ಬೆಂಗಳೂರು:ಆರ್ಥಿಕವಾಗಿ ಸಂಕಷ್ಟ ಎದುರಿಸುತ್ತಿರುವ ರಾಜ್ಯ ಸರ್ಕಾರ ಮೊದಲ ತ್ರೈಮಾಸಿಕದಲ್ಲಿ ಮುಕ್ತ ಮಾರುಕಟ್ಟೆಯಿಂದ ಯಾವುದೇ ಸಾಲ ಮಾಡದಿರಲು ನಿರ್ಧರಿಸಿದೆ. ಸಾಲದ ಮೂಲಕವೇ ಬಹುಪಾಲು ಬೊಕ್ಕಸ ನಿರ್ವಹಿಸಬೇಕಾದ ರಾಜ್ಯ ಸರ್ಕಾರದ ಹಣಕಾಸು ಲೆಕ್ಕಾಚಾರ ಏನೆಂಬ ವರದಿ ಇಲ್ಲಿದೆ.
ರಾಜ್ಯ ಸರ್ಕಾರ ಈ ಬಾರಿಯೂ ಸಾಲವನ್ನು ಬಹುವಾಗಿ ನಂಬಿದೆ. ಆದಾಯ ಸಂಗ್ರಹ ನಿರೀಕ್ಷಿತ ಪ್ರಮಾಣದಲ್ಲಿ ಚೇತರಿಕೆ ಕಾಣುತ್ತಿದ್ದರೂ, ಜಿಎಸ್ಟಿ ಪರಿಹಾರ ಈ ಜೂನ್ಗೆ ಮುಕ್ತಾಯವಾಗಲಿದೆ. ಹೀಗಾಗಿ ರಾಜ್ಯದ ರಾಜಸ್ವ ಸಂಗ್ರಹಕ್ಕೆ ಈ ಸಲ ಭಾರಿ ಹಿನ್ನಡೆಯಾಗಲಿದೆ. ಹೀಗಾಗಿ ಸಿಎಂ ಬೊಮ್ಮಾಯಿ ಈ ಬಾರಿ ಆದಾಯ ಕೊರತೆ ಬಜೆಟ್ ಮಂಡಿಸಿದ್ದಾರೆ.
ಬಜೆಟ್ ಅಂದಾಜಿನ ಪ್ರಕಾರ ರಾಜ್ಯ ಸರ್ಕಾರ 2022-23ರ ಸಾಲಿನಲ್ಲಿ 2.61 ಲಕ್ಷ ಕೋಟಿ ರೂ. ರಾಜಸ್ವ ಸ್ವೀಕೃತಿ ಮಾಡುವ ನಿರೀಕ್ಷೆ ಇಟ್ಟಿದೆ. ಆದರೆ ಒಟ್ಟು ವೆಚ್ಚ 2.65 ಲಕ್ಷ ಕೋಟಿ ರೂ. ಅಂದಾಜು ಮಾಡಲಾಗಿದೆ. ಆ ಮೂಲಕ 14,699 ಕೋಟಿ ರೂ. ಆದಾಯ ಕೊರತೆಯ ಬಜೆಟ್ ಮಂಡಿಸಲಾಗಿದೆ. ಆದಾಯ ಕೊರತೆ ನೀಗಿಸಲು ಸರ್ಕಾರ ಈ ಬಾರಿ ಒಟ್ಟು 72,089 ಕೋಟಿ ಸಾಲ ಮಾಡಲು ಯೋಜಿಸಿದೆ. ಆ ಪೈಕಿ 67,911 ಕೋಟಿ ರೂ. ಮುಕ್ತ ಮಾರುಕಟ್ಟೆ ಮೂಲಕ ಸಾಲ ಮಾಡಲು ಮುಂದಾಗಿದೆ.
ಮಾರುಕಟ್ಟೆಯಿಂದ ಸಾಲ ಎತ್ತುವಳಿ ಮಾಡದ ರಾಜ್ಯ:ಕೊರತೆ ಆದಾಯವನ್ನು ನೀಗಿಸಲು ರಾಜ್ಯ ಸರ್ಕಾರಕ್ಕೆ ಸಾಲ ಎತ್ತುವುದು ಅನಿವಾರ್ಯವಾಗಿದೆ. ಆದರೆ, ಇಲ್ಲಿವರೆಗೂ ಕರ್ನಾಟಕ ಆರ್ಬಿಐ ಮೂಲಕ ಮಾರುಕಟ್ಟೆಯಿಂದ ಸಾಲ ಎತ್ತುವಳಿ ಮಾಡಿಲ್ಲ. ಮೊದಲ ಏಪ್ರಿಲ್-ಜೂನ್ ಮುಗಿಯಲಿರುವ ಮೊದಲ ತ್ರೈಮಾಸಿಕದಲ್ಲಿ ರಾಜ್ಯ ಸರ್ಕಾರ ಆರ್ಬಿಐ ಮೂಲಕ ಮುಕ್ತ ಮಾರುಕಟ್ಟೆಯಲ್ಲಿ ಸಾಲ ಎತ್ತುವಳಿ ಮಾಡದಿರಲು ನಿರ್ಧರಿಸಿದೆ.
ಮೊದಲ ತ್ರೈಮಾಸಿಕದಲ್ಲಿ ಆರ್ಬಿಐ ಮೂಲಕ ಮುಕ್ತ ಮಾರುಕಟ್ಟೆಯಲ್ಲಿ ಯಾವುದೇ ಸಾಲ ಎತ್ತುವಳಿ ಮಾಡದ ರಾಜ್ಯ ಸರ್ಕಾರ ಜುಲೈ-ಸೆಪ್ಟೆಂಬರ್ವರೆಗಿನ ಎರಡನೇ ತ್ರೈಮಾಸಿಕದಲ್ಲಿ ಸಾಲ ಎತ್ತುವಳಿ ಮಾಡುವ ಸಾಧ್ಯತೆ ಇದೆ. ಪರಿಸ್ಥಿತಿ ಅವಲೋಕಿಸಿ ಸಾಲ ಎತ್ತುವಳಿ ಮಾಡುವ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಆರ್ಥಿಕ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಈಗಾಗಲೇ ಆರ್ಬಿಐ ಕೈಗೊಳ್ಳುವ ಮಾರುಕಟ್ಟೆ ಸಾಲ ಎತ್ತುವಳಿ ಹರಾಜಿನಲ್ಲಿ ತಮಿಳುನಾಡು, ಪಶ್ಚಿಮ ಬಂಗಾಳ, ರಾಜಸ್ಥಾನ, ಗುಜರಾತ್, ಪಂಜಾಬ್, ಆಂಧ್ರ ಪ್ರದೇಶ ಹಾಗೂ ಕೇರಳ ಮೊದಲ ತ್ರೈಮಾಸಿಕ ಪೂರ್ತಿ ಸಾಲ ಎತ್ತುವಳಿ ಮಾಡಿದೆ. ಆದರೆ, ಕರ್ನಾಟಕ ಮಾತ್ರ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ಸಾಲ ಎತ್ತುವಳಿ ಮಾಡುವ ಗೋಜಿಗೆ ಹೋಗಿಲ್ಲ.
ಸಾಲ ಮಾಡದ ಸರ್ಕಾರದ ಲೆಕ್ಕಾಚಾರ ಏನು?:ಸಾಮಾನ್ಯವಾಗಿ ಆರ್ಬಿಐ ಮೂಲಕ ರಾಜ್ಯ ಸರ್ಕಾರ ರಾಜ್ಯ ಅಭಿವೃದ್ಧಿ ಸಾಲ (ಎಸ್ಡಿಎಲ್)ವನ್ನು ಪಡೆಯುತ್ತದೆ. ಈ ಮುಕ್ತ ಮಾರುಕಟ್ಟೆ ಸಾಲದ ಮೂಲಕ ಆದಾಯ ಕೊರತೆಯನ್ನು ನೀಗಿಸುತ್ತದೆ. ಆದರೆ, ಕರ್ನಾಟಕ ಮೊದಲ ತ್ರೈಮಾಸಿಕದಲ್ಲಿ ಸಾಲ ಎತ್ತುವಳಿ ಮಾಡದೇ ಇರುವುದು ಅಚ್ಚರಿ ಮೂಡಿಸಿದೆ.
ರಾಜ್ಯ ಸರ್ಕಾರ ಇಲ್ಲಿಯವರೆಗೆ ಮಾರುಕಟ್ಟೆಯಿಂದ ಸಾಲ ಎತ್ತುವಳಿ ಮಾಡದೇ ಇರಲು ಕಾರಣ ಸುಧಾರಿಸುತ್ತಿರುವ ಆದಾಯ ಸಂಗ್ರಹ ಎಂದು ಆರ್ಥಿಕ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ವರ್ಷವೂ ನಂತರದ ತ್ರೈಮಾಸಿಕದಲ್ಲಿ ಸಾಲ ಎತ್ತುವಳಿ ಮಾಡಿದ್ದೇವೆ. ಈ ಬಾರಿನೂ ಆರ್ಥಿಕ ಪರಿಸ್ಥಿತಿ, ಅಗತ್ಯತೆಯನ್ನು ಮನಗಂಡು ಸಾಲ ಮಾಡುವ ನಿರ್ಧಾರಕ್ಕೆ ಬರುತ್ತೇವೆ ಎಂದಿದ್ದಾರೆ.
ಕಳೆದ ಬಾರಿಗಿಂತ ಈ ಬಾರಿ ತೆರಿಗೆ ಸಂಗ್ರಹದಲ್ಲಿ ಉತ್ತಮ ಚೇತರಿಕೆ ಕಾಣುತ್ತಿದೆ. ಇತ್ತ ಜಿಎಸ್ಟಿ ಪರಿಹಾರವಾಗಿ ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಕಳೆದ ತಿಂಗಳು 8,542 ಕೋಟಿ ಮೊತ್ತ ಬಿಡುಗಡೆ ಮಾಡಿದೆ. ಇದು ರಾಜ್ಯಕ್ಕೆ ನಿಟ್ಟುಸಿರುವ ಬಿಡುವಂತೆ ಮಾಡಿದೆ. ಹೀಗಾಗಿ ಈವರೆಗೆ ರಾಜ್ಯ ಸರ್ಕಾರ ಆರ್ಬಿಐ ಮೂಲಕ ಸಾಲ ಎತ್ತುವಳಿ ಮಾಡಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದೇ ಮೇ ತಿಂಗಳಲ್ಲಿ ಕೇಂದ್ರ ಸರ್ಕಾರ 8,633 ಕೋಟಿ ರೂ. ಜಿಎಸ್ಟಿ ಪರಿಹಾರ ಮೊತ್ತವನ್ನು ಬಿಡುಗಡೆ ಮಾಡಿದೆ. ಆ ಮೂಲಕ ಮೇ ಅಂತ್ಯದವರೆಗೆ ಬಾಕಿ ಇದ್ದ ಎಲ್ಲಾ ಜಿಎಸ್ಟಿ ಪರಿಹಾರ ಮೊತ್ತವನ್ನು ಪಾವತಿ ಮಾಡಲಾಗಿದೆ. ಇದು ಬೊಕ್ಕಸಕ್ಕೆ ಸ್ವಲ್ಪ ಬಲ ನೀಡಿದೆ. ಸದ್ಯ ಜೂನ್ ತಿಂಗಳ ಬಾಪ್ತು ಸುಮಾರು 6,000 ಕೋಟಿ ರೂ. ಜಿಎಸ್ಟಿ ಪರಿಹಾರ ಬಾಕಿ ಉಳಿದುಕೊಂಡಿದೆ. ಆದಾಯ ಸಂಗ್ರಹದಲ್ಲಿನ ಚೇತರಿಕೆ, ಕೇಂದ್ರದ ಸಹಾಯನುದಾನದ ಹಿನ್ನೆಲೆಯಲ್ಲಿ ಮೊದಲ ತ್ರೈಮಾಸಿಕದಲ್ಲಿ ಸಾಲ ಮಾಡದಿರಲು ನಿರ್ಧರಿಸಿದೆ.
ಇದನ್ನೂ ಓದಿ:ಮಹಾ ಬಿಕ್ಕಟ್ಟು: ಸೂರತ್ ಹೋಟೆಲ್‌ನಿಂದ ಗುವಾಹಟಿಗೆ ಶಿವಸೇನಾ ಶಾಸಕರ ಸ್ಥಳಾಂತರ