ಬೆಂಗಳೂರು: ಕೇಂದ್ರದ ಮಾಜಿ ಸಚಿವ ಬೂಟಾ ಸಿಂಗ್ ನಿಧನಕ್ಕೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್, ಕಾರ್ಯಾಧ್ಯಕ್ಷರಾದ ಈಶ್ವರ್ ಖಂಡ್ರೆ, ಸಲೀಂ ಅಹಮದ್, ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮಾಜಿ ಡಿಸಿಎಂ ಜಿ.ಪರಮೇಶ್ವರ್ ಸೇರಿದಂತೆ ರಾಜ್ಯ ಕಾಂಗ್ರೆಸ್ನ ಹಲವು ನಾಯಕರು ಸಂತಾಪ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಪಕ್ಷ ತನ್ನ ಅಧಿಕೃತ ಟ್ವೀಟ್ ಖಾತೆಯಲ್ಲಿ ಸಂತಾಪ ಸೂಚಿಸಿದ್ದು, ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ಸರ್ದಾರ್ ಬೂಟಾ ಸಿಂಗ್ ಅವರ ನಿಧನ ದೇಶಕ್ಕೆ ತುಂಬಲಾರದ ನಷ್ಟ ಉಂಟುಮಾಡಿದೆ. 8 ಬಾರಿ ಸಂಸದರಾಗಿ, ಬಿಹಾರದ ರಾಜ್ಯಪಾಲರಾಗಿಯೂ ಸೇವೆ ಸಲ್ಲಿಸಿದ್ದ ಬೂಟಾ ಸಿಂಗ್ ಅವರು ದೀನ, ದಲಿತರ ಧ್ವನಿಯಾಗಿದ್ದರು. ಅವರ ಆತ್ಮಕ್ಕೆ ಶಾಂತಿ ದೊರಕಲಿ, ಅವರ ಕುಟುಂಬ ವರ್ಗ, ಅಪಾರ ಬೆಂಬಲಿಗರಿಗೆ ದುಃಖ ಭರಿಸುವ ಶಕ್ತಿ ಲಭಿಸಲಿ ಎಂದು ಆಶಿಸಿದೆ.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಟ್ವೀಟ್ ಮಾಡಿದ್ದು, ಕೇಂದ್ರದ ಮಾಜಿ ಸಚಿವ ಬೂಟಾ ಸಿಂಗ್ ಅವರ ಸಾವು ನೋವು ತಂದಿದೆ. ಅವರು ಯಾವಾಗಲೂ ಸಮಾಜದ ಶೋಷಿತ ಮತ್ತು ವಂಚಿತ ವರ್ಗಗಳ ಪರವಾಗಿ ಹೋರಾಡಿದ್ದರು. ನಾನು ವೈಯಕ್ತಿಕವಾಗಿ ಅವರ ಪ್ರೀತಿ ಮತ್ತು ಮಾರ್ಗದರ್ಶನವನ್ನು ವರ್ಷಗಳಿಂದ ಸ್ವೀಕರಿಸಿದ್ದೇನೆ. ಈ ನೆನಪುಗಳು ಯಾವಾಗಲೂ ನನ್ನ ಮನಸ್ಸಿನಲ್ಲಿರುತ್ತವೆ ಎಂದು ಸಂತಾಪ ಸೂಚಿಸಿದ್ದಾರೆ.
ಇನ್ನು ಈ ಸಂಬಂಧ ಮಾಜಿ ಸಚಿವ ಹೆಚ್.ಸಿ.ಮಹದೇವಪ್ಪ ಟ್ವೀಟ್ ಮಾಡಿದ್ದು, ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ, ಸಂಸದ, ಸಚಿವರಾಗಿ, ಬಿಹಾರದ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ ಬೂಟಾ ಸಿಂಗ್ ಅವರು ಇಂದು ನಮ್ಮನ್ನು ಅಗಲಿದ್ದಾರೆ. ಅವರಿಗೆ ನನ್ನ ಭಾವಪೂರ್ಣ ನಮನಗಳು ಎಂದಿದ್ದಾರೆ.
ರಾಜ್ಯ ಯುವ ಕಾಂಗ್ರೆಸ್ ತನ್ನ ಟ್ವೀಟ್ ಖಾತೆಯಲ್ಲಿ, ಎಂಟು ಬಾರಿ ಸಂಸದರಾಗಿದ್ದ ಕಾಂಗ್ರೆಸ್ ಹಿರಿಯ ದಲಿತ ಮುಖಂಡ ಬೂಟಾ ಸಿಂಗ್ ವಿಧಿವಶರಾಗಿದ್ದಾರೆ. ಅವರಿಗೆ ನಮ್ಮ ಸಂತಾಪ ಸೂಚಕಗಳು ಎಂದಿದೆ.
ಈ ಸಂಬಂಧ ಸಂಸದ ಡಿ.ಕೆ.ಸುರೇಶ್ ಟ್ವೀಟ್ ಮಾಡಿದ್ದು, ಮಾಜಿ ಕೇಂದ್ರ ಸಚಿವರಾದ ಬೂಟಾ ಸಿಂಗ್ ಅವರ ನಿಧನಕ್ಕೆ ತೀವ್ರ ಸಂತಾಪ ಸೂಚಿಸುತ್ತೇನೆ. ಕಾಂಗ್ರೆಸ್ ಪಕ್ಷದ ನಿಷ್ಠಾವಂತ ನಾಯಕರಾಗಿದ್ದ ಬೂಟಾ ಸಿಂಗ್ ಅವರು ಹಲವು ವರ್ಷಗಳ ಕಾಲ ಪಕ್ಷ ಮತ್ತು ಸರ್ಕಾರದ ಹುದ್ದೆಗಳನ್ನು ನಿಷ್ಠೆಯಿಂದ ನಿಭಾಯಿಸಿದವರು. ಅವರ ಅಗಲಿಕೆಯ ದುಃಖ ಭರಿಸುವ ಶಕ್ತಿ ಅವರ ಕುಟುಂಬಕ್ಕೆ ಸಿಗಲಿ ಎಂದು ಆಶಿಸುತ್ತೇನೆ ಎಂದಿದ್ದಾರೆ.
ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಟ್ವೀಟ್ ಮಾಡಿದ್ದು, ಇಂದಿರಾ ಗಾಂಧಿ ಅವರ ಸರ್ಕಾರದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿದ್ದ ಬೂಟಾ ಸಿಂಗ್ ಅವರು ಅನುಭವಿ ರಾಜಕಾರಣಿ. ಬಡವರು ಮತ್ತು ದೀನ-ದಲಿತರ ಧ್ವನಿಯಾಗಿದ್ದವರು. ಕೇಂದ್ರದ ಮಾಜಿ ಸಚಿವ ಬೂಟಾ ಸಿಂಗ್ ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ. ಅವರ ಕುಟುಂಬ ಸದಸ್ಯರು, ಅಭಿಮಾನಿಗಳಿಗೆ ಈ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಸಂತಾಪ ಸೂಚಿಸಿದ್ದಾರೆ.