ಬೆಂಗಳೂರು: ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಕರ್ತವ್ಯ ನಿರ್ವಹಿಸುತ್ತಿರುವ ಗುತ್ತಿಗೆ ನೌಕರರಿಗೆ ಸಂಭಾವನೆಯನ್ನು ಏ.1ರಿಂದ ಜಾರಿಗೆ ಬರುವಂತೆ ಶೇ.15ರಷ್ಟು ಹೆಚ್ಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಆ ಮೂಲಕ ರಾಷ್ಟ್ರೀಯ ಆರೋಗ್ಯ ಗುತ್ತಿಗೆ ನೌಕರರಿಗೆ ಸರ್ಕಾರ ಸಿಹಿ ಸುದ್ದಿ ನೀಡಿದೆ.
ಏ.1 ರಿಂದಲೇ ಈ ವೇತನ ಹೆಚ್ಚಳ ಆದೇಶ ಜಾರಿಗೆ ಬರಲಿದೆ. ಈ ವೇತನ ಹೆಚ್ಚಳ ಒಳಗುತ್ತಿಗೆ, ಗುತ್ತಿಗೆ ನೌಕರರಿಗೆ ಮಾತ್ರ ಅನ್ವಯವಾಗಲಿದ್ದು, ಹೊರ ಗುತ್ತಿಗೆ ನೌಕರರಿಗೆ ಅನ್ವಯವಾಗುವುದಿಲ್ಲ. ಈ ಸಂಬಂಧ ಆರೋಗ್ಯ ಸಚಿವ. ಡಾ. ಸುಧಾಕರ್ ಟ್ವೀಟ್ ಮೂಲಕವೂ ಮಾಹಿತಿ ಹಂಚಿಕೊಂಡಿದ್ದಾರೆ. ಇದು ಎನ್ಎಚ್ಎಂ ನೌಕರರ ಬಹುದಿನಗಳ ಬೇಡಿಕೆಯಾಗಿತ್ತು.
ರಾಷ್ಟ್ರೀಯ ಆರೋಗ್ಯ ಅಭಿಯಾನದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಬೇಡಿಕೆಗಳ ಕುರಿತಂತೆ ಪಿ.ಎನ್. ಶ್ರೀನಿವಾಸಚಾರಿ ಸಮಿತಿಯ ಶಿಫಾರಸ್ಸಿನನ್ವಯ NHM ಗುತ್ತಿಗೆ ಹಾಗೂ ಹೊರ ಗುತ್ತಿಗೆ ನೌಕರರು ಪ್ರಸ್ತುತ ಪಡೆಯುತ್ತಿರುವ ವೇತನಕ್ಕೆ ಶೇ 15ರಷ್ಟು ಹೆಚ್ಚಿಸುವಂತೆ ಕೋರಿ ರಾಷ್ಟ್ರೀಯ ಆರೋಗ್ಯ ಅಭಿಯಾನ (NHM)ದ ಅಭಿಯಾನ ನಿರ್ದೇಶಕರು ಪ್ರಸ್ತಾವನೆ ಸಲ್ಲಿಸಿದ್ದರು. ಅದರಂತೆ ಸರ್ಕಾರ ಇದೀಗ ವೇತನ ಹೆಚ್ಚಿಸಿ ಆದೇಶ ಹೊರಡಿಸಿದೆ.
ಈ ವೇತನ ಹೆಚ್ಚಳ NHM ಗುತ್ತಿಗೆ ಸಿಬ್ಬಂದಿಗೆ ಮಾತ್ರ ಅನ್ವಯವಾಗಲಿದೆ. ಹೊರಗುತ್ತಿಗೆ ಸಿಬ್ಬಂದಿಗೆ ಅನ್ವಯವಾಗುವುದಿಲ್ಲ. ಕರ್ತವ್ಯಕ್ಕೆ ಸೇರುವಾಗ ಮಾಸಿಕ ಮೂಲ ವೇತನ 20,000 ರೂ. ಕಡಿಮೆ ಪಡೆಯುತ್ತಿದ್ದ ಗುತ್ತಿಗೆ ನೌಕರರಿಗೆ ಶೇ15ರಷ್ಟು ಹೆಚ್ಚಳ ಮಾಡಾಗಿದೆ. 5 ವರ್ಷಕ್ಕೂ ಅಧಿಕ ಅವಧಿಯವರೆಗೆ ನಿರಂತರವಾಗಿ ಸೇವೆ ಸಲ್ಲಿಸುತ್ತಿರುವ NHM ಗುತ್ತಿಗೆ ವೈದ್ಯಕೀಯ ಅಧಿಕಾರಿಗಳಿಗೆ ವೇತನ 15ರಷ್ಟು ಹೆಚ್ಚಳ ಆದೇಶ ಅನ್ವಯವಾಗಲಿದೆ. NHM ಗುತ್ತಿಗೆ ಸ್ಪೆಷಲಿಸ್ಟ್ ವೈದ್ಯರಿಗೆ 3-5 ವರ್ಷ ಸೇವೆ ಸಲ್ಲಿಸಿದವರಿಗೆ 5ರಷ್ಟು ವೇತನ ಹೆಚ್ಚಳ, 5-10 ವರ್ಷ ಸೇಗೆ ಸಲ್ಲಿಸಿದ ಸ್ಪೆಷಲಿಸ್ಟ್ ಗೆ ಶೇ10ರಷ್ಟು ಹಾಗೂ 10 ವರ್ಷ ಅಧಿಕ ಸೇವೆ ಸಲ್ಲಿಸಿದ ಸ್ಪೆಷಲಿಸ್ಟ್ ವೈದ್ಯರಿಗೆ ಶೇ15ರಷ್ಟು ವೇತನ ಹೆಚ್ಚಳ ಮಾಡಲಾಗುತ್ತದೆ.
ಇದನ್ನೂ ಓದಿ:ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ದ್ವಿತೀಯ ಪಿಯುಸಿ ಪರೀಕ್ಷಾರ್ಥಿಗಳಿಗೆ ಕೆಎಸ್ಆರ್ಟಿಸಿ ಪ್ರಯಾಣ ಉಚಿತ
ರಾಜ್ಯ ಸರ್ಕಾರಿ ನೌಕರರಿಗೆ ಶೇ.17ರಷ್ಟು ವೇತನ ಹೆಚ್ಚಿಸಿದ್ದ ಸರ್ಕಾರ:ಇನ್ನು ರಾಜ್ಯ ಸರ್ಕಾರ ಇತ್ತೀಚೆಗೆ 2023ರ ಏಪ್ರಿಲ್ 1ರಿಂದ ಅನ್ವಯವಾಗುವಂತೆ ರಾಜ್ಯ ಸರ್ಕಾರಿ ನೌಕರರಿಗೆ ಮೂಲ ವೇತನದ ಶೇಕಡಾ 17ರಷ್ಟು ವೇತನ ಹೆಚ್ಚಳ ಮಾಡಿ ಆದೇಶ ಹೊರಡಿಸಿತ್ತು. ಈ ಮೂಲಕ ಶೇ. 20ರಷ್ಟು ವೇತನ ಹೆಚ್ಚಳಕ್ಕೆ ಪಟ್ಟು ಹಿಡಿದಿದ್ದ ಸರ್ಕಾರಿ ನೌಕರರು ಶೇ.17ರಷ್ಟು ವೇತನ ಹೆಚ್ಚಿಸಿಕೊಳ್ಳುವಲ್ಲಿ ಸಫಲರಾಗಿದ್ದರು. 19.11.2022ರ ಸರ್ಕಾರಿ ಆದೇಶದಲ್ಲಿ ರಾಜ್ಯ ಸರ್ಕಾರಿ ನೌಕರರ ಬೇಡಿಕೆಗಳನ್ನು ಪರಿಶೀಲಿಸಲು 7ನೇ ರಾಜ್ಯವೇತನ ಆಯೋಗವನ್ನು ರಚಿಸಿ ಆದೇಶಗಳನ್ನು ಹೊರಡಿಸಲಾಗಿತ್ತು.
ಪ್ರಸ್ತುತ ರಾಜ್ಯ ಸರ್ಕಾರಿ ನೌಕರರ ಬೇಡಿಕೆಗಳ ಹಿನ್ನೆಲೆಯಲ್ಲಿ ಸರ್ಕಾರದ ನೀತಿ ನಿರ್ಣಯದಂತೆ 7ನೇ ರಾಜ್ಯವೇತನ ಆಯೋಗದ ಅಂತಿಮ ವರದಿಯನ್ನು ಕಾಯ್ದಿರಿಸಲಾಗಿದ್ದು, ರಾಜ್ಯ ಸರ್ಕಾರಿ ನೌಕರರಿಗೆ ಸ್ಥಳೀಯ ಸಂಸ್ಥೆಗಳ ಮತ್ತು ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರಿಗೆ ಹಾಗೂ ವಿಶ್ವವಿದ್ಯಾಲಯಗಳ ಬೋಧಕೇತರ ಸಿಬ್ಬಂದಿಗೆ ಮಧ್ಯಂತರ ಪರಿಹಾರ ಮಂಜೂರು ಮಾಡಲು ಸರ್ಕಾರ ನಿರ್ಧರಿಸಿದೆ ಎಂದು ಆದೇಶದಲ್ಲಿ ತಿಳಿಸಿತ್ತು.