ಕರ್ನಾಟಕ

karnataka

ETV Bharat / state

ಉಚಿತ ಸಿಲಿಂಡರ್ ನೀಡಲು ಸಾಧ್ಯವಿಲ್ಲ: ಹೈಕೋರ್ಟ್ ಮುಂದೆ ಸಂಕಟ ಹೇಳಿಕೊಂಡ ಸರ್ಕಾರ - High Court news

ಲಾಕ್​​ಡೌನ್​​ನಿಂದಾಗಿ ಹಣವಿಲ್ಲದೇ ಸಿಲಿಂಡರ್ ಖರೀದಿಸಲು ಸಾಧ್ಯವಾಗದ ಬಡವರಿಗೆ ತಲಾ ಒಂದು ಸಿಲಿಂಡರ್ ಖರೀದಿಸಲು ಸಬ್ಸಿಡಿ ರೂಪದಲ್ಲಿ ನೆರವು ನೀಡಲು ಸಾಧ್ಯವೇ ಎಂಬ ಸೂಚನೆಗೆ ರಾಜ್ಯ ಸರ್ಕಾರ ಉತ್ತರ ನೀಡಿದೆ. ಇದೇ ವೇಳೆ, ಹೈಕೋರ್ಟ್ ಮುಂದೆ ಇಂದು ತನ್ನ ಸಂಕಟವನ್ನೂ ಹೇಳಿಕೊಂಡಿದೆ.

State Government has been reaction about free cylinder
ಹೈಕೋರ್ಟ್

By

Published : May 5, 2020, 7:43 PM IST

ಬೆಂಗಳೂರು: ನಮ್ಮ ಆರ್ಥಿಕ ಪರಿಸ್ಥಿತಿ ಅಷ್ಟೇನೂ ಚೆನ್ನಾಗಿಲ್ಲ ಎಂದು ರಾಜ್ಯ ಸರ್ಕಾರ‌ ಹೈಕೋರ್ಟ್ ಮುಂದೆ ಸಂಕಟ ಹೇಳಿಕೊಂಡಿದೆ. ರಾಜ್ಯದ ಕಡು ಬಡವರಿಗೆ ತಲಾ ಒಂದು ಸಿಲಿಂಡರ್​​ಗೆ ಸಬ್ಸಿಡಿ ಹಣ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿರುವ ಸರ್ಕಾರದ ಪರ ವಕೀಲರು, ಉಚಿತವಾಗಿ ಸಿಲಿಂಡರ್ ನೀಡುವ ಪರಿಸ್ಥಿತಿಯಲ್ಲಿ ಸರ್ಕಾರ ಇಲ್ಲ ಎಂದು ತಿಳಿಸಿದ್ದಾರೆ.

ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಉಜ್ವಲಾ ಯೋಜನೆ ಹಾಗೂ ರಾಜ್ಯ ಸರ್ಕಾರದ ಮುಖ್ಯಮಂತ್ರಿ ಅನಿಲಭಾಗ್ಯ ಯೋಜನೆ ವ್ಯಾಪ್ತಿಗೆ ಒಳಪಡದ ಹಾಗೂ ಅಡುಗೆ ಅನಿಲ‌ ಸಂಪರ್ಕ ಹೊಂದಿದ್ದೂ ಲಾಕ್​​ಡೌನ್​​ನಿಂದಾಗಿ ಹಣವಿಲ್ಲದೇ ಸಿಲಿಂಡರ್ ಖರೀದಿಸಲು ಸಾಧ್ಯವಾಗದ ಬಡವರಿಗೆ ತಲಾ ಒಂದು ಸಿಲಿಂಡರ್ ಖರೀದಿಸಲು ಸಬ್ಸಿಡಿ ರೂಪದಲ್ಲಿ ನೆರವು ನೀಡಲು ಸಾಧ್ಯವೇ ಎಂದು ತಿಳಿಸಲು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚಿಸಿತ್ತು. ಈ ಕುರಿತು ಸ್ಪಷ್ಟನೆ ನೀಡಿರುವ ಸರ್ಕಾರ, ಉಚಿತ ಅಥವಾ ಪೂರ್ಣ ಸಬ್ಸಿಡಿ ದರದಲ್ಲಿ ಅಡುಗೆ ಅನಿಲ ಸಿಲಿಂಡರ್ ಪೂರೈಸುವ ಸ್ಥಿತಿಯಲ್ಲಿ ಸರ್ಕಾರ ಇಲ್ಲ ಎಂದು ಹೇಳಿದೆ.

ಕೊರೊನಾ ಮತ್ತು ಲಾಕ್​ಡೌನ್​​ನಿಂದಾಗಿ ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಸಲ್ಲಿಸಿರುವ ವಿವಿಧ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ಹಾಗೂ ನ್ಯಾ. ಬಿ.ವಿ. ನಾಗರತ್ನ ಅವರಿದ್ದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಿತು.

ಈ ವೇಳೆ ಸರ್ಕಾರದ ಪರ ಲಿಖಿತ ವಾದ ಮಂಡಿಸಿದ ವಕೀಲ ವಿಕ್ರಂ ಹುಯಿಲಹಗೋಳ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಉಚಿತ ಯೋಜನೆಗಳ ವ್ಯಾಪ್ತಿಗೆ ಒಳಪಡದ ಬಡ ಜನರಿಗೆ ಉಚಿತವಾಗಿ ಅಡುಗೆ ಅನಿಲ ಸಿಲಿಂಡರ್ ಪೂರೈಸುವ ಅಥವಾ ಸಿಲಿಂಡರ್ ಖರೀದಿಸಲು ಆರ್ಥಿಕ ನೆರವು ನೀಡುವ ಸ್ಥಿತಿಯಲ್ಲಿ ಸರ್ಕಾರ ಇಲ್ಲ ಎಂದು ಪೀಠಕ್ಕೆ ತಿಳಿಸಿದರು. ಸರ್ಕಾರದ ಹೇಳಿಕೆ ದಾಖಲಿಸಿಕೊಂಡ ಪೀಠ ವಿಚಾರಣೆ ಮುಂದೂಡಿತು.

ರಾಜ್ಯದಲ್ಲಿರುವ 1.60 ಕೋಟಿ ಎಲ್‍ಪಿಜಿ ಸಂಪರ್ಕಗಳ ಪೈಕಿ 31.17 ಲಕ್ಷ ಕುಟುಂಬಗಳಿಗೆ ಪ್ರಧಾನಮಂತ್ರಿ ಉಜ್ವಲಾ ಯೋಜನೆಯಡಿ ನೆರವು ನೀಡಲಾಗುತ್ತಿದೆ. ಅದೇ ರೀತಿ ಮುಖ್ಯಮಂತ್ರಿ ಅನಿಲಭಾಗ್ಯ ಯೋಜನೆಯಡಿ 1 ಲಕ್ಷ ಕುಟುಂಬಗಳಿಗೆ ಮೇ ತಿಂಗಳಿಂದ ಉಚಿತವಾಗಿ ಮೂರು ಸಿಲಿಂಡರ್ ಒದಗಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಆದರೆ, ಈ ಎರಡೂ ಯೋಜನೆ ವ್ಯಾಪ್ತಿಗೆ ಬಾರದ ಕುಟುಂಬಗಳಿಗೆ ಸಿಲಿಂಡರ್ ಖರೀದಿಸಲು ಸಹಾಯಧನ ನೀಡುವ ಕುರಿತು ನಿರ್ಣಯ ತೆಗೆದುಕೊಳ್ಳಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿತ್ತು.

ABOUT THE AUTHOR

...view details