಿ ಖಾತೆಗಳಲ್ಲಿ ಹಾಗೇ ಉಳಿಸಿಕೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.