ಕರ್ನಾಟಕ

karnataka

ETV Bharat / state

ಕಾರ್ಮಿಕರ ಗುಡಿಸಲುಗಳಿಗೆ ಬೆಂಕಿ ಪ್ರಕರಣ : ಪರಿಹಾರ ಮೊತ್ತ ಹೆಚ್ಚಿಸಿದ ಸರ್ಕಾರ

ಕೊಳಗೇರಿ ಪ್ರದೇಶದಲ್ಲಿ ಬೆಂಕಿಗಾಹುತಿಯಿಂದ ಮನೆ ಕಳೆದುಕೊಂಡಿರುವ 170 ಕುಟುಂಬಗಳಿಗೆ ಘೋಷಿಸಿದ್ದ 6100 ಪರಿಹಾರ ಮೊತ್ತವನ್ನು 14100 ರೂಪಾಯಿಗಳಿಗೆ ಹೆಚ್ಚಿಸಲಾಗಿದೆ ಎಂದು ರಾಜ್ಯ ಸರ್ಕಾರ ಹೈಕೋರ್ಟ್​ಗೆ​ ಮಾಹಿತಿ ನೀಡಿದೆ.

Government increased compensation amount
ಹೈಕೋರ್ಟ್

By

Published : Sep 1, 2020, 11:28 PM IST

ಬೆಂಗಳೂರು :ನಗರದ ಸಂಡೆ ಬಜಾರ್ ಬಳಿಯ ಕೊಳಗೇರಿ ಪ್ರದೇಶದಲ್ಲಿ ಬೆಂಕಿಗಾಹುತಿಯಾದ ಕಾರ್ಮಿಕರ ಗುಡಿಸಲುಗಳಿಗೆ ಸರ್ಕಾರ ಮೊದಲು ಘೋಷಿಸಿದ್ದ ತಲಾ 6100 ರೂಪಾಯಿ ಪರಿಹಾರ ಮೊತ್ತವನ್ನು 14100 ರೂಪಾಯಿಗಳಿಗೆ ಹೆಚ್ಚಿಸಲಾಗಿದೆ ಎಂದು ಸರ್ಕಾರ ಹೈಕೋರ್ಟ್​ಗೆ​ ಮಾಹಿತಿ ನೀಡಿದೆ.

ಕಾರ್ಮಿಕರ ಗುಡಿಸಲುಗಳಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದ ಸಂಬಂಧ ವಕೀಲೆ ವೈಶಾಲಿ ಹೆಗ್ಡೆ ಬರೆದ ಪತ್ರವನ್ನು ಆಧರಿಸಿ ಹೈಕೋರ್ಟ್ ದಾಖಲಿಸಿಕೊಂಡಿರುವ ಸ್ವಯಂ ಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಸರ್ಕಾರದ ಪರ ವಕೀಲ ವಿಕ್ರಮ ಅವರು ಪೀಠಕ್ಕೆ ಮಾಹಿತಿ ನೀಡಿ, ಘಟನೆಯಲ್ಲಿ ಮನೆ ಕಳೆದುಕೊಂಡಿರುವ 170 ಕುಟುಂಬಗಳಿಗೆ ಘೋಷಿಸಿದ್ದ 6100 ಪರಿಹಾರ ಮೊತ್ತವನ್ನು 14100 ರೂಪಾಯಿಗಳಿಗೆ ಹೆಚ್ಚಿಸಲಾಗಿದೆ. ಸಂತ್ರಸ್ತರ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆ ಮಾಡುವ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದು ವಿವರಿಸಿದರು.

ಇದೇ ವೇಳೆ ಅರ್ಜಿದಾರರ ಪರ ವಕೀಲ ಬಿ.ವಿ ವಿದ್ಯುಲ್ಲತಾ ಅವರು ವಾದಿಸಿ, ಗುಡಿಸಲುಗಳಿರುವ ಜಾಗ ಬಿಬಿಎಂಪಿ ಅಥವಾ ಬಿಡಿಎ ಪೈಕಿ ಯಾವ ಸಂಸ್ಥೆಗೆ ಸೇರಿದೆ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಕಾರ್ಮಿಕರಿಗೆ ಪುನರ್ವಸತಿ ಕಲ್ಪಿಸಬೇಕಾದರೆ ಗುಡಿಸಲು ಇರುವ ಜಾಗ ಯಾರಿಗೆ ಸೇರಿದೆ ಎಂಬುದು ತಿಳಿಯಬೇಕಾಗಿದೆ. ಇದರಿಂದ ಪುನರ್ವಸತಿ ಕಾರ್ಯಕ್ಕೆ ಅನುಕೂಲವಾಗುತ್ತದೆ ಎಂದು ವಿವರಿಸಿದರು.

ಹೇಳಿಕೆಗಳನ್ನು ದಾಖಲಿಸಿಕೊಂಡ ಪೀಠ, ಪ್ರಕರಣದ ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ಮೊತ್ತವನ್ನು ಯಾವಾಗ ಮತ್ತು ಹೇಗೆ ಪಾವತಿಸಲಾಗುತ್ತದೆ‌ ಎಂಬುದನ್ನು ಹಾಗೂ ಗುಡಿಸಲುಗಳಿಗೆ ಬೆಂಕಿ ಹಚ್ಚಿದ ಪ್ರಕರಣದ ಆರೋಪಿಗಳ ವಿರುದ್ಧ ಕೈಗೊಂಡ ಕ್ರಮಗಳ ಕುರಿತ ವರದಿಯನ್ನು ಸಲ್ಲಿಸುವಂತೆ ಸರ್ಕಾರಕ್ಕೆ ಸೂಚಿಸಿ ವಿಚಾರಣೆಯನ್ನು ಸೆಪ್ಟೆಂಬರ್ 18ಕ್ಕೆ ಮುಂದೂಡಿತು.

ABOUT THE AUTHOR

...view details