ಕರ್ನಾಟಕ

karnataka

ETV Bharat / state

ಆದಾಯ ಕೊರತೆ: 60 ಸಾವಿರ ಕೋಟಿ ರೂ. ಸಾಲ ಪಡೆದ ರಾಜ್ಯ ಸರ್ಕಾರ - State government debt in fiscal year

ಆರ್​ಬಿಐ ಅಂಕಿ-ಅಂಶದ ಪ್ರಕಾರ, 2020-21ರ ಆರ್ಥಿಕ ವರ್ಷದಲ್ಲಿ ಸರ್ಕಾರ ಏಪ್ರಿಲ್​ನಿಂದ ಜುಲೈವರೆಗೆ 12,000 ಕೋಟಿ ರೂ. ಸಾಲ ಪಡೆದಿದೆ.

state-government-debt-in-fiscal-year
ವಿಧಾನಸೌಧ

By

Published : Feb 28, 2021, 8:36 PM IST

Updated : Mar 1, 2021, 5:24 PM IST

ಬೆಂಗಳೂರು:ಲಾಕ್‌ಡೌನ್ ಹಿನ್ನೆಲೆ ರಾಜ್ಯ ತೀವ್ರ ಆರ್ಥಿಕ ಸಂಕಷ್ಟ ಅನುಭವಿಸುತ್ತಿದ್ದು, ಸಾಲದ ಮೊರೆ ಹೋಗಲು ನಿರ್ಧರಿಸಿದೆ. ಆದಾಯ ಕೊರತೆಯನ್ನು ನೀಗಿಸಲು ಸಾಲಕ್ಕೆ ಕೈ ಹಾಕಿದೆ. ಈವರೆಗೆ ರಾಜ್ಯ ಸರ್ಕಾರ ಮಾಡಿರುವ ಸಾಲದ ಸಮಗ್ರ ವರದಿ ಇಲ್ಲಿದೆ.

ಲಾಕ್‌ಡೌನ್ ಹಿನ್ನೆಲೆ ರಾಜ್ಯ ಸರ್ಕಾರ ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುವುದು ಗೊತ್ತಿರುವ ವಿಚಾರ. ಈ ಅನಿವಾರ್ಯತೆ ಸ್ಥಿತಿಯಲ್ಲಿರುವ ಸರ್ಕಾರ 33 ಸಾವಿರ ಕೋಟಿ ರೂ. ಹೆಚ್ಚುವರಿ ಸಾಲವನ್ನು ಮಾರುಕಟ್ಟೆಯಿಂದ ಎತ್ತುವಳಿ ಮಾಡಲು ನಿರ್ಧರಿಸಿದೆ. ಪ್ರಸಕ್ತ ವರ್ಷದಲ್ಲಿ 2,37,893(2.37 ಲಕ್ಷ ಕೋಟಿ) ಕೋಟಿ ರೂ. ಗಾತ್ರದ ಆಯವ್ಯಯ ಮಂಡಿಸಿದ್ದು 1,79,920 ಕೋಟಿ ರೂ. ಆದಾಯ ನಿರೀಕ್ಷೆ ಮಾಡಲಾಗಿತ್ತು. ಆದರೆ, ಲಾಕ್​ಡೌನ್​ನಿಂದಾಗಿ ಸರ್ಕಾರಕ್ಕೆ 65,920 ಕೋಟಿ ರೂ. ಹಣದ ಕೊರತೆ ಎದುರಾಗಲಿದೆ. ಕೊರೊನಾ ಸಂಕಷ್ಟದಿಂದಾಗಿ ಕೇಂದ್ರ ಸರ್ಕಾರವು, ರಾಜ್ಯದ ಒಟ್ಟು ನಿವ್ವಳ ಜಿಡಿಪಿ ಮೇಲೆ ಶೇ 3 ರಿಂದ 5ರವರೆಗೆ ಸಾಲ ಪಡೆಯಲು ಅವಕಾಶ ನೀಡಿದೆ. ಇದರಿಂದ 36,700 ಕೋಟಿ ರೂ. ಹೆಚ್ಚುವರಿ ಸಾಲ ಪಡೆಯಲು ಸರ್ಕಾರಕ್ಕೆ ಅವಕಾಶ ಸಿಕ್ಕಂತಾಗಿದೆ.

ಈವರೆಗೆ 60,000 ಕೋಟಿ ರೂ. ಸಾಲ:ಅಭಿವೃದ್ಧಿ ಕೆಲಸ ಹಾಗೂ ಸರ್ಕಾರಿ ನೌಕರರ ವೇತನಕ್ಕಾಗಿ ಈ ಬಾರಿ ಸರ್ಕಾರ ಸಾಲವನ್ನೇ ಬಹುವಾಗಿ ನೆಚ್ಚಿಕೊಂಡಿದೆ. ಅದರಂತೆ ಫೆಬ್ರವರಿವರೆಗೆ ರಾಜ್ಯ ಸರ್ಕಾರ ಆರ್​ಬಿಐ ಮೂಲಕ ಬರೋಬ್ಬರಿ 60,000 ಕೋಟಿ ರೂ. ಸಾಲ ಎತ್ತುವಳಿ ಮಾಡಿದೆ.

ಆರ್​ಬಿಐ ಅಂಕಿಅಂಶದ ಪ್ರಕಾರ, 2020-21ರ ಆರ್ಥಿಕ ವರ್ಷದಲ್ಲಿ ಸರ್ಕಾರ ಏಪ್ರಿಲ್​ನಿಂದ ಜುಲೈವರೆಗೆ 12,000 ಕೋಟಿ ರೂ. ಸಾಲ ಪಡೆದಿದೆ. ರಾಜ್ಯ ಸರ್ಕಾರ ಆರ್​ಬಿಐ ಮೂಲಕ ರಾಜ್ಯ ಅಭಿವೃದ್ಧಿ ಸಾಲ (ಎಸ್ ಡಿಎಲ್)ವನ್ನು ಪಡೆಯುತ್ತಿದೆ. ಆಗಸ್ಟ್ ತಿಂಗಳಲ್ಲಿ ಸರ್ಕಾರ ಒಟ್ಟು 7,000 ಕೋಟಿ ರೂ. ಸಾಲ ಎತ್ತುವಳಿ ಮಾಡಿದೆ. ಇನ್ನು ಸೆಪ್ಟೆಂಬರ್​ನಲ್ಲಿ ಒಟ್ಟು 10,000 ಕೋಟಿ ರೂ‌. ಸಾಲ ಮಾಡಿದೆ.

ಅಕ್ಟೋಬರ್ ತಿಂಗಳಲ್ಲಿ ಆರ್​ಬಿಐ ಮೂಲಕ 8,000 ಕೋಟಿ ರೂ. ರಾಜ್ಯ ಅಭಿವೃದ್ಧಿ ಸಾಲ, ನವೆಂಬರ್​ನಲ್ಲಿ ರಾಜ್ಯ ಸರ್ಕಾರ 8,000 ಕೋಟಿ ರೂ. ಸಾಲ ಎತ್ತುವಳಿ ಮಾಡಿದ್ದರೆ, ಡಿಸೆಂಬರನಲ್ಲಿ ಒಟ್ಟು 10,000 ಕೋಟಿ ರೂ‌. ಸಾಲ ಪಡೆದಿದೆ. ಜನವರಿಯಲ್ಲಿ 2,000 ಕೋಟಿ ರೂ. ಸಾಲ ಮಾಡಿರುವ ಸರ್ಕಾರ ಫೆಬ್ರವರಿ ತಿಂಗಳಲ್ಲಿ 3000 ಕೋಟಿ ರೂ. ಸಾಲ ಮಾಡಿದೆ. ಆರ್ಥಿಕ ವರ್ಷದ ಕೊನೆ ತಿಂಗಳಾದ ಮಾರ್ಚ್​ನಲ್ಲೂ ಸುಮಾರು 6,000 ಕೋಟಿ ರೂ. ಸಾಲ ಮಾಡಲು ಯೋಜಿಸಿದೆ. ಆ ಮೂಲಕ ರಾಜ್ಯ ಸರ್ಕಾರ 2020-21ನೇ ಸಾಲಿನಲ್ಲಿ ಫೆಬ್ರವರಿವರೆಗೆ ಬರೋಬ್ಬರಿ 60,000 ಕೋಟಿ ರೂ. ಸಾಲ ಮಾಡಿಕೊಂಡಿದೆ.

ಕಳೆದ ವರ್ಷ ಮಾಡಿದ ಸಾಲ 49,500 ಕೋಟಿ ರೂ: ಕಳೆದ 2019-20ರ ಆರ್ಥಿಕ ವರ್ಷದಲ್ಲಿ ಕರ್ನಾಟಕ ಆರ್​ಬಿಐ ಮೂಲಕ ಎಸ್​ಡಿಎಲ್​ ರೂಪದಲ್ಲಿ ಒಟ್ಟು 49,500 ಕೋಟಿ ರೂ. ಸಾಲ ಮಾಡಿತ್ತು. ಫೆಬ್ರವರಿವರೆಗೆ ಒಟ್ಟು 43,100 ಕೋಟಿ ರೂ. ಸಾಲ ಮಾಡಿತ್ತು.

ಕಳೆದ ವರ್ಷ ಇದೇ ಫೆಬ್ರವರಿ ತಿಂಗಳಾಂತ್ಯಕ್ಕೆ ಹೋಲಿಸಿದರೆ ಈ ವರ್ಷ 16,900 ಕೋಟಿ ರೂ.ರಷ್ಟು ಹೆಚ್ಚಿನ ಸಾಲ ಪಡೆದುಕೊಳ್ಳಲಾಗಿದೆ. ಅಂದರೆ, ಈ ಬಾರಿ ಏಪ್ರಿಲ್​ನಿಂದ ಫೆಬ್ರವರಿವರೆಗೆ ಒಟ್ಟು ಸಾಲದಲ್ಲಿ ಶೇ 39 ರಷ್ಟು ವೃದ್ಧಿಯಾಗಿದೆ.

ಓದಿ:ಯೂಟ್ಯೂಬ್​ ನೋಡಿ ದರೋಡೆಗೆ ಮಾಸ್ಟರ್​​ ಪ್ಲಾನ್​.. ಅಷ್ಟೆಲ್ಲಾ ಮಾಡಿದ್ರೂ ನಡೀಲಿಲ್ಲ ಆಟ..

ಜಿಎಸ್‌ಟಿ ಪರಿಹಾರ 11,324 ಕೋಟಿ ರೂ.ಗಳನ್ನು ಕೇಂದ್ರ ಸರ್ಕಾರದ ಮರುಪಾವತಿ ಭರವಸೆಯೊಂದಿಗೆ ಸಾಲ ಮಾಡಲು ಅವಕಾಶ ನೀಡಲಾಗಿದೆ. ಇವುಗಳೆಲ್ಲದರ ಪರಿಣಾಮ ಈ ಆರ್ಥಿಕ ವರ್ಷದ ಅಂತ್ಯಕ್ಕೆ ರಾಜ್ಯದ ಒಟ್ಟು ಸಾಲ 4.19 ಲಕ್ಷ ಕೋಟಿ ರೂ.ಗಳಿಗೆ ಹೆಚ್ಚಾಗುವ ಸಾಧ್ಯತೆ ಇದೆ.

Last Updated : Mar 1, 2021, 5:24 PM IST

ABOUT THE AUTHOR

...view details