ಬೆಂಗಳೂರು: ಆನ್‌ಲೈನ್ ಸುರಕ್ಷತೆ ಮತ್ತು ಡಿಜಿಟಲ್ ಪೌರತ್ವದ ಕುರಿತು ವಿದ್ಯಾರ್ಥಿಗಳು ಮತ್ತು ಶಿಕ್ಷಕರಲ್ಲಿ ಜಾಗೃತಿ ಮೂಡಿಸುವ ಎರಡು ಪ್ರಮುಖ ಉಪಕ್ರಮಗಳನ್ನು ಪ್ರಾರಂಭಿಸಲು ರಾಜ್ಯ ಸರ್ಕಾರ ಮಂಗಳವಾರ ಟೆಕ್ ಸಂಸ್ಥೆ ಮೆಟಾದೊಂದಿಗೆ ಒಪ್ಪಂದ ಪತ್ರಕ್ಕೆ ಸಹಿ ಹಾಕಿತು.
ಮೆಟಾ ಜೊತೆಗಿನ ಈ ಪಾಲುದಾರಿಕೆಯ ಮೂಲಕ ಕರ್ನಾಟಕ ಸರ್ಕಾರವು 2025ರ ವೇಳೆಗೆ 1 ಲಕ್ಷ ಶಿಕ್ಷಕರು ಮತ್ತು 10 ಲಕ್ಷ ವಿದ್ಯಾರ್ಥಿಗಳಿಗೆ ಡಿಜಿಟಲ್ ಸುರಕ್ಷತೆ ಮತ್ತು AR/VR ಕೌಶಲ್ಯಗಳಲ್ಲಿ ತರಬೇತಿ ನೀಡಲು ಯೋಜಿಸಿದೆ. ಆನ್‌ಲೈನ್ ಸುರಕ್ಷತಾ ಉಪಕ್ರಮದ ಅಡಿಯಲ್ಲಿ ರಾಜ್ಯಾದ್ಯಂತ 100 ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳ ಯುವಕರು (18-24 ವರ್ಷಗಳು) ಡಿಜಿಟಲ್ ಜಾಗೃತಿ ತರಬೇತಿ ಪಡೆಯಲಿದ್ದಾರೆ. ಡಿಜಿಟಲ್ ಸುರಕ್ಷತೆಯಲ್ಲಿನ ಹೊಸ ಟ್ರೆಂಡ್‌ಗಳ ಬಗ್ಗೆ ಹೆಚ್ಚು ಗಮನ ಹರಿಸುವುದು ಕಾರ್ಯಕ್ರಮದ ಉದ್ದೇಶ. ಮೆಟಾ, ಮಾಸ್ಟರ್ ಟ್ರೈನರ್‌ಗಳಿಗೆ ತರಬೇತಿ ನೀಡಲು ತರಬೇತುದಾರರನ್ನು ನಿಯೋಜಿಸಲಿದೆ.
ಡಿಜಿಟಲ್ ಪೌರತ್ವ ಉಪಕ್ರಮವು ಐಟಿಬಿಟಿ ಸಚಿವಾಲಯ ಮತ್ತು ಮೆಟಾ ನಡುವಿನ ಜಂಟಿ ಕಾರ್ಯಕ್ರಮವಾಗಿದ್ದು, ವಿವಿಧ ಸರ್ಕಾರಿ ಇಲಾಖೆಗಳಾದ್ಯಂತ ಮಾಹಿತಿ ಸೇವೆಗಳನ್ನು ತಲುಪಿಸಲು ವಾಟ್ಸ್‌ಆ್ಯಪ್ ಚಾಟ್‌ಬಾಟ್ ಅಭಿವೃದ್ಧಿಪಡಿಸಲಿದೆ. ಈ ಮೂಲಕ ನಾಗರಿಕ ಸಂವಹನಗಳನ್ನು ಸುವ್ಯವಸ್ಥಿತಗೊಳಿಸುವುದು ಮತ್ತು ನಾಗರಿಕ ಜಾಗೃತಿಗಾಗಿ ಡಿಜಿಟಲ್ ಸುರಕ್ಷತಾ ಚಾಟ್‌ಬಾಟ್ ರಚಿಸುವುದು ಈ ಕಾರ್ಯಕ್ರಮದ ಮೂಲ ಉದ್ದೇಶವಾಗಿದೆ.
ಇದನ್ನೂ ಓದಿ:ಫೇಸ್ಬುಕ್, ಇನ್ಸ್ಟಾದಿಂದ ನೇರವಾಗಿ ಅಮೆಜಾನ್ ಶಾಪಿಂಗ್ ; ಬರಲಿದೆ ಹೊಸ ವೈಶಿಷ್ಟ್ಯ