ಬೆಂಗಳೂರು :ಕರ್ನಾಟಕ ರಾಜ್ಯ ದಂತ ಪರಿಷತ್ತು ಕಾರ್ಯಕಾರಿ ಮಂಡಳಿಯ ವಿವಿಧ ಪದಾಧಿಕಾರಿಗಳ ಹುದ್ದೆಗೆ ನಡೆಸಿರುವ ಚುನಾವಣೆಯ ಮತ ಎಣಿಕೆ ಮತ್ತು ಫಲಿತಾಂಶ ಪ್ರಕಟಿಸದಂತೆ ರಾಜ್ಯ ಹೈಕೋರ್ಟ್ ಮಧ್ಯಂತರ ಆದೇಶ ನೀಡಿದೆ. ಚುನಾವಣಾ ಅಧಿಸೂಚನೆ ಪ್ರಶ್ನಿಸಿ ಪರಿಷತ್ ಸದಸ್ಯ ಡಾ.ರೋಹಿ ರೇಹಿನಾ ಮಲೀಕ್ ತಕರಾರು ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ನ್ಯಾಯಪೀಠ ಈ ಆದೇಶ ನೀಡಿದೆ.
ಅರ್ಜಿಯೊಂದಿಗೆ ಸಲ್ಲಿಸಿದ ದಾಖಲೆಗಳನ್ನು ಪರಿಶೀಲನೆ ನಡೆಸಿದಾಗ ಮತದಾರರ ಪಟ್ಟಿ ಸಿದ್ಧಪಡಿಸುವಲ್ಲಿ ಗಂಭೀರ ಲೋಪಗಳು ಉಂಟಾಗಿವೆ. ದಂತ ವೈದ್ಯರಾಗಿರುವ ಪರಿಷತ್ತಿನ ಸಾವಿರಾರು ಸದಸ್ಯ ಹೆಸರು ಮತದಾರರು ಪಟ್ಟಿಯಲ್ಲಿ ಇಲ್ಲ. ದಂತ ವೈದ್ಯ ವೃತ್ತಿಯನ್ನು ತೊರೆದಿರುವ ಹಲವರ ಹೆಸರು ಮತದಾರರ ಪಟ್ಟಿಯಲ್ಲಿ ಸೇರಿಸಲಾಗಿದೆ. ಚುನಾವಣೆಯು ಫೆ.22 ರಂದು ಪೂರ್ಣಗೊಂಡಿದೆ. ಫೆ.24 ರಂದು ಮತ ಎಣಿಕೆ ಕಾರ್ಯ ನಡೆಯಲಿದೆ ಎಂದು ಅಭಿಪ್ರಾಯ ಪಟ್ಟು ಫಲಿತಾಂಶ ಪ್ರಕಟಿಸದಂತೆ ಸೂಚನೆ ನೀಡಿ ವಿಚಾರಣೆ ಮುಂದೂಡಿದೆ.
ಕರ್ನಾಟಕ ರಾಜ್ಯ ದಂತ ಪರಿಷತ್ತು ಕಾರ್ಯಕಾರಿ ಮಂಡಳಿಯ ವಿವಿಧ ಪಾದಾಧಿಕಾರಿಗಳ ಹುದ್ದೆಗೆ ಚುನಾವಣೆ ನಡೆಸಲು 2023 ರ ಜನವರಿ 2ರಂದು ಪರಿಷತ್ತಿನ ರಿಜಿಸ್ಟ್ರರ್ ಅಧಿಸೂಚನೆ ಹೊರಡಿಸಿದ್ದರು. ಚುನಾವಣಾಧಿಕಾರಿಯು ಜನವರಿ 4ರಂದು ಅಂತಿಮ ಮತದಾರರ ಪಟ್ಟಿ ಮತ್ತು ಚುನಾವಣಾ ವೇಳಾಪಟ್ಟಿ ಪ್ರಕಟಿಸಿದದರು. ಅದರಂತೆ ಅಂಚೆ ಮತದಾನದ ಮೂಲಕ 2023 ರ ಜನವರಿ 23 ರಿಂದ ಫೆಬ್ರವರಿ 22 ರವರೆಗೆ ಮತದಾನ ನಿಗದಿಪಡಿಸಲಾಗಿತ್ತು. ಫೆಬ್ರವರಿ 24ರಂದು ಮತ ಎಣಿಕೆ ನಿರ್ಧರಿಸಲಾಗಿತ್ತು.