ಬೆಂಗಳೂರು: ಬೆಳಗಾವಿ ಸುವರ್ಣಸೌಧ ಸೇರಿ ಉತ್ತರ ಕರ್ನಾಟಕ ಭಾಗಕ್ಕೆ ಕೆಲ ಪ್ರಮುಖ ರಾಜ್ಯ ಮಟ್ಟದ ಸರ್ಕಾರಿ ಕಚೇರಿಗಳ ಸ್ಥಳಾಂತರಿಸುವ ಆದೇಶ ಇನ್ನೂ ಕಾಗದದಲ್ಲಿಯೇ ಉಳಿದಿದೆ. ಉತ್ತರ ಕರ್ನಾಟಕದ ಮೂಲದ ಸಿಎಂ ಬೊಮ್ಮಾಯಿಯೇ ಬೆಳಗಾವಿ ಸುವರ್ಣಸೌಧವನ್ನು ಕ್ರಿಯಾಶೀಲವನ್ನಾಗಿ ಮಾಡುತ್ತೇನೆಂದು ಪದೇ ಪದೆ ಹೇಳಿದ್ದರೂ,ಅದು ಬರೀ ಮುಖಸ್ತುತಿಯಾಗಿ ಉಳಿದಿದೆ. ಸ್ಥಳಾಂತರದ ಸದ್ಯದ ಸ್ಥಿತಿಗತಿ ಹೇಗಿದೆ? ಏನು ಎತ್ತ ವರದಿ ಮೇಲೆ 'ಈಟಿವಿ ಭಾರತ' ಬೆಳಕು ಚೆಲ್ಲಿರುವುದು ಇಲ್ಲಿದೆ..
ಬೆಳಗಾವಿಯ ಸುವರ್ಣವಿಧಾನಸೌಧಕ್ಕೆ ಬೆಂಗಳೂರಿನಿಂದ ಕೆಲ ಪ್ರಮುಖ ಸರ್ಕಾರಿ ಕಚೇರಿಗಳನ್ನೂ ಸ್ಥಳಾಂತರಿಸಬೇಕು ಎಂಬುದು ಬಹು ವರ್ಷಗಳಿಂದ ಇರುವ ಬೇಡಿಕೆ. ಆದರೆ ಈ ಕೂಗು ಅರಣ್ಯರೋದನ ಆಗಿದೆಯೇ ಹೊರತು ಅನುಷ್ಠಾನ ಮಾತ್ರ ವಿಳಂಬಗೊಂಡಿದೆ.
ಚಳಿಗಾಲದ ಅಧಿವೇಶನಕ್ಕೆ ಸೀಮಿತ:ಉತ್ತರ ಕರ್ನಾಟಕದ ಕಡೆಗಣನೆ ಪದೇ ಪದೆ ಕೇಳಿ ಬರುತ್ತಿರುವ ಕೂಗು. ಆ ಭಾಗದ ಜನ, ರೈತ ಹೋರಾಟಗಾರರು, ಜನಪ್ರತಿನಿಧಿಗಳು ಉತ್ತರ ಕರ್ನಾಟಕ ನಿರ್ಲಕ್ಷ್ಯದ ಬಗ್ಗೆ ಹಲವು ವರ್ಷಗಳಿಂದ ದನಿ ಎತ್ತುತ್ತಲೇ ಇದ್ದಾರೆ. ಬೆಳಗಾವಿಯಲ್ಲಿ ಸುವರ್ಣಸೌಧ ಕಟ್ಟಿ ದಶಕ ಕಳೆದರೂ ರಾಜ್ಯಮಟ್ಟದ ಕಚೇರಿಗಳು ಇನ್ನೂ ಬಂದಿಲ್ಲ. ಆ ಭವ್ಯ ಕಟ್ಟಡ ಆಟಕ್ಕೂ ಇಲ್ಲ, ಲೆಕ್ಕಕ್ಕೂ ಇಲ್ಲದಂತಾಗಿದೆ. ಬರೀ ಚಳಿಗಾಲದ ಅಧಿವೇಶನ ನಡೆಸಲೂ ಮಾತ್ರ ಸೀಮಿತವಾಗಿದೆ.
ಬಿಳಿ ಆನೆ ಕುಖ್ಯಾತಿ:ಸುಮಾರು 450 ಕೋಟಿ ರೂ. ಅಂದಾಜು ವೆಚ್ಚದಲ್ಲಿ ನಿರ್ಮಿಸಲಾಗಿರುವ ಬೆಳಗಾವಿ ಸುವರ್ಣವಿಧಾನಸೌಧ ಸರ್ಕಾರದ ಪಾಲಿಗೆ ಬಿಳಿ ಆನೆ ಎಂಬ ಕುಖ್ಯಾತಿ ಪಡೆದಿದೆ. ಯಾವುದೇ ಸರ್ಕಾರಗಳಿಗೂ ಉತ್ತರ ಕರ್ನಾಟಕ ಭಾಗಕ್ಕೆ ಸಂಬಂಧಿಸಿದ ಕಾರ್ಯದರ್ಶಿ ಮಟ್ಟದ ಕಚೇರಿಗಳನ್ನು ಸ್ಥಳಾಂತರಿಸಲು ಸಾಧ್ಯವಾಗಿಲ್ಲ. ಜನೋಪಯೋಗಿಯಾಗಿ ಸದ್ಬಳಕೆನೂ ಆಗುತ್ತಿಲ್ಲ.
5 ಕೋಟಿ ರೂ ವೆಚ್ಚ : ವಾರ್ಷಿಕ ಸುಮಾರು 5 ಕೋಟಿ ರೂ. ಕಟ್ಟಡದ ನಿರ್ವಹಣಾ ವೆಚ್ಚ ಆಗುತ್ತಿದೆ. ನಾಲ್ಕು ಅಂತಸ್ತಿನ ಸುವರ್ಣ ವಿಧಾನಸೌಧ 60,398 ಚ.ಮೀ. ವ್ಯಾಪ್ತಿಯಲ್ಲಿ ನಿರ್ಮಿಸಲಾಗಿದೆ. ಒಟ್ಟು 38 ಸಚಿವರ ಕಚೇರಿ, 14 ಕಾನ್ಫರೆಮ್ಸ್ ಹಾಲ್ ಗಳನ್ನು ಹೊಂದಿದೆ. ಆದರೆ ಇಷ್ಟು ದೊಡ್ಡ ಕಟ್ಟಡ ಇನ್ನೂ ಸಂಪೂರ್ಣವಾಗಿ ಸದ್ಬಳಕೆಯಾಗದೇ ಬರೀ 10 ದಿನದ ಚಳಿಗಾಲದ ಅಧಿವೇಶನಕ್ಕೆ ಮಾತ್ರ ಸೀಮಿತಗೊಂಡಿದೆ.
ಕಚೇರಿ ಸ್ಥಳಾಂತರ ಸ್ಥಿತಿಗತಿ ವಿಳಂಬ: 2018ರಲ್ಲಿ ಕುಮಾರಸ್ವಾಮಿ ಸಿಎಂ ಆಗಿದ್ದಾಗ ಒಟ್ಟು 9 ವಿವಿಧ ಕಚೇರಿಗಳನ್ನು ಬೆಳಗಾವಿ ಹಾಗೂ ಉತ್ತರ ಕರ್ನಾಟಕ ಭಾಗಕ್ಕೆ ಸ್ಥಳಾಂತರಿಸಲು ನಿರ್ಧರಿಸಿದ್ದರು. ಆಲಮಟ್ಟಿಗೆ ಕೃಷ್ಣ ಭಾಗ್ಯ ಜಲ ನಿಗಮ, ದಾವಣಗೆರೆಗೆ ಕರ್ನಾಟಕ ನೀರಾವರಿ ನಿಗಮ, ಬೆಳಗಾವಿಗೆ ಕರ್ನಾಟಕ ರಾಜ್ಯ ಜವಳಿ ಮೂಲಭೂತ ಅಭಿವೃದ್ಧಿ ನಿಗಮ, ಹಂಪಿಗೆ ಪುರಾತತ್ವ ಸಂಗ್ರಹಾಲಯಗಳ ಪರಂಪರೆ ಇಲಾಖೆ, ಬೆಳಗಾವಿಗೆ ಕಬ್ಬು ಅಭಿವೃದ್ಧಿ ಆಯುಕ್ತಾಲಯ ಮತ್ತು ಸಕ್ಕರೆ ನಿರ್ದೇಶನಾಲಯ, ಹುಬ್ಬಳ್ಳಿಗೆ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಒಂದು ವಿಭಾಗ, ಧಾರವಾಡಕ್ಕೆ ಕರ್ನಾಟಕ ರಾಜ್ಯ ಮಾನವಹಕ್ಕು ಆಯೋಗದ ಒಬ್ಬ ಸದಸ್ಯ, ಧಾರವಾಡಕ್ಕೆ ಒಂದು ಉಪ ಲೋಕಾಯುಕ್ತ ಕಚೇರಿ ಮತ್ತು ಬೆಳಗಾವಿ ಹಾಗೂ ಕಲಬುರಗಿಗೆ ತಲಾ ಒಂದರಂತೆ ಎರಡು ಮಾಹಿತಿ ಆಯುಕ್ತರ ಕಚೇರಿಯನ್ನು ಬೆಂಗಳೂರಿನಿಂದ ಸ್ಥಳಾಂತರಿಸಲು ನಿರ್ಧರಿಸಲಾಗಿತ್ತು.
ಬೆಳಗಾವಿಗೆ ಸ್ಥಳಾಂತರಿಸಿದ ಕಚೇರಿಗಳೆಷ್ಟು?:
2020ರಲ್ಲಿ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಕರ್ನಾಟಕ ಮಾಹಿತಿ ಆಯೋಗದ ಪೀಠ ಮಾತ್ರ ಕಾರ್ಯಾರಂಭಿಸಿದೆ. ರಾಜ್ಯ ಮಾಹಿತಿ ಆಯೋಗ ಬೆಳಗಾವಿ ಪೀಠದ ನ್ಯಾಯಾಲಯ ಕಲಾಪ ಜೂನ್ 22, 2022 ರಿಂದ ಆರಂಭಗೊಂಡಿದೆ.
ಜವಳಿ ಅಭಿವೃದ್ಧಿ ನಿಗಮ: ಬೆಳಗಾವಿಗೆ 1.10.2019ರಲ್ಲಿ ಜವಳಿ ಅಭಿವೃದ್ಧಿ ನಿಗಮದ ಕಚೇರಿಯೂ ಸ್ಥಳಾಂತರಗೊಂಡಿದ್ದು, ಸಂಪೂರ್ಣವಾಗಿ ಬೆಳಗಾವಿಯಿಂದಲೇ ಕಾರ್ಯನಿರ್ವಹಿಸುತ್ತಿದೆ. ಆದರೆ, ಎಲ್ಲ ಆಡಳಿತಾತ್ಮಕ ಕೆಲಸಗಳಿಗೆ ಅಧಿಕಾರಿಗಳು ಬೆಂಗಳೂರಿಗೆ ನಿತ್ಯ ಬಂದು ಹೋಗುವಂಥ ಪರಿಸ್ಥಿತಿ ಎದುರಾಗಿದೆ.
ಕಬ್ಬು ಅಭಿವೃದ್ಧಿ ಸಕ್ಕರೆ ನಿರ್ದೇಶನಾಲಯ:ಇತ್ತ ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ನಿರ್ದೇಶನಾಲಯವನ್ನು ಬೆಂಗಳೂರಿನಿಂದ ಬೆಳಗಾವಿಗೆ ಸ್ಥಳಾಂತರಗೊಂಡಿದೆ. ಆದರೆ ಸುವರ್ಣಸೌಧಕ್ಕೆ ಸ್ಥಳಾಂತರಿಸುವ ಆದೇಶ ಹೊರಡಿಸಲಾಗಿದ್ದರೂ, ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಸದ್ಯ ಬೆಳಗಾವಿ ನಗರದಲ್ಲಿ ನಿರ್ದೇಶನಾಲಯ ಬಹುತೇಕವಾಗಿ ಕಾರ್ಯನಿರ್ವಹಿಸುತ್ತಿದ್ದು, ಕಡತ ವ್ಯವಹಾರ ಅಲ್ಲಿಂದಲೇ ನಡೆಯುತ್ತಿದೆ ಎಂದು ಬೆಳಗಾವಿ ಹೋರಾಟಗಾರ ಅಶೋಕ್ ಚಂದರಗಿ ತಿಳಿಸಿದ್ದಾರೆ.