ಬೆಂಗಳೂರು:ಫಣಿ ಚಂಡಮಾರುತದಿಂದ ತತ್ತರಿಸಿರುವ ಒಡಿಶಾದಲ್ಲಿ ವಿದ್ಯುತ್ ಜಾಲ ಮರುಸ್ಥಾಪನೆಗೆ ನೆರವಾಗಲು ಕರ್ನಾಟಕ ರಾಜ್ಯ ವಿದ್ಯುತ್ ಪ್ರಸರಣ ನಿಗಮ ಮತ್ತು ಬೆಂಗಳೂರು ವಿದ್ಯುತ್ ಕಂಪನಿಯ ಎರಡು ತಂಡಗಳು ನಿನ್ನೆ ಒಡಿಶಾಗೆ ಪ್ರಯಾಣ ಬೆಳೆಸಿದವು.
ವಿದ್ಯುತ್ ಜಾಲ ಮರುಸ್ಥಾಪನೆಗೆ ವಿದ್ಯುತ್ ನಿಗಮದ ಸಿಬ್ಬಂದಿ ನೆರವು ಕಲ್ಪಿಸುವ ಕುರಿತು ಒಡಿಶಾ ಸರ್ಕಾರದ ಮುಖ್ಯ ಕಾರ್ಯದರ್ಶಿ ಸಲ್ಲಿಸಿದ್ದ ಕೋರಿಕೆ ಮೇರೆಗೆ ಕರ್ನಾಟಕ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ನೀಡಿದ್ದ ನಿರ್ದೇಶನದಂತೆ ಎರಡು ತಂಡಗಳು ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಒಡಿಶಾ ಕಡೆ ಪ್ರಯಾಣ ಬೆಳೆಸಿದವು.
ಒಡಿಶಾಗೆ ಪ್ರಯಾಣ ಬೆಳೆಸಿದ ಕರ್ನಾಟಕ ರಾಜ್ಯ ವಿದ್ಯುತ್ ಪ್ರಸರಣ ನಿಗಮದ ಸಿಬ್ಬಂದಿ ಒಡಿಶಾದಲ್ಲಿ ವಿದ್ಯುತ್ ಮೂಲಭೂತ ಸೌಕರ್ಯಗಳ ಪುನಃಸ್ಥಾಪನೆ ನಡೆಸಲು ತಲಾ 10 ಪುರುಷ ಸಿಬ್ಬಂದಿ ಇರುವ 100 ಗ್ಯಾಂಗ್ಗಳನ್ನು ಕಳುಹಿಸಿಕೊಡುವ ಸೂಚನೆಯಂತೆ ಮೊದಲ ಹಂತವಾಗಿ ಪವರ್ಮ್ಯಾನ್, ಕಿರಿಯ ಎಂಜಿನಿಯರ್ ಮತ್ತು ಸಹಾಯಕ ಎಂಜಿನಿಯರ್ಗಳು ಸೇರಿ ಒಟ್ಟು 317 ಸಿಬ್ಬಂದಿಯ ತಂಡವನ್ನು ಕಳುಹಿಸಿಕೊಡಲಾಯಿತು.
ಈ ತಂಡದೊಂದಿಗೆ ಬೆಂಗಳೂರಿನಿಂದ ಸಮನ್ವಯಿಸುವ ಅಧಿಕಾರಿಯಾಗಿ ಕಾರ್ಯನಿರ್ವಾಹಕ ಎಂಜಿನಿಯರ್ ರಾಮೋಜಿರಾವ್ ಜವಾಬ್ದಾರಿ ನಿರ್ವಹಿಸಲಿದ್ದು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಹಾಗೂ ಬೆಂಗಳೂರು ವಿದ್ಯುತ್ ಕಂಪನಿಯ ಕೋರಿಕೆ ಮೇರೆಗೆ ಮೂಲಸೌಕರ್ಯ ಸ್ಥಾಪನೆ ಕೆಲಸಕ್ಕೆ ಬೆಂಗಳೂರಿನಿಂದ ಒಡಿಶಾಗೆ ತೆರಳಲು ಭಾರತೀಯ ರೈಲ್ವೆಯು ಭುವನೇಶ್ವರ್ ಎಕ್ಸ್ಪ್ರೆಸ್ ರೈಲಿನಲ್ಲಿ ಅಗತ್ಯ ವ್ಯವಸ್ಥೆ ಕಲ್ಪಿಸಿ ಸಹಕಾರ ನೀಡಿತು. ಲಗೇಜುಗಳನ್ನು ಹೊತ್ತ ಸಿಬ್ಬಂದಿ ರೈಲು ಏರಿ ಒಡಿಶಾದತ್ತ ಪಯಣ ಬೆಳೆಸಿದರು.
ಒಡಿಶಾಗೆ ಪ್ರಯಾಣ ಬೆಳೆಸಿದ ಕರ್ನಾಟಕ ರಾಜ್ಯ ವಿದ್ಯುತ್ ಪ್ರಸರಣ ನಿಗಮದ ಸಿಬ್ಬಂದಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಹಾಗೂ ಬೆಂಗಳೂರು ವಿದ್ಯುತ್ ಕಂಪನಿ ಅಧಿಕಾರಿಗಳನ್ನೊಳಗೊಂಡ ಫಣಿ ಚಂಡಮಾರುತ ಮರುಸ್ಥಾಪನೆ ಎಂಬ ವಾಟ್ಸ್ಆ್ಯಪ್ ಗ್ರೂಪ್ ಅನ್ನು ಎರಡು ರಾಜ್ಯಗಳ ಅಧಿಕಾರಗಳ ನಡುವೆ ಸಮನ್ವಯಕ್ಕಾಗಿ ರಚಿಸಲಾಗಿದೆ. ಈ ಎಲ್ಲಾ ವ್ಯವಸ್ಥೆ ನೋಡಿಕೊಳ್ಳಲು ಬೆಂಗಳೂರು ವಿದ್ಯುತ್ ಕಂಪನಿ ಮುಖ್ಯ ಪ್ರಧಾನ ವ್ಯವಸ್ಥಾಪಕ ವೆಂಕಟೇಶ್ ಕುಮಾರ್ ಅವರನ್ನು ನೋಡಲ್ ಅಧಿಕಾರಿಯಾಗಿ ನೇಮಿಸಲಾಗಿದ್ದು ಆದಷ್ಟು ಬೇಗ ಎರಡನೇ ತಂಡವನ್ನು ಕಳುಹಿಸಲಾಗುತ್ತದೆ ಎಂದು ವಿದ್ಯುತ್ ನಿಗಮದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.