ಬೆಂಗಳೂರು: ಕೊರೊನಾ ಮುಕ್ತಗೊಳಿಸಬೇಕಿದ್ದ ಬಿಜೆಪಿ, ಬಿಎಸ್ವೈ ಮುಕ್ತಗೊಳಿಸಲು ಮುಂದಾಗಿರುವಂತೆ ಕಾಣುತ್ತಿದೆ ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.
ಸರಣಿ ಟ್ವೀಟ್ ಮೂಲಕ ಬಿಎಸ್ವೈ ಮುಕ್ತ ಬಿಜೆಪಿ ವಿಚಾರ ಪ್ರಸ್ತಾಪಿಸಿರುವ ಕಾಂಗ್ರೆಸ್, "ಕೊರೊನಾ ಮುಕ್ತ ಕರ್ನಾಟಕ" ಮಾಡುವುದು ಈಗಿನ ತುರ್ತು ಆದ್ಯತೆಯಾಗಬೇಕಿತ್ತು. ಆದರೆ ಯಡಿಯೂರಪ್ಪ ಮುಕ್ತ ಬಿಜೆಪಿ ಮಾಡುವುದು ರಾಜ್ಯ ಬಿಜೆಪಿಯ ಆದ್ಯತೆಯಾಗಿದೆ. ರಾಜ್ಯದಲ್ಲಿ ಕೋವಿಡ್ ಸೋಂಕುಗಳು ಹೆಚ್ಚಾಗುತ್ತಿದ್ದು, ಜನತೆ ನರಳುತ್ತಿದ್ದಾರೆ. ವೈದ್ಯಕೀಯ ಸೌಲಭ್ಯಗಳಿಗೆ ಪರದಾಡುತ್ತಿದ್ದಾರೆ. ಇದೆಲ್ಲವನ್ನೂ ಮರೆತ ಬಿಜೆಪಿ ರಾಜಕೀಯದ ಆಟ ಆಡುತ್ತಿದೆ ಎಂದಿದೆ ಎಂದು ಕಿಡಿಕಾರಿದೆ.
20ಕ್ಕೂ ಹೆಚ್ಚು ಬಿಜೆಪಿ ಶಾಸಕರು ದೆಹಲಿಗೆ ತೆರಳಿದ್ದು, ಆಕ್ಸಿಜನ್ ತರಲು ಅಲ್ಲ. ಕೇಂದ್ರದಿಂದ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯ ಪ್ರಶ್ನಿಸಲು ಅಲ್ಲ. ಆಂಪೋಟರಿಸನ್ -ಬಿ ಔಷಧ ತರಲಲ್ಲ. ಲಸಿಕೆ ಹಂಚಿಕೆ ತಾರತಮ್ಯ ಪ್ರಶ್ನಿಸಲಲ್ಲ. ರಾಜ್ಯದ ಜನತೆಗೆ ಲಸಿಕೆ ತರಲಲ್ಲ, ಹೋಗಿದ್ದು ಕುರ್ಚಿ ಗುದ್ದಾಟಕ್ಕೆ. ದುರಿತ ಕಾಲದಲ್ಲೂ ರಾಜಕೀಯ ಮಾಡುತ್ತಿರುವ ರಾಜ್ಯ ಬಿಜೆಪಿ ನಾಯಕರಿಗೆ ಲಜ್ಜೆ ಎಂಬುದೇ ಇಲ್ಲ. ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಕರೆದಿರುವುದು ಉಲ್ಬಣಿಸುತ್ತಿರುವ ಶಿಲೀಂಧ್ರ ರೋಗದ ಬಗ್ಗೆ ಚರ್ಚಿಸಲಲ್ಲ. ಜನತೆಗೆ ಆರ್ಥಿಕ ನೆರವು ನೀಡುವುದಕ್ಕಲ್ಲ. ಕೊರೊನಾ ನಿಯಂತ್ರಣದ ಬಗ್ಗೆ ಚರ್ಚಿಸಲಲ್ಲ. ಬದಲಾಗಿ ಬಿಎಸ್ವೈ ಮುಕ್ತ ಬಿಜೆಪಿ ಮಾಡಲು ಎಂದು ಲೇವಡಿ ಮಾಡಿದೆ.
ಇಂಥ ಪಕ್ಷ ಅಧಿಕಾರದಲ್ಲಿರುವುದೇ ದುರ್ದೈವ:ಇಂತಹ ಅಯೋಗ್ಯ ಪಕ್ಷ ಅಧಿಕಾರದಲ್ಲಿರುವುದು ರಾಜ್ಯದ ದುರ್ದೈವ. ಬಿಜೆಪಿ ಪಕ್ಷ ಮಾಡುತ್ತಿರುವ ಚಟುವಟಿಕೆ ಎರಡೇ! ಒಂದು "ಮಾನವ ಮುಕ್ತ ಕರ್ನಾಟಕ". ಮತ್ತೊಂದು "ಯಡಿಯೂರಪ್ಪ ಮುಕ್ತ ಬಿಜೆಪಿ"! ಇವೆರಡರ ಹೊರತಾಗಿ ಬಿಜೆಪಿ ಚಿಂತಿಸುತ್ತಲೇ ಇಲ್ಲ. ಜನರ ಜೀವ ಉಳಿಸುವ ಗಾಂಭೀರ್ಯತೆ ಇಲ್ಲವೇ ಇಲ್ಲ. ಬಿಜೆಪಿ ಆಡಳಿತಕ್ಕೆ ಬಂದಾಗಲೆಲ್ಲ ಜನಪರ ಕೆಲಸ, ಯೋಜನೆಗಳ ಬದಲಿಗೆ ರೆಸಾರ್ಟ್ ರಾಜಕೀಯ, ಆಂತರಿಕ ಕಿತ್ತಾಟ, ಕುರ್ಚಿ ಕದನಗಳೇ ಸದ್ದು ಮಾಡುತ್ತವೆ. ಹಿಂದೆ 3 ಸಿಎಂಗಳ ಬದಲಾವಣೆಯಾಗಿತ್ತು, ಈಗಲೂ ಅದೇ ದಿಕ್ಕಿನಲ್ಲಿ ಸಾಗುತ್ತಿದೆ ಬಿಜೆಪಿ. ಬಿಜೆಪಿ ವರ್ಸಸ್ ಬಿಜೆಪಿ ಕಿತ್ತಾಟ ಆಡಳಿತದ ಮೇಲೆ ದುಷ್ಪರಿಣಾಮ ಬೀರಿ ರಾಜ್ಯ ಇನ್ನಷ್ಟು ಅಧೋಗತಿಗೆ ಇಳಿಯಲಿದೆ ಎಂದು ಅಭಿಪ್ರಾಯ ಪಟ್ಟಿದೆ.
ಮಾನ ಮರ್ಯಾದೆ ಬಿಟ್ಟ ಪಕ್ಷ:ಮಾನ, ಮರ್ಯಾದೆ, ಲಜ್ಜೆ ಮೂರು ಬಿಟ್ಟಿರುವ ಪಕ್ಷ ಬಿಜೆಪಿ. ಈ ಎಲ್ಲ ಕುರ್ಚಿ ಕದನ ನಡೆಸಲೆಂದೇ ಕೊರೊನಾ ಕೇಸ್‌ಗಳನ್ನು ಕಡಿಮೆ ತೋರಿಸಿ ವೇದಿಕೆ ಸಜ್ಜುಗೊಳಿಸಿಕೊಂಡಿದೆ. ವಿಜಯೇಂದ್ರ ಸರ್ವಿಸ್ ಟ್ಯಾಕ್ಸ್ ಲೂಟಿಯನ್ನು ತಮ್ಮದೇ ಪಕ್ಷದವರು ಆರೋಪಿಸುತ್ತಿದ್ದರೂ "ನಾ ಖಾವೊಂಗ ನಾ ಖಾನೆದುಂಗ" ಪ್ರಧಾನಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕದಿರುವುದು ದುರಂತ. ಬಿಜೆಪಿಯಲ್ಲಿ ನಡೆಯುತ್ತಿರುವ ಬಣ ರಾಜಕೀಯವನ್ನು ಮೂರು ಪಾರ್ಟಿಯ ಸರ್ಕಾರ ಎಂದು ಬಿಜೆಪಿಯ ಸಚಿವರೊಬ್ಬರು ಆರೋಪಿಸಿದ್ದಾರೆ, ಕಾಂಗ್ರೆಸ್ ಹೆಸರನ್ನು ನಿಮ್ಮ ಸ್ವಾರ್ಥದ ಬಣ ಕಿತ್ತಾಟಗಳಿಗೆ ಬಳಸಿಕೊಳ್ಳಬೇಡಿ. ರಾಜ್ಯ ಸಾವಿನ ಮನೆಯಂತಾಗಿರುವ ಹೊತ್ತಿನಲ್ಲಿ ಹರಿದ ಬನಿಯನ್‌ನಂತಾಗಿರುವ ನಿಮ್ಮ ಬಿಜೆಪಿ ವರ್ಸಸ್ ಬಿಜೆಪಿ ಕಿತ್ತಾಟವು ರಾಜ್ಯಕ್ಕೆ ಮಾರಕವಾಗಲಿದೆ ಎಂದಿದೆ.