ಬೆಂಗಳೂರು: ಭಾರೀ ವಿವಾದಕ್ಕೆ ಕಾರಣವಾಗಿದ್ದ ಕೆಎಂಎಫ್ ಮತ್ತು ಅಮುಲ್ ವಿಲೀನ ಪ್ರಸ್ತಾಪವನ್ನು ರಾಜ್ಯ ಸರ್ಕಾರ ತಿರಸ್ಕರಿಸಿದೆ. ರಾಜ್ಯದ ರೈತರ ಜೀವನಾಡಿಯಾಗಿರುವ ಕೆಎಂಎಫ್ ಮತ್ತು ಅಮುಲ್ ಸಂಸ್ಥೆಗಳನ್ನು ಪರಸ್ಪರ ವಿಲೀನಗೊಳಿಸುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾಡಿದ್ದ ಪ್ರಸ್ತಾಪವನ್ನು ಯಾವ ಕಾರಣಕ್ಕೂ ಅನುಷ್ಟಾನಗೊಳಿಸುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ವಿಧಾನಸೌಧದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಸಹಕಾರ ಸಚಿವ ಕೆ. ಎನ್. ರಾಜಣ್ಣ ಈ ಕುರಿತು ಮಾಹಿತಿ ನೀಡಿದ್ದಾರೆ.
ಕೆಎಂಎಫ್ ಮತ್ತು ಅಮುಲ್ ಸಂಸ್ಥೆಗಳನ್ನು ಪರಸ್ಪರ ವಿಲೀನಗೊಳಿಸುವುದು ಅಸಾಧ್ಯದ ಕೆಲಸ. ಯಾವ ಕಾರಣಕ್ಕೂ ರಾಜ್ಯ ಸರ್ಕಾರ ಈ ವಿಲೀನದ ಪರವಾಗಿಲ್ಲ. ಬದಲಿಗೆ ಕೆಎಂಎಫ್ ಸಂಸ್ಥೆಯನ್ನು ಮತ್ತಷ್ಟು ಬಲಿಷ್ಠಗೊಳಿಸಿ ರೈತರಿಗೆ ಮತ್ತಷ್ಟು ಶಕ್ತಿ ನೀಡುವುದು ನಮ್ಮ ಉದ್ದೇಶ ಎಂದು ಹೇಳಿದರು. ರೈತರಿಗೆ ಪಾವತಿಸಬೇಕಿರುವ ಹಾಲಿನ ಪ್ರೋತ್ಸಾಹಧನ ಬಾಕಿ ಇದೆ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಆದಷ್ಟು ಶೀಘ್ರವಾಗಿ ಈ ಬಾಕಿಯನ್ನು ನೀಡುತ್ತೇವೆ ಎಂದು ಸ್ಪಷ್ಟಪಡಿಸಿದರು.
ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ನೀಡುವ ಕೃಷಿ ಸಾಲದ ಪ್ರಮಾಣವನ್ನು ಮೂರು ಲಕ್ಷ ರೂಪಾಯಿಗಳಿಂದ ಐದು ಲಕ್ಷ ರೂಪಾಯಿಗೇರಿಸಲು ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು. ಶೂನ್ಯ ಬಡ್ಡಿ ದರದಲ್ಲಿ ನೀಡುವ ಕೃಷಿ ಸಾಲದ ಪ್ರಮಾಣವನ್ನು ಹೆಚ್ಚಿಸುವ ಕುರಿತು ನಾವು ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿದ್ದೆವು. ಅದನ್ನು ಜಾರಿ ಮಾಡುವ ಬದ್ಧತೆ ನಮಗೆ ಇದೆ ಎಂದರು. ಇದೇ ರೀತಿ ರೈತರಿಗೆ ಮಧ್ಯಮಾವಧಿ ಸಾಲದ ರೂಪದಲ್ಲಿ ಶೇ. 3 ರ ಬಡ್ಡಿ ದರದೊಂದಿಗೆ 10 ಲಕ್ಷ ರೂ. ಸಾಲ ನೀಡಲಾಗುತ್ತಿದ್ದು, ಈ ಪ್ರಮಾಣವನ್ನು ಹತ್ತರಿಂದ ಇಪ್ಪತ್ತು ಲಕ್ಷ ರೂಪಾಯಿಗಳಿಗೆ ಏರಿಸಲಾಗುವುದು ಎಂದು ಹೇಳಿದರು.