ಬೆಂಗಳೂರು : 2022-23ರ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ತೆರಿಗೆ ಮೂಲಗಳಿಂದ ನಿರೀಕ್ಷಿತ ಗುರಿಗಿಂತ ಉತ್ತಮ ಆದಾಯ ಸಂಗ್ರಹವಾಗುತ್ತಿದೆ. ಉತ್ತಮ ಆದಾಯ ಸಂಗ್ರಹದ ಹಿನ್ನೆಲೆ ರಾಜ್ಯ ಸರ್ಕಾರ ಮುಂದಿನ ತ್ರೈ ಮಾಸಿಕದಲ್ಲೂ ಸಾಲ ಎತ್ತುವಳಿ ಮಾಡದಿರಲು ನಿರ್ಧರಿಸಿದೆ. ಕೋವಿಡ್-ಲಾಕ್ ಡೌನ್ನಿಂದ ಕಳೆದ ಎರಡು ವರ್ಷಗಳಿಂದ ಸೊರಗಿ ಹೋಗಿದ್ದ ರಾಜ್ಯದ ಖಜಾನೆಗೆ ಈ ಆರ್ಥಿಕ ವರ್ಷದ ಆರಂಭದಲ್ಲೇ ಉತ್ತಮ ಚೇತರಿಕೆ ಕಾಣುತ್ತಿದೆ.
ಮೊದಲ ತ್ರೈ ಮಾಸಿಕದಲ್ಲಿ ತೆರಿಗೆ ಮೂಲಗಳಿಂದ ಸಂಗ್ರಹವಾಗಿರುವ ಆದಾಯ ನಿರೀಕ್ಷಿತ ಗುರಿಯನ್ನು ಮೀರಿದೆ. ಆ ಮೂಲಕ ಎರಡು ವರ್ಷಗಳಿಂದ ಸೊರಗಿದ್ದ ಆದಾಯ ಮೂಲಗಳು ಈ ಆರ್ಥಿಕ ವರ್ಷದ ಆರಂಭದಲ್ಲೇ ಶುಭ ಸೂಚನೆ ನೀಡುತ್ತಿದೆ.
ಮೊದಲ ತ್ರೈ ಮಾಸಿಕದಲ್ಲಿ ಭರ್ಜರಿ ತೆರಿಗೆ ಸಂಗ್ರಹ:ರಾಜ್ಯದಲ್ಲಿ ಈ ಆರ್ಥಿಕ ವರ್ಷದಲ್ಲಿ ಬೊಕ್ಕಸಕ್ಕೆ ನಿರೀಕ್ಷಿತ ಗುರಿ ಮೀರಿ ತೆರಿಗೆಗಳ ಮೂಲಕ ಆದಾಯ ಸಂಗ್ರಹವಾಗಿದೆ. ಏಪ್ರಿಲ್-ಜೂನ್ ವರೆಗಿನ ಮೊದಲ ತ್ರೈಮಾಸಿಕದಲ್ಲಿ ಪ್ರಮುಖ ತೆರಿಗೆ ಸಂಗ್ರಹ ಇಲಾಖೆಗಳು ಗುರಿ ಮೀರಿ ಆದಾಯ ಸಂಗ್ರಹಿಸಿರುವುದು ರಾಜ್ಯ ಸರ್ಕಾರಕ್ಕೆ ನಿಟ್ಟುಸಿರು ಬಿಡುವಂತಾಗಿದೆ.
ಅದರಲ್ಲೂ ವಾಣಿಜ್ಯ ಇಲಾಖೆ ಭರ್ಜರಿ ತೆರಿಗೆ ಸಂಗ್ರಹ ಮಾಡಿದೆ. ಮೊದಲ ತ್ರೈಮಾಸಿಕದಲ್ಲಿ 21,235 ಕೋಟಿ ರೂ. ವಾಣಿಜ್ಯ ತೆರಿಗೆ ಸಂಗ್ರಹಿಸಿದೆ. ತ್ರೈಮಾಸಿಕ ಗುರಿ ಇದ್ದಿದ್ದು 19,259 ಕೋಟಿ ರೂ. ಆದರೆ, ವಾಣಿಜ್ಯ ಇಲಾಖೆ ಹೆಚ್ಚುವರಿ ತೆರಿಗೆ ಸಂಗ್ರಹ ಮಾಡಿದ್ದು, ಕಳೆದ ತ್ರೈಮಾಸಿಕಕ್ಕೆ ಹೋಲಿಸಿದರೆ ಈ ಬಾರಿ 50%ಗೂ ಅಧಿಕ ವಾಣಿಜ್ಯ ತೆರಿಗೆ ಸಂಗ್ರಹಿಸಿದೆ.
ನೋಂದಣಿ ಹಾಗೂ ಮುದ್ರಾಂಕ ಇಲಾಖೆ: ಇತ್ತ ನೋಂದಣಿ ಹಾಗೂ ಮುದ್ರಾಂಕ ಇಲಾಖೆಯೂ ತ್ರೈಮಾಸಿಕ ಗುರಿ ಮೀರಿ ತೆರಿಗೆ ಸಂಗ್ರಹಿಸಿದೆ. ಮೊದಲ ತ್ರೈಮಾಸಿಕದಲ್ಲಿ 3,897 ಕೋಟಿ ರೂ. ತೆರಿಗೆ ಸಂಗ್ರಹಿಸಿದೆ. 2,962 ಕೋಟಿ ರೂ. ತ್ರೈಮಾಸಿಕ ಗುರಿಗಿಂತ 934 ಕೋಟಿ ರೂ. ಹೆಚ್ಚುವರಿ ತೆರಿಗೆ ಸಂಗ್ರಹಿಸಲಾಗಿದೆ.