ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ರಾಜ್ಯ ಕಾಂಗ್ರೆಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಟ್ವಿಟರ್ ಮೂಲಕ ಅಸಮಾಧಾನ ಹೊರ ಹಾಕಿರುವ ರಾಜ್ಯ ಕಾಂಗ್ರೆಸ್, ಪ್ರಧಾನಿ ಮೋದಿ ಹಾಗೂ ಸಿಎಂ ಬಿಎಸ್ವೈ ವಿರುದ್ಧ ಕಿಡಿಕಾರಿದೆ. ಇಬ್ಬರೂ ರಾಜ್ಯಕ್ಕೆ ದ್ರೋಹವೆಸಗಿದ್ದಾರೆ. ಮಧ್ಯಂತರ 5 ಸಾವಿರ ಕೋಟಿ ನೆರವು ನೀಡಿಲ್ಲ. ರಾಷ್ಟ್ರೀಯ ವಿಪತ್ತೆಂದು ಪ್ರವಾಹ ಪರಿಸ್ಥಿತಿ ಘೋಷಿಸಿಲ್ಲ. ಜವಾಬ್ದಾರಿ, ಕರ್ತವ್ಯ ನಿರ್ವಹಿಸದೆ ಕೇಂದ್ರ ಕಣ್ಮುಚ್ಚಿದೆ ಎಂದು ಕೆಂಡಕಾರಿದೆ.
ನೆರೆ ಪರಿಹಾರ ಕೇಳುವುದು ರಾಜ್ಯದ ಹಕ್ಕು ಎಂದು ಟ್ವಿಟರ್ನಲ್ಲಿ ಬಿಜೆಪಿ ನಾಯಕರ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದ್ದು, ಬಿ.ಎಸ್.ಯಡಿಯೂರಪ್ಪ ಅವರೇ, ತಾನು ಕಳ್ಳ ಪರರ ನಂಬ ಎಂಬಂತೆ ನಿಮ್ಮ ವರ್ತನೆ. ಆಪರೇಷನ್ ಕಮಲ ಮುಖೇನ ಸರ್ಕಾರ ಬೀಳಿಸಿ, ಹಿಂಬಾಗಿಲ ಅನೈತಿಕ ಸಿಎಂ ಆಗಿರುವ ತಾವು ಭೂಗತ ಪಾತಕಿಗಳ ರೀತಿ ವರ್ತಿಸುತ್ತಿದ್ದೀರಿ ಎಂದು ಹೇಳಿದೆ.
ಮೋದಿ ಆಳ್ವಿಕೆಯಲ್ಲಿ ಸಿಬಿಐ ಬಿಜೆಪಿಯ ಮುಂಚೂಣಿ ಘಟಕವಾಗಿ ಕೆಲಸ ಮಾಡುತ್ತಿದೆ. ಫೋನ್ ಕದ್ದಾಲಿಕೆ ಎಂಬುದೊಂದು ಸುಳ್ಳು, ದ್ವೇಷ ರಾಜಕಾರಣದ ಸಂಚು ಎಂದು ಟ್ವೀಟ್ನಲ್ಲಿ ಬರೆದುಕೊಂಡಿದೆ.