ಬೆಂಗಳೂರು: ಕಾಂಗ್ರೆಸ್ ಹಿರಿಯ ನಾಯಕ ಹಾಗೂ ವಿಧಾನಸಭೆ ಮಾಜಿ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಅವರ ಧರ್ಮಪತ್ನಿ ವಿಜಯಮ್ಮ(69) ನಿಧನ ಹೊಂದಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಂತಾಪ ಸೂಚಿಸಿದ್ದಾರೆ.
ಸಿಎಂ ಟ್ವೀಟ್ ಮಾಡಿ, ಮಾಜಿ ವಿಧಾನಸಭಾಧ್ಯಕ್ಷರಾದ ರಮೇಶ್ ಕುಮಾರ್ ಅವರ ಧರ್ಮಪತ್ನಿ ವಿಜಯಮ್ಮನವರ ನಿಧನದ ಸುದ್ದಿ ತಿಳಿದು ಅತ್ಯಂತ ಬೇಸರವಾಯಿತು. ಮೃತರ ಆತ್ಮಕ್ಕೆ ಸದ್ದತಿ ಕೋರುತ್ತೇನೆ. ರಮೇಶ್ ಕುಮಾರ್ ಹಾಗೂ ಅವರ ಕುಟುಂಬ ವರ್ಗಕ್ಕೆ ಈ ನೋವು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ತಿಳಿಸಿದ್ದಾರೆ.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದು, ಪಕ್ಷದ ಹಿರಿಯ ನಾಯಕರು, ಆತ್ಮೀಯರೂ ಆದ ರಮೇಶ್ ಕುಮಾರ್ ಧರ್ಮಪತ್ನಿ ವಿಜಯಮ್ಮ ಅವರು ನಿಧನರಾದ ಸುದ್ದಿ ತಿಳಿದು ಅತೀವ ನೋವಾಯಿತು. ಕುಟುಂಬದ ಶೋಕದಲ್ಲಿ ನಾನೂ ಭಾಗಿ. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಂತಾಪ ಸಂದೇಶದಲ್ಲಿ, ರಮೇಶ್ ಕುಮಾರ್ ಅವರಿಗೆ ಪತ್ನಿ ವಿಯೋಗದ ಸುದ್ದಿ ಕೇಳಿ ತೀವ್ರ ಬೇಸರವಾಗಿದೆ. ವಿಜಯಮ್ಮ ಅವರು ರಮೇಶ್ ಕುಮಾರ್ ಅವರ ಬದುಕಿನ ಪ್ರತಿ ಹಂತದಲ್ಲೂ ಜೊತೆಯಾಗಿ ನಿಂತವರು. ಅವರ ಆತ್ಮಕ್ಕೆ ಸದ್ಗತಿ ಸಿಗಲಿ. ಈ ಅಗಲಿಕೆ ನೋವು ಭರಿಸುವ ಶಕ್ತಿಯನ್ನು ಆ ಭಗವಂತ ರಮೇಶ್ ಕುಮಾರ್ ಹಾಗೂ ಅವರ ಕುಟುಂಬದ ಸದಸ್ಯರಿಗೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ತಿಳಿಸಿದ್ದಾರೆ.
ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಮಾಜಿ ಸಚಿವರಾದ ಎಸ್ಆರ್ ಪಾಟೀಲ್ ಜಮೀರ್ ಅಹಮದ್ ಖಾನ್, ರಾಮಲಿಂಗ ರೆಡ್ಡಿ ಡಾ.ಹೆಚ್.ಸಿ.ಮಹದೇವಪ್ಪ, ಆರ್.ಧ್ರುವನಾರಾಯಣ್ ಸೇರಿದಂತೆ ಹಲವು ನಾಯಕರು ಸಂತಾಪ ಸೂಚಿಸಿದ್ದಾರೆ.