ಬೆಂಗಳೂರು:ರಾಜ್ಯದ 35 ಸರ್ಕಾರಿ ಪಾಲಿಟೆಕ್ನಿಕ್ಗಳಲ್ಲಿ ಆಧುನಿಕ ತಂತ್ರಜ್ಞಾನವಾದ ಕೈಗಾರಿಕಾ ಐಒಟಿ (ಇಂಟರ್ನೆಟ್ ಆಫ್ ಥಿಂಗ್ಸ್) ಪ್ರಯೋಗಾಲಯಗಳನ್ನು ಸ್ಥಾಪಿಸುವ ಗುರಿಯುಳ್ಳ ಮಹತ್ವದ ಒಡಂಬಡಿಕೆಗೆ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಹಾಗೂ ಸ್ಯಾಮ್ಸಂಗ್ ಸೆಮಿಕಂಡಕ್ಟರ್ ಇಂಡಿಯಾ ರೀಸರ್ಚ್ ಗುರುವಾರ ಅಂಕಿತ ಹಾಕಿದೆ. ವಿಕಾಸಸೌಧದಲ್ಲಿ ಇಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್ ಅಶ್ವತ್ಥನಾರಾಯಣ ಅವರ ಸಮ್ಮುಖದಲ್ಲಿ ಈ ಮಹತ್ವಾಕಾಂಕ್ಷಿ ಒಪ್ಪಂದ ನೆರವೇರಿತು. ಇಲಾಖೆಯ ಆಯುಕ್ತ ಪಿ.ಪ್ರದೀಪ್ ಮತ್ತು ಸ್ಯಾಮ್ಸಂಗ್ ಸೆಮಿಕಂಡಕ್ಟರ್ ಇಂಡಿಯಾ ರಿಸರ್ಚ್ನ ವ್ಯವಸ್ಥಾಪಕ ನಿರ್ದೇಶಕ ಬಾಲಾಜಿ ಸೌರಿರಾಜನ್ ಒಡಂಬಡಿಕೆಗೆ ಸಹಿ ಹಾಕಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, "ಅಂತಾರಾಷ್ಟ್ರೀಯ ಗುಣಮಟ್ಟದ ಈ ಪ್ರಯೋಗಾಲಯಗಳಿಂದ ಗ್ರಾಮೀಣ ವಿದ್ಯಾರ್ಥಿಗಳಿಗೆ ಲಾಭವಾಗಲಿದೆ. ಉದ್ಯಮಿಗಳು, ವಿಷಯ ಪರಿಣತರು ಮತ್ತು ಹಿರಿಯ ವಿದ್ಯಾರ್ಥಿಗಳೊಂದಿಗೆ ವಿಸ್ತೃತವಾಗಿ ಚರ್ಚಿಸಿ ಸ್ಥಾಪಿಸುತ್ತಿರುವ ಈ ಸೌಲಭ್ಯದಿಂದ ನಮ್ಮ ಯುವಜನರು ಉದ್ಯೋಗಕ್ಕೆ ಬೇಕಾದ ಕೌಶಲ್ಯಗಳನ್ನು ಕಲಿತುಕೊಂಡು, ಉದ್ಯೋಗಾರ್ಹರಾಗಲಿದ್ದಾರೆ. ಈ ಒಡಂಬಡಿಕೆಯ ಅಡಿಯಲ್ಲಿ ರಾಜ್ಯದ ಎರಡು ಕಡೆಗಳಲ್ಲಿ ಕೃತಕ ಬುದ್ಧಿಮತ್ತೆ (ಎಐ) ಪ್ರಯೋಗಾಲಯಗಳನ್ನೂ ಸ್ಥಾಪಿಸಲಾಗುವುದು" ಎಂದರು.
"ಈ ನೂತನ ಪ್ರಯೋಗಾಲಯಗಳು ಔರಾದ್, ಬಾಗೇಪಲ್ಲಿ, ಬೆಂಗಳೂರು, ಬೆಳಗಾವಿ, ಬೀದರ್, ಚಾಮರಾಜನಗರ, ದೇವದುರ್ಗ, ಹಾಣಗಲ್, ಹರಿಹರ, ಝಳಕಿ, ಜೋಯಿಡಾ, ಕಲಬುರಗಿ, ಕಲಗಿ, ಕಂಪ್ಲಿ, ಕೊಪ್ಪಳ, ಲಿಂಗಸುಗೂರು, ಮಂಗಳೂರು, ಮೊಸಳೆ ಹೊಸಹಳ್ಳಿ, ಮುಂಡಗೋಡು, ಮೈಸೂರು, ರಾಯಚೂರು, ರಾಮನಗರ, ಶಿರಾಳಕೊಪ್ಪ, ಶಿವಮೊಗ್ಗ, ಸಿದ್ಧಾಪುರ, ಶ್ರೀರಂಗಪಟ್ಟಣ, ಸುರಪುರ, ಉಡುಪಿ ಮತ್ತು ವಿಜಯಪುರದಲ್ಲಿ ಇರುವ ಸರಕಾರಿ ಪಾಲಿಟೆಕ್ನಿಕ್ಗಳಲ್ಲಿ ಅಸ್ತಿತ್ವಕ್ಕೆ ಬರಲಿವೆ" ಎಂದು ವಿವರಿಸಿದರು.