ಬೆಂಗಳೂರು: ಬಿಬಿಎಂಪಿ ಆಯುಕ್ತರು ಹಾಗೂ ಇಂಜಿನಿಯರ್ ಚೀಫ್ ಗುತ್ತಿಗೆದಾರರಿಗೆ ಭಾರಿ ಹಿಂಸೆ ಕೊಡುತ್ತಿದ್ದಾರೆ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ ದೂರಿದರು. ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ರಾಜ್ಯ ಗುತ್ತಿಗೆದಾರರ ಸಂಘದ ನಿಯೋಗ ಭೇಟಿಯಾದ ಕೆಂಪಣ್ಣ ಈ ಹೇಳಿಕೆ ನೀಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲ ಅಧಿಕಾರಿಗಳು ಸಮಸ್ಯೆ ಕೊಡುತ್ತಿದ್ದಾರೆ. ಬಿಬಿಎಂಪಿ ಕಮಿಷನರ್ ಹಾಗೂ ಇಂಜಿನಿಯರ್ ಚೀಫ್ ಹಿಂಸೆ ಕೊಡುತ್ತಿದ್ದಾರೆ ಎಂದು ಮುಖ್ಯಮಂತ್ರಿಗಳಿಗೆ ದೂರು ಕೊಟ್ಟಿದ್ದೇವೆ. ಈ ವೇಳೆ ಆದಷ್ಟು ಬೇಗ ಬಿಬಿಎಂಪಿ ಕಮಿಷನರ್ ಅವರನ್ನು ಕರೆದು ಮಾತನಾಡುತ್ತೇನೆ ಎಂಬುವುದಾಗಿ ಸಿಎಂ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.
ನಮ್ಮ ಭೇಟಿ ವೇಳೆ ಸಿಎಂ ರಾಜ್ಯದ ಹಣಕಾಸು ಸ್ಥಿತಿ ಉತ್ತಮವಾಗಿಲ್ಲ. ಆದರೂ, ಆದಷ್ಟು ಶೀಘ್ರದಲ್ಲಿ ಬಾಕಿ ಹಣ ಬಿಡುಗಡೆ ಮಾಡುತ್ತೇವೆ ಎಂದು ಸಿಎಂ ತಿಳಿಸಿದ್ದಾರೆ. ಅಲ್ಲದೇ, ಒಂದು ತಿಂಗಳಿನಲ್ಲಿ ಎಲ್ಲ ಅಧಿಕಾರಿಗಳ ಜೊತೆ ಸಭೆ ನಡೆಸಿ, ಗುತ್ತಿಗೆದಾರರ ಸಮಸ್ಯೆಗಳ ಬಗ್ಗೆ ಚರ್ಚಿಸಿ ಬಗೆಹರಿಸಲು ಕ್ರಮ ಕೈಗೊಳ್ಳುತ್ತೇವೆ. ಬಾಕಿ ಬಿಲ್ ಈ ವರ್ಷದಲ್ಲಿ ಪಾವತಿ ಮಾಡುತ್ತೇವೆ. ಹಂತ-ಹಂತವಾಗಿ ಬಾಕಿ ಬಿಲ್ ಪಾವತಿ ಮಾಡುತ್ತಿದ್ದೇವೆ. ಈಗಾಗಲೇ ಸ್ಬಲ್ಪ ಹಣವನ್ನು ಪಾವತಿ ಮಾಡಿದ್ದೇವೆ. ಇನ್ನೆರಡು ದಿನಗಳಲ್ಲಿ ಬಾಕಿ ಬಿಲ್ನಲ್ಲಿ ಎಷ್ಟು ಸಾಧ್ಯವೋ ಅಷ್ಟು ಬಿಡುಗಡೆ ಮಾಡುತ್ತೇನೆ ಎಂದು ಸಿಎಂ ಭರವಸೆ ನೀಡಿದ್ದಾರೆ ಎಂದು ಕೆಂಪಣ್ಣ ಮಾಹಿತಿ ನೀಡಿದರು.
ತಪ್ಪು ಸಾಬೀತಾದರೆ ಸಂಘದಿಂದ ಅಂಬಿಕಾಪತಿ ವಜಾ:ಇದೇ ವೇಳೆ, ಗುತ್ತಿಗೆದಾರರು ನೀಡಿದ ಕಮಿಷನ್ ಹಣದ ಮೇಲೆ ಐಟಿ ರೇಡ್ ಮಾಡಿದೆ ಎಂದು ಬಿಜೆಪಿ, ಜೆಡಿಎಸ್ ಆರೋಪಕ್ಕೆ ಪ್ರತಿಕ್ರಿಯಿಸಿದ ಕೆಂಪಣ್ಣ, ಅದಕ್ಕೂ ಹಾಗೂ ನಮಗೂ ಸಂಬಂಧ ಇಲ್ಲ. ಅವರ ರಾಜಕೀಯಕ್ಕೆ ನಮಗೆ ಸಂಬಂಧ ಇಲ್ಲ. ಆ ಬಗ್ಗೆ ಯಾವುದೇ ಚರ್ಚೆ ಮಾಡಿಲ್ಲ. ನಾವು ಕೇವಲ ಬಾಕಿ ಬಿಲ್ ಬಗ್ಗೆ ಚರ್ಚೆ ಮಾಡಿದ್ದೇವೆ ಎಂದು ಹೇಳಿದರು.