ಬೆಂಗಳೂರು: ಕೊರೊನಾ ವೈರಾಸ್‍ನಿಂದಾಗಿ ಇಂದು ಇಡೀ ದೇಶ ಲಾಕ್ ಡೌನ್ ಆಗಿ ದೇಶದ ಅರ್ಥಿಕ ವ್ಯವಸ್ಥೆಗೆ ದೊಡ್ಡ ಕೊಡಲಿ ಪೆಟ್ಟು ಬಿದ್ದಿದ್ದು, ಇದಕ್ಕೆ ಕರ್ನಾಟಕ ಹೊರತಾಗಿಲ್ಲ. ದೇಶಾದ್ಯಂತ ಆರ್ಥಿಕ ಹಿಂಜರಿಕೆ ಉಂಟಾಗಿ ಅದರಿಂದ ಹೊರ ಬರಲು ಹಲವಾರು ವರ್ಷಗಳೇ ಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹಲವು ಕಟ್ಟು ನಿಟ್ಟಿನ ಕ್ರಮಕೈಗೊಂಡು ಅನಾವಶ್ಯಕ ಅರ್ಥಿಕ ಹೊರೆ ಕಡಿಮೆ ಮಾಡಿಕೊಂಡಲ್ಲಿ ಮಾತ್ರ ಆರ್ಥಿಕ ಚೇತರಿಕೆ ಸಾಧ್ಯ.
ಪ್ರಸ್ತುತ, ಆರ್ಥಿಕ ವ್ಯವಸ್ಥೆ ಪುನಶ್ವೇತನಗೊಳ್ಳಲು ರಾಜ್ಯದ ಮಂತ್ರಿ ಮಹೋದಯರ ಕಚೇರಿಗಳ ಖರ್ಚು-ವೆಚ್ಚಗಳು, ದೂರವಾಣಿ ಮತ್ತು ಇಂಧನ ವೆಚ್ಚಗಳನ್ನು ಕಡಿತಗೊಳಿಸುವ ಮೂಲಕ ಸಚಿವರು, ಶಾಸಕರುಗಳಿಗೆ ಪ್ರತಿ ತಿಂಗಳು ನೀಡುವ ವೇತನ, ದಿನ ಭತ್ಯೆ, ಪ್ರವಾಸ ಭತ್ಯೆ, ಬಾಡಿಗೆ ಭತ್ಯೆ, ದೂರವಾಣಿ ಭತ್ಯೆ ಹಾಗೂ ಮತ್ತಿತರ ಭತ್ಯೆಗಳನ್ನು ಕಡಿತಗೊಳಿಸುವುದು ಪ್ರಮುಖವಾಗಬೇಕಿದೆ. ಏಕೆಂದರೆ ಪ್ರಸ್ತುತ ಎಲ್ಲ ಮಹೋದಯರುಗಳಿಗೆ ಶಾಸಕರ ಭವನದಲ್ಲಿ ಕೊಠಡಿ ನೀಡಲಾಗಿದ್ದು, ಅಲ್ಲಿಯೂ ಸಹ ಎಲ್ಲಾ ಭತ್ಯೆಗಳನ್ನು ಪಡೆಯುತ್ತಿರುವುದರಿಂದ ಭತ್ಯೆಗಳನ್ನು ಕಡಿತಗೊಳಿಸುವುದರ ಜೊತೆಗೆ ಅವರುಗಳಿಗೆ ಹೊರಗುತ್ತಿಗೆ ಆಧಾರದ ಮೇಲೆ ನೀಡಲಾಗಿರುವ ಖಾಸಗಿ ಆಪ್ತ ಸಿಬ್ಬಂದಿಗಳನ್ನು ಕಡಿತಗೊಳಿಸಬೇಕು. ಕಾರಣ, ಸಂಬಂಧಪಟ್ಟ ಕೆಲವು ಇಲಾಖೆಗಳಲ್ಲಿ ಹೆಚ್ಚುವರಿ ಸಿಬ್ಬಂದಿಗಳಿದ್ದು, ಅವರುಗಳಿಗೆ ಕೆಲಸವಿಲ್ಲದ ಕಾರಣ ಅನವಶ್ಯಕವಾಗಿ ವೇತನ ನೀಡಲಾಗುತ್ತಿದೆ. ಅಂತವರನ್ನು ಸಚಿವರು, ಶಾಸಕರ ಆಪ್ತ ಸಿಬ್ಬಂದಿಗಳಾಗಿ ನಿಯೋಜಿಸುವುದು ಸೂಕ್ತ. ಆಗ ಮಾತ್ರ ಎಲ್ಲ ಇಲಾಖೆಗಳಿಗೂ ಆರ್ಥಿಕ ಹೊರೆ ಕಡಿಮೆಯಾಗುತ್ತದೆ ಎಂಬುದು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರ ಅಭಿಪ್ರಾಯವಾಗಿದೆ.
ಪ್ರಮುಖವಾಗಿ, ಕರ್ನಾಟಕ ಸರ್ಕಾರದ ಇಲಾಖೆಯ ಸಚಿವಾಲಯಗಳಲ್ಲಿ, ಮುಖ್ಯಮಂತ್ರಿಗಳ ಕಚೇರಿ ಮತ್ತು ಮಂತ್ರಿಗಳ ಕಚೇರಿಗಳಲ್ಲಿ ಅವರ ಆಪ್ತ ವಲಯದ ಬಂಧು - ಬಳಗ ಹಾಗೂ ಹಿತೈಷಿಗಳಿಗೆ ಅನಾವಶ್ಯಕವಾಗಿ ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಂಡು ಲಕ್ಷಾಂತರ ರೂಪಾಯಿಗಳು ಪೋಲಾಗುತ್ತಿದೆ. ಅದು ಅಲ್ಲದೇ ಆಯಾ ಇಲಾಖೆಯ ಸಚಿವರ ಕಚೇರಿಗಳಿಗೆ ನಿಗಮ-ಮಂಡಳಿಗಳಿಂದ ಲೆಕ್ಕಕ್ಕೆ ಬಾರದ ಸೌಲಭ್ಯವನ್ನು ಒದಗಿಸುವುದು ಕೂಡ ಚಾಲ್ತಿಯಲ್ಲಿದೆ. ಉದಾಹರಣೆಗೆ ಪ್ರತಿ ತಿಂಗಳು ಸಚಿವರ ಕಚೇರಿಗಳಿಗೆ ಸ್ಟೇಷನರಿ, ಕಾಫಿ-ಟೀ ಹಾಗೂ ಇನ್ನಿತರ ವೆಚ್ಚಗಳನ್ನು ನಿಗಮದ ಮೂಲಕ ಪಾವತಿಸುತ್ತಿರುವುದು ರೂಢಿಯಲ್ಲಿದೆ. ಜೊತೆಗೆ ಸಚಿವರ ಕಚೇರಿಯ ಸಿಬ್ಬಂದಿ ಓಡಾಟಕ್ಕಾಗಿ ಚಾಲಕರುಗಳ ಸಮೇತ ವಾಹನಗಳು ನೀಡುವಂತಹ ಪದ್ಧತಿಗೆ ಮುಕ್ತಾಯ ಹಾಡಬೇಕಿದೆ.
ಅದು ಅಲ್ಲದೇ ಹೊಸ ಸರ್ಕಾರಗಳು ಅಸ್ತಿತ್ವಕ್ಕೆ ಬಂದ ನಂತರ ಜನಪ್ರತಿನಿಧಿಗಳು ತಮ್ಮ ಆಪ್ತರನ್ನು, ಹಿತೈಷಿಗಳನ್ನು ನಿಗಮ-ಮಂಡಳಿಗಳಿಗೆ ನಿರ್ದೇಶಕರನ್ನಾಗಿಯೋ, ಸದಸ್ಯರನ್ನಾಗಿಯೋ ಅಥವಾ ಅಧ್ಯಕ್ಷರನ್ನಾಗಿಯೋ ನೇಮಕ ಮಾಡಿಕೊಂಡು ಬರುತ್ತಿದ್ದು, ಇದರಿಂದ ನಿಗಮ ಮಂಡಳಿಗಳು ಗಜಪಡೆಗಳನ್ನು ಸಾಕುವಂತಹ ಕೇಂದ್ರಗಳಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ಇದರಿಂದಾಗಿ ಸಂಬಂಧಪಟ್ಟ ನಿಗಮ-ಮಂಡಳಿಗೆ ನೇಮಕವಾಗುವ ಅಧ್ಯಕ್ಷರು, ಸದಸ್ಯರು ಮತ್ತು ನಿರ್ದೇಶಕರುಗಳು ಯಾವುದೇ ರೀತಿಯ ಭತ್ಯೆಗಳನ್ನು ಪಡೆಯದೇ ರಾಜ್ಯದ ಹಿತದೃಷ್ಟಿಯಿಂದ ಹಾಗೂ ಅವರುಗಳ ಪಕ್ಷಗಳ ಹಿತದೃಷ್ಟಿಯಿಂದ ಕಾರ್ಯನಿರ್ವಹಿಸಿದ್ದಲ್ಲಿ ಕೊರೊನಾದಿಂದಾಗಿ ನಲುಗುತ್ತಿರುವ ದೇಶ ಹಾಗೂ ರಾಜ್ಯದ ಆರ್ಥಿಕ ವ್ಯವಸ್ಥೆಗೆ ಅವರುಗಳ ಕೊಡುಗೆಯಾಗುತ್ತದೆ. ಏಕೆಂದರೆ ಅವರುಗಳು ಆರ್ಥಿಕವಾಗಿ ಸದೃಢವಾಗಿರುವುದರಿಂದ ಯಾವುದೇ ರೀತಿಯ ಭತ್ಯೆಗಳನ್ನು ಪಡೆಯದೇ ಸೇವೆ ಸಲ್ಲಿಸುವ ತಾಕತ್ತು ಅವರಿಗೆ ಇರುತ್ತದೆ.