ಬೆಂಗಳೂರು:ಕಿಯೋನಿಕ್ಸ್ ವ್ಯವಸ್ಥಾಪಕ ನಿರ್ದೇಶಕ ಸ್ಥಾನದಿಂದ ಇತ್ತೀಚಿಗಷ್ಟೇ ರಾಜ್ಯ ಆಂತರಿಕ ಭದ್ರತಾ ವಿಭಾಗದ ಡಿಐಜಿ ಆಗಿ ವರ್ಗಾವಣೆಗೊಂಡಿದ್ದ ಐಪಿಎಸ್ ಅಧಿಕಾರಿ ರವಿ ಡಿ ಚನ್ನಣ್ಣನವರ್ ಅವರನ್ನು ಮತ್ತೊಮ್ಮೆ ವರ್ಗಾವಣೆಗೊಳಿಸಲಾಗಿದೆ. ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಡಿಐಜಿ ಆಗಿ ಅವರನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಶನಿವಾರ ಆದೇಶ ಪ್ರಕಟಿಸಿದೆ.
ರವಿ ಡಿ ಚನ್ನಣ್ಣನವರ್ ಅವರನ್ನು ಹಿಂದಿನ ಬಿಜೆಪಿ ಸರ್ಕಾರ 2022ರ ನವೆಂಬರ್ 14 ರಂದು ಕಿಯೋನಿಕ್ಸ್ ಎಂಡಿಯಾಗಿ ವರ್ಗಾಯಿಸಿತ್ತು. ಇದೇ ವರ್ಷ ಜೂನ್ 7ರಂದು ಅವರನ್ನು ರಾಜ್ಯ ಆಂತರಿಕ ಭದ್ರತಾ ವಿಭಾಗದ ಡಿಐಜಿಯಾಗಿ ವರ್ಗಾವಣೆ ಮಾಡಲಾಗಿತ್ತು. ಆದರೆ ವರ್ಗಾವಣೆ ಆದೇಶವನ್ನು ಆಕ್ಷೇಪಿಸಿದ್ದ ರವಿ ಡಿ ಚನ್ನಣ್ಣನವರ್, ಕಿಯೋನಿಕ್ಸ್ ಎಂಡಿಯಾಗಿ ಬಂದು 6 ತಿಂಗಳಾಗಿದೆ. ಕಾರಣ ನೀಡದೆ ವರ್ಗಾವಣೆ ಮಾಡಿದ್ದು, ಸರಿಯಲ್ಲ ಎಂದು ಕೇಂದ್ರೀಯ ಆಡಳಿತಾತ್ಮಕ ನ್ಯಾಯ ಮಂಡಳಿಯಲ್ಲಿ ಪ್ರಶ್ನಿಸಿದ್ದರು.