ಬೆಂಗಳೂರು:ಕೋವಿಡ್ ಪ್ರಕರಣ ಶೇ.2 ಕ್ಕಿಂತ ಹೆಚ್ಚಾದರೆ ಕಠಿಣ ನಿಯಮ ಜಾರಿಗೊಳಿಸಲು ಬಿಬಿಎಂಪಿ ಆಯುಕ್ತರಿಗೆ ಸೂಚನೆ ನೀಡಲಾಗಿದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.
ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ವೈಜ್ಞಾನಿಕವಾದಂತಹ, ಅಂಕಿ- ಅಂಶ ಸಮೇತವಾಗಿ ಸಭೆಯಲ್ಲಿ ಕೋವಿಡ್ ಸ್ಥಿತಿಗತಿ ಅವಲೋಕಿಸಲಾಗಿದೆ. ಪಕ್ಕದ ರಾಜ್ಯ ಕೇರಳ ಕೋವಿಡ್ ಸ್ಥಿತಿಗತಿ ಬಗ್ಗೆ ವಿವರವಾಗಿ ಚರ್ಚೆ ಮಾಡಲಾಗಿದೆ. ಕೋವಿಡ್ ನಿರ್ವಹಣೆ ಮಾಡುವ ನಿಟ್ಟಿನಲ್ಲಿ ಚರ್ಚೆ ಮಾಡಿದ್ದೇವೆ. ಶೇ.2 ಪಾಸಿಟಿವಿಟಿ ದರ ಹೆಚ್ಚಾದರೆ, ಆಕ್ಸಿಜನ್ ಬೆಡ್ ಶೇ.10 ಆಕ್ಯುಪೈ ಆದರೆ ಕಠಿಣ ನಿಯಮ ಹೇರಲು ಸೂಚನೆ ನೀಡಲಾಗಿದೆ ಎಂದರು.
ದಕ್ಷಿಣ ಕನ್ನಡ, ಉಡುಪಿ, ಬೆಂಗಳೂರು ನಗರ, ಹಾಸನ, ಕೊಡಗು, ಬೆಂಗಳೂರು ಗ್ರಾಮಾಂತರ, ರಾಮನಗರ, ಚಾಮರಾಜನಗರ, ಮೈಸೂರು, ಶಿವಮೊಗ್ಗ, ಚಿಕ್ಕಮಗಳೂರಲ್ಲಿ ಪಾಸಿಟಿವಿಟಿ ದರ ಹೆಚ್ಚಿದೆ. ಇಲ್ಲಿ ಟೆಸ್ಟಿಂಗ್ ಮತ್ತು ಲಸಿಕೆ ಹೆಚ್ಚಾಗಬೇಕು ಎಂದು ಸೂಚಿಸಲಾಗಿದೆ ಎಂದು ಹೇಳಿದರು.
ಗಡಿ ಗ್ರಾಮಗಳಲ್ಲಿ ಕಡ್ಡಾಯ ಟೆಸ್ಟಿಂಗ್
ಕೇರಳ ಮತ್ತು ಮಹಾರಾಷ್ಟ್ರ ಗಡಿ ಜಿಲ್ಲೆಗಳ 10 ಕಿಮೀ ವ್ಯಾಪ್ತಿಯಲ್ಲಿನ ಗ್ರಾಮಗಳಲ್ಲಿ ಕಡ್ಡಾಯ ಟೆಸ್ಟಿಂಗ್ ಮಾಡಬೇಕು ಎಂದು ಸೂಚನೆ ನೀಡಲಾಗಿದೆ. ಕಲಬುರಗಿ, ತುಮಕೂರು, ರಾಯಚೂರು, ಬೀದರ್, ಹಾವೇರಿ, ವಿಜಯಪುರ ಇತರ ಜಿಲ್ಲೆಗಳಲ್ಲಿ ಟೆಸ್ಟಿಂಗ್ ಹೆಚ್ಚಿಸಬೇಕು ಎಂದು ನಿರ್ದೇಶಿಸಲಾಗಿದೆ ಎಂದರು.
6 ಜೀನೋಮ್ ಟೆಸ್ಟಿಂಗ್ ಲ್ಯಾಬ್ ಪ್ರಾರಂಭಿಸಲು ತೀರ್ಮಾನ ಮಾಡಲಾಗಿದೆ. ಮೂರು ವಾರದಲ್ಲಿ ಲ್ಯಾಬ್ ಪ್ರಾರಂಭವಾಗಲಿದೆ. ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಶಿವಮೊಗ್ಗ, ಕಲಬುರಗಿ, ಬೆಳಗಾವಿಯಲ್ಲಿ ಲ್ಯಾಬ್ ಆರಂಭಿಸುತ್ತೇವೆ ಎಂದು ತಿಳಿಸಿದರು.