ಬೆಂಗಳೂರು:ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ನೇರ ಪಾವತಿಯಡಿ ಕಾರ್ಯನಿರ್ವಹಿಸುತ್ತಿರುವ 11,307 ಮಂದಿ ಪೌರ ಕಾರ್ಮಿಕರನ್ನು ನೇರ ನೇಮಕಾತಿ ಮೂಲಕ ಖಾಯಂಗೊಳಿಸಲು ರಾಜ್ಯ ಸರ್ಕಾರದ ಆದೇಶ ಹೊರಡಿಸಿದೆ. ಅಂತಿಮ ನೇಮಕಾತಿ ಅಧಿಸೂಚನೆ ಪಾಲಿಕೆಯಿಂದ ಅತಿ ಶೀಘ್ರದಲ್ಲೇ ಹೊರ ಬೀಳಲಿದೆ.
ಪಾಲಿಕೆಯಲ್ಲಿ ಹಾಲಿ ನೇರ ಪಾವತಿ ದಿನಗೂಲಿ ಆಧಾರದಲ್ಲಿ (ಎರಡು ವರ್ಷಗಳಿಗೆ ಕಡಿಮೆ ಇಲ್ಲದಂತೆ) ನಿರಂತರವಾಗಿ ಕೆಲಸ ನಿರ್ವಹಿಸಿರುವ ಪೌರ ಕಾರ್ಮಿಕರಿಗೆ ಮೊದಲ ಆದ್ಯತೆ ನೀಡಬೇಕು ಎಂದು ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಮಾರ್ಚ 2 ರಂದು ಹೊರಡಿಸಿರುವ ಆದೇಶದಲ್ಲಿ ಉಲ್ಲೇಖಿಸಿದ್ದಾರೆ. ಪಾಲಿಕೆಯಲ್ಲಿ ಹಾಲಿ ನೇರ ಪಾವತಿ ಅಥವಾ ಕ್ಷೇಮಾಭಿವೃದ್ಧಿ ಅಥವಾ ದಿನಗೂಲಿ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೆ 2 ವರ್ಷಗಳ ಮೇಲ್ಪಟ್ಟು ಪಾಲಿಕೆಯಿಂದ ವೇತನ ಪಡೆದು ದಾಖಲಾತಿಗಳನ್ನು ನೇಮಕಾತಿಯಲ್ಲಿ ಆದ್ಯತೆ ಮೇರೆಗೆ ಪರಿಗಣಿಸಬೇಕು ಎಂದು ಸೂಚಿಸಿದ್ದಾರೆ.
ಸೇವಾ ಅವಧಿ ಸರಿಸಮವಾಗಿದ್ದರೆ ಲಾಟರಿ ಮೂಲಕ ಆಯ್ಕೆ:ಆದ್ಯತೆ ನೀಡುವಲ್ಲಿ ಅಭ್ಯರ್ಥಿಗಳ ಸೇವಾವಧಿ 2 ವರ್ಷ ಮತ್ತು ಅದಕ್ಕಿಂತ ಹೆಚ್ಚು ಇದ್ದ ಪಕ್ಷದಲ್ಲಿ ಅಂತಹ ಅಭ್ಯರ್ಥಿಗಳ ಜೇಷ್ಠತೆಯನ್ನು ಅವರ ವಯಸ್ಸಿಗೆ ಅನುಗುಣವಾಗಿ ಅಂದರೆ ಹೆಚ್ಚು ವಯಸ್ಕರನ್ನು ಕಡಿಮೆ ವಯಸ್ಕರಿಗಿಂತ ಮೇಲೆ ಪರಿಗಣಿಸಬೇಕು ಹಾಗೂ ಹುಟ್ಟಿದ ದಿನಾಂಕ ಹಾಗೂ ಸೇವಾ ಅವಧಿ ಒಂದೇ ಮಾನಂಡದಲ್ಲಿ ಇದ್ದರೆ, ಲಾಟರಿ ಮುಖಾಂತರ ಆಯ್ಕೆ ಮಾಡಬೇಕು ಎಂದು ಹೇಳಿದ್ದಾರೆ.
ಇದನ್ನೂ ಓದಿ:ನೇರ ಪಾವತಿ ಪೌರ ಕಾರ್ಮಿಕರ ಸೇವೆ ಕಾಯಂಗೆ ಸರ್ಕಾರದ ಒಪ್ಪಿಗೆ: ಅನುಷ್ಠಾನಕ್ಕೆ ಸಮಿತಿ ರಚನೆ