ಕರ್ನಾಟಕ

karnataka

ETV Bharat / state

ಕಾಂಗ್ರೆಸ್ ದಯಾ ಭಿಕ್ಷೆಯಿಂದ 2ನೇ ಬಾರಿಗೆ ಸಿಎಂ ಆದ ನಿಮಗೆ ಕಿಂಚಿತ್ತಾದರೂ ನಿಯತ್ತು ಬೇಡವೇ?: ಹೆಚ್​​​​ಡಿಕೆ ವಿರುದ್ಧ ಕಾಂಗ್ರೆಸ್ ವಾಗ್ದಾಳಿ

ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ರಾಜ್ಯ ಕಾಂಗ್ರೆಸ್ ಸರಣಿ ಟ್ವೀಟ್ ಮಾಡಿ ಆರೋಪಗಳ ಸುರಿಮಳೆಯನ್ನೇ ಹರಿಸಿದೆ.

congress
ಕಾಂಗ್ರೆಸ್ ಪಕ್ಷದ ಗುರುತು

By ETV Bharat Karnataka Team

Published : Oct 19, 2023, 3:27 PM IST

ಬೆಂಗಳೂರು:ನಂಬಿದವರಿಗೆ ನಾಮ ಬಳಿಯುವುದು ಕುಮಾರಸ್ವಾಮಿ ಚಾಳಿ. ನಿಮ್ಮ ಬಾಯಲ್ಲಿರುವುದು ನಾಲಿಗೆಯೋ ಅಥವಾ ಕೊಳಕುಮಂಡಲದ ಹಾವೋ ಎಂದು ರಾಜ್ಯ ಕಾಂಗ್ರೆಸ್​​, ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದೆ.

ಸರಣಿ ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್, ’’ಜಾತ್ಯತೀತತೆ ನಾಟ್ಯಕ್ಕೆ ಬೆರಗಾಗಿ ತೆನೆ ಹೊತ್ತ ಮಹಿಳೆಯೇ ಕೋಮು - ಕುಂಡದಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕೈ ಹಿಡಿದವರ ತಲೆ ಕಡಿಯುವ, ಹೆಗಲು ಕೊಟ್ಟವರ ಬೆನ್ನಿಗೆ ಚೂರಿ ಹಾಕುವ, ನಂಬಿದವರಿಗೆ ನಾಮ ಬಳಿಯುವ ಕುಮಾರಸ್ವಾಮಿ ರಾಮಾಯಣದ ಮಂಥರೆಯೇ, ಮಹಾಭಾರತದ ಶಕುನಿಯೇ ಸರಿ. ಕ್ಷಣಕ್ಕೊಂದು ಬಣ್ಣ, ದಿನಕ್ಕೊಂದು ವೇಷ ತೊಡುವ ನಿಮ್ಮ ಬಣ್ಣದೋಕುಳಿಯಾಟಕ್ಕೆ ಗೋಸುಂಬೆಯೇ ಲಾಗ ಹೊಡೆದಿದೆ‘‘ ಎಂದು ಕಿಡಿ ಕಾರಿದೆ.

ಸಿದ್ದಾಂತಕ್ಕಾಗಿ ನಿಮ್ಮ ಜತೆ ನಿಂತಿತ್ತು:‘‘ಹಿಂದಿನ ನಿಮ್ಮ ಎಲ್ಲ ಅಕ್ರಮ, ಅನಾಚಾರ, ಅವ್ಯವಹಾರಗಳು ಹೊರಬರುತ್ತವೆ ಎಂದು ಹೆದರಿ ಬಿಜೆಪಿ ಸೆರಗಿನೊಳಗೆ ಸೇರಿಕೊಂಡಿರುವ ನಿಮ್ಮ ಜಾತ್ಯತೀತತೆ ನಾಟ್ಯಕ್ಕೆ ಬೆರಗಾಗಿ ತೆನೆ ಹೊತ್ತ ಮಹಿಳೆಯೇ ಕೋಮು - ಕುಂಡದಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕುಮಾರಸ್ವಾಮಿಯವರೇ, ಮೊದಲ ಬಾರಿ ನಿಮ್ಮನ್ನು ಸಿಎಂ ಮಾಡಿದ ಯಡಿಯೂರಪ್ಪ ಅವರಿಗೆ ಅಧಿಕಾರ ಹಸ್ತಾಂತರಿಸದೇ ವಚನ ಭ್ರಷ್ಟರಾದಿರಿ, ದ್ರೋಹ ಮಾಡಿದಿರಿ. ಕಾಂಗ್ರೆಸ್ ನಿಮ್ಮನ್ನು ಸಿಎಂ ಮಾಡಿದಾಗ ಯಡಿಯೂರಪ್ಪ ಅಸೆಂಬ್ಲಿಯಲ್ಲಿ ಹೇಳಿದ್ದರು. ಶಿವಕುಮಾರ್, ಈ ಅಪ್ಪ ಮಕ್ಕಳನ್ನು ನಂಬಬೇಡಿ, ಬಳಸಿ ಬಿಸಾಡುತ್ತಾರೆ. ಹಾವು ಇವರ ಲಾಂಛನವೆಂದು ಆದರೆ ಸಿದ್ದಾಂತಕ್ಕಾಗಿ ಕಾಂಗ್ರೆಸ್ ನಿಮ್ಮ ಜತೆ ನಿಂತಿತ್ತು‘‘ ಎಂದು ಟೀಕಿಸಿದೆ.

ಕಿಂಚಿತ್ತಾದರೂ ನಿಯತ್ತು ಬೇಡವೇ- ಕಾಂಗ್ರೆಸ್​ ಟ್ವೀಟ್​: ’’ಕಾಂಗ್ರೆಸ್ ದಯಾಭಿಕ್ಷೆಯಿಂದ ಎರಡನೇ ಬಾರಿಗೆ ಸಿಎಂ ಆದ ನಿಮಗೆ ಕಿಂಚಿತ್ತಾದರೂ ನಿಯತ್ತು ಬೇಡವೇ? ಓಹೋ.. ಕ್ಷಮಿಸಿ, ಆತ್ಮಸಾಕ್ಷಿ ಮಾರಿಕೊಂಡೇ ರಾಜಕೀಯ ಬಯಲಾಟ ಆಡುವ ನಿಮ್ಮಂತವರಿಂದ ನೀತಿ, ನಿಯತ್ತು, ನೈತಿಕತೆ ನಿರೀಕ್ಷೆ ಮಾಡುವುದೇ ಮಹಾಪಾಪ. ಕುಮಾರಸ್ವಾಮಿಯವರೇ, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರನ್ನು ಅನ್ಯ ರಾಜ್ಯದ ಪೇಶ್ವೆ ಎಂದು ನಿಂದಿಸಿದಿರಿ. 2.50 ಕೋಟಿಯಂತೆ ಸರಕಾರಿ ಹುದ್ದೆ ಮಾರಿಕೊಂಡ ಭ್ರಷ್ಟ ಎಂದಿರಿ. ಸಿ ಟಿ ರವಿಯನ್ನು ಲೂಟಿ ರವಿ ಎಂದು ನಾಮಕರಣ ಮಾಡಿದವರೂ ನೀವೇ. ಇವತ್ತು ಅವರದ್ದೇ ಅಂಗಿ ಚುಂಗು ಹಿಡಿದು ನಿಂತಿದ್ದೀರಲ್ಲಾ. ನಿಮಗೇನಾದರೂ ಆತ್ಮಗೌರವ ಇದೆಯೇ?‘‘ ಎ‌ಂದು ಪ್ರಶ್ನಿಸಿದೆ.

ನಿಮಗೆ ನೀವೇ ಮತ ಹಾಕಿಕೊಂಡು ಗೆದ್ದಿರಾ?: ’’ಇನ್ನೊಂದೆಡೆ ಅಲ್ಪಸಂಖ್ಯಾತರ ಅಗತ್ಯವಿಲ್ಲ, ಅವರನ್ನು ನಂಬಿಕೊಂಡು ರಾಜಕಾರಣ ಮಾಡಿಲ್ಲ ಅನ್ನುತ್ತೀರಿ. ಹಾಗಾದರೆ ನಿಮಗೆ ನೀವೇ ಮತ ಹಾಕಿಕೊಂಡು ಗೆದ್ದಿರಾ ಕುಮಾರಣ್ಣ. ಕುಮಾರಸ್ವಾಮಿಯವರೇ, ಹಿಂದೆ ನೀವು ಮಕ್ಮಲ್ ಟೋಪಿ ಹಾಕಿದ್ದೇನು? ಬಿರಿಯಾನಿ ತಿಂದಿದ್ದೇನು? ಮಸೀದಿ ಹೊಕ್ಕಿದ್ದೇನು? ಆಹಾ..! ಅದೇನು ನಾಟಕ, ಅದೇನು ಪಂಚರಂಗಿ ಆಟ?. ಈಗ, ಅಲ್ಪಸಂಖ್ಯಾತರನ್ನು ನಂಬಿಕೊಂಡು ರಾಜಕಾರಣ ಮಾಡಿಲ್ಲ ಎನ್ನುವ ನಿಮ್ಮ ಬಾಯಲ್ಲಿರುವುದು ನಾಲಿಗೆಯೋ ಅಥವಾ ಕೊಳಕುಮಂಡಲ ಹಾವೋ ಎಂದು ಪ್ರಶ್ನಿಸಿದೆ‘‘.

ಐಟಿ ಇಡಿ ಕಿಂದರ ಜೋಗಿ ಅಮಿತ್ ಶಾ ಕಾಲಿಗೆ ಬಿದ್ದು ರಾಜಕೀಯ ವಿರೋಧಿಗಳಿಗೆ ಗುಂಡಿ ತೋಡುವುದರಲ್ಲಿ ಮಗ್ನರಾಗಿರುವ ಕುಮಾರಣ್ಣ ಒಂದು ವಿಷಯ ತಿಳಿದುಕೊಳ್ಳಿ. ನೀವೇ ನಿಮ್ಮ ಪಾಲಿನ ಭಸ್ಮಾಸುರ. ಸ್ವಲ್ಪ ಕಾಲ ತಡೆದು ನೋಡಿ, ನಿಮ್ಮ ಗುಂಡಿಯಲ್ಲಿ ಬಿದ್ದು ನೀವೇ ಹೆಂಗೆ ಒದ್ದಾಡುತ್ತೀರಿ ಅಂತಾ. ಕೈಲಾಗದವರು ಮೈ ಪರಚಿಕೊಂಡರೆ ಆಗೋದು ಗಾಯ, ರಣ ಗಾಯ! ಕೈ ನಾಯಕರ ಮೇಲೆ ಬಿದ್ದರೇ ಕೈಲಾಸ ಪ್ರಾಪ್ತಿ ಆಗದು ಕುಮಾರಣ್ಣ. ನಿಮ್ಮ ಮಾತೇ ನಿಮ್ಮ ಪಾಲಿನ ಶತ್ರು! ಮಾತಾಡಿ, ಮಾತಾಡಿ ಮಂಡ್ಯ ಚುನಾವಣೆಯಲ್ಲಿ ನಿಮ್ಮ ಮಗನನ್ನು ಬಲಿ ಕೊಟ್ಟಿರಿ. ವಿಧಾನಸಭೆ ಚುನಾವಣೆಯಲ್ಲಿ ನಿಮ್ಮ ಪಕ್ಷವನ್ನೇ ಅಡ್ಡಡ್ಡ ಉದ್ದುದ್ದ ಮಲಗಿಸಿದಿರಿ. ಈಗ ನಿಮ್ಮನ್ನು ನೀವೇ ಹಾಳು ಮಾಡಿಕೊಳ್ಳುತಿದ್ದೀರಿ ಎಂದು ವಾಗ್ದಾಳಿ ‌ನಡೆಸಿದೆ.

ಇದನ್ನೂಓದಿ:ನಾಲ್ಕು ತಿಂಗಳಲ್ಲಿ ಸಾಕಷ್ಟು ಬಾರಿ ಹಸ್ತಕ್ಷೇಪ ಆಗಿದೆ... ನನ್ನ ಮೌನ ದೌರ್ಬಲ್ಯವಲ್ಲ: ಸಚಿವ ಸತೀಶ್ ಜಾರಕಿಹೊಳಿ

ABOUT THE AUTHOR

...view details