ಬೆಂಗಳೂರು: ಅಪರಾಧ ಪ್ರಕರಣಗಳ ತನಿಖೆ ಹಾಗೂ ಕಾನೂನು ಸುವ್ಯವಸ್ಥೆಯ ದಕ್ಷ ನಿರ್ವಹಣೆ ಉದ್ದೇಶದಿಂದ ರಾಜ್ಯ ಸರ್ಕಾರವು ಪೊಲೀಸ್ ಠಾಣೆಗಳನ್ನು ಮರುಸಂಘಟನೆಗೊಳಿಸುವ ಕುರಿತು ಆದೇಶ ಹೊರಡಿಸಿದೆ.
ಒಟ್ಟು 850 ಹೊಸ ಪಿಎಸ್ಐ ಹುದ್ದೆಗಳನ್ನು ಭರ್ತಿ ಮಾಡಲು ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಈ ಹಿನ್ನೆಲೆ ಸರ್ಕಾರದ ನಡಾವಳಿ ಬಿಡುಗಡೆ ಮಾಡಲಾಗಿದೆ. 850 ಹೊಸ ಪಿಎಸ್ಐ ಗಳನ್ನು ಅಪರಾಧ ಅಂಕಿ ಅಂಶಗಳ ಆಧಾರದ ಮೇಲೆ ವಿವಿಧ ಠಾಣೆಗಳಿಗೆ ನಿಯೋಜಿಸಲಾಗುತ್ತದೆ. 4, 6 ಮತ್ತು 8 ಮಂದಿ ಪಿಎಸ್ಐ ಗಳಿರುವ ಠಾಣೆಗಳಿಗೆ ಮೇಲುಸ್ತುವಾರಿಗೆ ಪೊಲೀಸ್ ಇನ್ಸ್ಪೆಕ್ಟರ್ ಒಬ್ಬರ ಹುದ್ದೆಯನ್ನು ನೀಡಬೇಕಾಗಿದೆ. ಈ ಹಿನ್ನೆಲೆ ಹೊಸದಾಗಿ ನೇಮಿಸಿ ಹಾಗೂ ಮರುಸಂಘಟನೆಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.
ಓದಿ:ಸಚಿವಾಕಾಂಕ್ಷಿಗಳ ಒತ್ತಡ ನಿವಾರಣೆಗೆ ನಿಗಮ ಮಂಡಳಿಯಲ್ಲಿ ಕಾಯಕಲ್ಪ; ಫಲ ಕೊಡುತ್ತಾ ಸಿಎಂ ಕಾರ್ಯತಂತ್ರ?!
ಪೊಲೀಸ್ ಇಲಾಖೆಯಲ್ಲಿ ಶೇ.90ರಷ್ಟು ಪಿ.ಎಸ್.ಐ (ಸಿವಿಲ್) ಅವರುಗಳು ನೇರ ನೇಮಕಾತಿ ಹೊಂದಿದ ಅಧಿಕಾರಿಗಳಾಗಿದ್ದು, ಇವರು ಪಿಐ ಹುದ್ದೆಗೆ ಮುಂಬಡ್ತಿ ಹೊಂದುತ್ತಾರೆ. ಪಿಎಸ್ಐ ಹುದ್ದೆಯಲ್ಲಿ ಏಳೆಂಟು ವರ್ಷ ಕಾರ್ಯನಿರ್ವಹಿಸಿದ ನಂತರ ಇವರು ಮುಂಬಡ್ತಿ ಪಡೆಯಲಿದ್ದಾರೆ. ಪ್ರಸ್ತುತ ಲಭ್ಯವಿರುವ (ಶೇ.44) ಕಾರ್ಯಕಾರಿ ಹುದ್ದೆಗಳಿಂದ ಸುಗಮ ಕಾರ್ಯನಿರ್ವಹಣೆ ಕಷ್ಟಸಾಧ್ಯವಾಗಿದೆ. ಈ ಹಿನ್ನೆಲೆ ಪೊಲೀಸ್ ಠಾಣೆಗಳನ್ನು ಪುನರ್ ಸಂಘಟನಗೊಳಿಸಿದಲ್ಲಿ ಕಾರ್ಯಕಾರಿ ಹುದ್ದೆಗಳು ಹೆಚ್ಚುವುದರ ಜೊತೆಗೆ ಸಿಬ್ಬಂದಿ ಕರ್ತವ್ಯ ನಿರ್ವಹಿಸಲು ಆತ್ಮಸೈರ್ಯ ತುಂಬಿದಂತಾಗುತ್ತದೆ ಎಂದು ಪೊಲೀಸ್ ಇಲಾಖೆ ರಾಜ್ಯ ಸರ್ಕಾರಕ್ಕೆ ತಿಳಿಸಿತ್ತು. ಈ ಹಿನ್ನೆಲೆ ಸರ್ಕಾರ ಆದೇಶ ಹೊರಡಿಸಿದೆ.