ಬೆಂಗಳೂರು:ರಾಜ್ಯದ ಜನಸಂಖ್ಯೆ ಸದ್ಯ 7 ಕೋಟಿ ಮೀರುತ್ತಿದೆ. ನಿಯಂತ್ರಣಕ್ಕೆ ಜನರೇ ಒಂದಿಷ್ಟು ಮಾರ್ಗ ಹುಡುಕಿಕೊಂಡಿದ್ದು ಬಿಟ್ಟರೆ ಸರ್ಕಾರದಿಂದ ಯಾವುದೇ ಪರಿಣಾಮಕಾರಿ ಯೋಜನೆ ಜಾರಿಗೆ ಬಂದಿಲ್ಲ. ಹೀಗಾಗಿ ರಾಜ್ಯದ ಜನಸಂಖ್ಯೆ ಮಿತಿ ಮೀರಿ ಬೆಳೆಯುತ್ತಿದೆ.
ಕಳೆದ 10 ವರ್ಷದಲ್ಲಿ ರಾಜ್ಯದಲ್ಲಿ ಐವರು ಮುಖ್ಯಮಂತ್ರಿಗಳು ಆಡಳಿತ ನಡೆಸಿದ್ದಾರೆ. ಹಾಲಿ ಸಿಎಂ ಬಿ ಎಸ್ ಯಡಿಯೂರಪ್ಪ ಇದೇ ಅವಧಿಯಲ್ಲಿ ಮೂರನೇ ಬಾರಿ ಸಿಎಂ ಆಗಿದ್ದಾರೆ. 10 ವರ್ಷ ಕಾಲಾವಧಿಯಲ್ಲಿ ಮೊದಲ ಮೂರು ವರ್ಷ ಹಾಗೂ ನಂತರದ ಎರಡು ವರ್ಷ ಸರ್ಕಾರವೇ ಅತಂತ್ರ ಸ್ಥಿತಿ ಎದುರಿಸಿದೆ. ಈ ಸಂದರ್ಭ ಸರ್ಕಾರ ಉಳಿಸಿಕೊಳ್ಳಲು ಹರಸಾಹಸ ನಡೆದಿದೆಯೇ ಹೊರತು ಯಾವುದೇ ಜನಸಂಖ್ಯೆ ನಿಯಂತ್ರಣಕ್ಕೆ ಸಂಬಂಧಿಸಿ ಯಾವ ಯೋಜನೆ ಬಗ್ಗೆ ಯೋಚಿಸುವ ಕಾರ್ಯ ಕೂಡ ಆಗಿಲ್ಲ.
ಇನ್ನು, ದೇವರಾಜ್ ಅರಸು ನಂತರ ಪೂರ್ಣಾವಧಿ ಅಧಿಕಾರ ನೀಡಿದ ಸಿದ್ದರಾಮಯ್ಯ ಕೂಡ ವಿವಿಧ ಭಾಗ್ಯಗಳನ್ನು ಜನರಿಗೆ ನೀಡಿದರಾದ್ರೂ, ಜನಸಂಖ್ಯೆ ನಿಯಂತ್ರಣ ವಿಚಾರದಲ್ಲಿ ಯಾವುದೇ ಮಹತ್ವದ ತೀರ್ಮಾನ ಕೈಗೊಳ್ಳಲಿಲ್ಲ. ಹಲವು ಜನಹಿತ ಯೋಜನೆ ತಂದರಾದ್ರೂ ಜನಸಂಖ್ಯೆ ನಿಯಂತ್ರಣಕ್ಕೆ ಹೇಳಿಕೊಳ್ಳುವ ಕಾರ್ಯ, ಯೋಜನೆ ಜಾರಿಗೆ ತರಲಿಲ್ಲ.
ಸರ್ಕಾರಗಳು ಅಧಿಕಾರಕ್ಕೆ ಬಂದವಾದ್ರೂ, ತಮ್ಮ ಅಸ್ತಿತ್ವ ಉಳಿಸಿಕೊಳ್ಳುವುದಕ್ಕೆ ಹೆಣಗಾಡಿದವೇ ಹೊರತು, ಜನಸಂಖ್ಯೆ ಹೆಚ್ಚಳಕ್ಕೆ ಕಡಿವಾಣ ಹಾಕಬೇಕೆಂಬ ಚಿಂತನೆ ನಡೆಸಲಿಲ್ಲ. ಇದರಿಂದಾಗಿ ಇಂದು ಪ್ರಜ್ಞಾವಂತ ಸಮುದಾಯ ಇರುವ ಕಡೆ ಜನಸಂಖ್ಯೆ ಸಾಕಷ್ಟು ನಿಯಂತ್ರಣದಲ್ಲಿದೆ. ಬಡವರು, ಅವಿದ್ಯಾವಂತರು ಇರುವ ಪ್ರದೇಶದಲ್ಲಿ ಜನಸಂಖ್ಯೆಯ ನಿಯಂತ್ರಣವಾಗಿಲ್ಲ. ಇಲ್ಲಿ ಸರ್ಕಾರ ಕೂಡ ಸೂಕ್ತ ಜಾಗೃತಿ ಮೂಡಿಸುವ ಕೆಲಸ ಮಾಡಿಲ್ಲ. ಉತ್ತಮ ಭವಿಷ್ಯ ಕಲ್ಪಿಸುವ ಯೋಜನೆ ಘೋಷಿಸುವ ಕಾರ್ಯವನ್ನೂ ಮಾಡದ ಸರ್ಕಾರ ಜನಜಾಗೃತಿಯನ್ನೂ ಮೂಡಿಸಿಲ್ಲ ಎನ್ನುವ ಆರೋಪ ಇದೆ.