ಬೆಂಗಳೂರು: ಹಿರಿಯ ಕಾಂಗ್ರೆಸ್ ನಾಯಕ ಮೋತಿಲಾಲ್ ವೋಹ್ರಾ ನಿಧನಕ್ಕೆ ರಾಜ್ಯ ಕಾಂಗ್ರೆಸ್ ನಾಯಕರು ಸಂತಾಪ ವ್ಯಕ್ತಪಡಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಟ್ವೀಟ್ ಮಾಡಿದ್ದು, ರಾಷ್ಟ್ರೀಯ ನಾಯಕರಾದ ಮೋತಿಲಾಲ್ ವೋಹ್ರಾ ಅವರ ನಿಧನ ಸುದ್ದಿ ತೀವ್ರ ಆಘಾತ ತಂದಿದೆ. ನಮ್ಮ ಹಿರಿಯ ಮತ್ತು ಕಾಂಗ್ರೆಸ್ ಪಕ್ಷದ ಸಮರ್ಪಿತ ನಾಯಕರಾಗಿದ್ದರು. ಪಕ್ಷಕ್ಕೆ ಮಾತ್ರವಲ್ಲದೆ ರಾಷ್ಟ್ರಕ್ಕೂ ಅವರು ನೀಡಿದ ಕೊಡುಗೆ ಮತ್ತು ಅವರ ಅಚಲ ನಿಷ್ಠೆ ನಮಗೆಲ್ಲರಿಗೂ ಸ್ಫೂರ್ತಿಯಾಗಿದೆ. ಅವರ ಕುಟುಂಬಕ್ಕೆ ಸಂತಾಪ ಸೂಚಿಸುತ್ತೇನೆ ಎಂದಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಟ್ವೀಟ್
ರಾಜ್ಯಸಭೆ ಸದಸ್ಯ ಮಲ್ಲಿಕಾರ್ಜುನ ಖರ್ಗೆ ತಮ್ಮ ಟ್ವೀಟ್ನಲ್ಲಿ, ಹಿರಿಯ ಕಾಂಗ್ರೆಸ್ಸಿಗ ಮೋತಿಲಾಲ್ ವೊಹ್ರಾ ಅವರ ನಿಧನದಿಂದ ತೀವ್ರ ದುಃಖಿತವಾಗಿದೆ. ಅವರು ಶಕ್ತಿಯ ಆಧಾರಸ್ತಂಭವಾಗಿದ್ದರು ಮತ್ತು ಅವರ ಕೊನೆಯ ಉಸಿರು ಇರುವವರೆಗೂ ಪಕ್ಷವನ್ನು ಬಲಪಡಿಸುವ ಅವರ ನಿರಂತರ ಪ್ರಯತ್ನವು ರಾಷ್ಟ್ರೀಯ ಕಾಂಗ್ರೆಸ್ನಲ್ಲಿ ಎಲ್ಲರಿಗೂ ಸ್ಫೂರ್ತಿಯಾಗಿದೆ. ಅವರ ದುಃಖಿತ ಕುಟುಂಬಕ್ಕೆ ನನ್ನ ಆಳವಾದ ಸಂತಾಪ ಸೂಚಿಸುತ್ತೇನೆ ಎಂದಿದ್ದಾರೆ.
ಮಾಜಿ ಡಿಸಿಎಂ ಜಿ ಪರಮೇಶ್ವರ್ ತಮ್ಮ ಟ್ವೀಟ್ನಲ್ಲಿ, ಹಿರಿಯ ಕಾಂಗ್ರೆಸ್ ಮುಖಂಡ, ಮಾಜಿ ಕೇಂದ್ರ ಕ್ಯಾಬಿನೆಟ್ ಸಚಿವ ಮತ್ತು ಮಧ್ಯಪ್ರದೇಶದ ಮಾಜಿ ಸಿಎಂ ಮೋತಿಲಾಲ್ ವೊಹ್ರಾ ನಿಧನ ಆಘಾತ ತಂದಿದೆ. ಒಬ್ಬ ನಿಪುಣ ಮತ್ತು ನಿಷ್ಣಾತ ನಾಯಕರಾಗಿದ್ದ ಅವರು ತಮ್ಮ ಕಾರ್ಯಗಳ ಮೂಲಕವೇ ಅಪಾರ ಗೌರವವನ್ನು ಹೊಂದಿದ್ದರು. ಅವರ ಕುಟುಂಬಕ್ಕೆ ನನ್ನ ಹೃತ್ಪೂರ್ವಕ ಸಂತಾಪ ವ್ಯಕ್ತಪಡಿಸುತ್ತೇನೆ ಎಂದಿದ್ದಾರೆ.
ಇದನ್ನೂ ಓದಿ : ಕಾಂಗ್ರೆಸ್ನ ಹಿರಿಯ ನಾಯಕ ಮೋತಿ ಲಾಲ್ ವೋರಾ ಇನ್ನಿಲ್ಲ: ಮೋದಿ, ರಾಹುಲ್ ಸಂತಾಪ
ಸಂಸದ ಡಿಕೆ ಸುರೇಶ್ ಟ್ವೀಟ್ ಮಾಡಿದ್ದು, ನಮ್ಮ ಅನುಭವಿ ನಾಯಕ ಮೋತಿಲಾಲ್ ವೊಹ್ರಾ ಅವರ ನಿಧನ ಸುದ್ದಿ ಕೇಳಿ ಬೇಸರವಾಯಿತು. ಕಾಂಗ್ರೆಸ್ ಪಕ್ಷದ ಪ್ರಮುಖ ರಾಜಕೀಯ ಪಟು, ಎಂಪಿಸಿಸಿ ಅಧ್ಯಕ್ಷರಾಗಿ, ಮಧ್ಯಪ್ರದೇಶದ ಸಿಎಂ, ಕೇಂದ್ರ ಸಚಿವರಾಗಿ, ಎಐಸಿಸಿಯ ಖಜಾಂಚಿಯಾಗಿ ಅನೇಕ ಸ್ಥಾನಗಳನ್ನು ಅಲಂಕರಿಸಿ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿದ್ದರು ಮತ್ತು ಸಾರ್ಥಕ ಸೇವೆ ಸಲ್ಲಿಸಿದ್ದರು. ಕೊನೆಯವರೆಗೂ ನಿಜವಾದ ನಿಷ್ಠಾವಂತ, ಅವನ ನಾಯಕತ್ವ, ಸಂಘಟನೆ ಮತ್ತು ಆಡಳಿತ ಕೌಶಲ್ಯಗಳು ವ್ಯಕ್ತಪಡಿಸಿದ್ದ ಇವರನ್ನು ನಾವಿಂದು ಕಳೆದುಕೊಂಡಿದ್ದೇವೆ. ಅವರ ಆತ್ಮಕೆ ಶಾಂತಿ ಸಿಗಲಿ. ಓಂ ಶಾಂತಿ ಎಂದಿದ್ದಾರೆ.
ಶಾಸಕ ಸೌಮ್ಯ ರೆಡ್ಡಿ ಟ್ವೀಟ್ ಮಾಡಿದ್ದು, ಹಿರಿಯ ಕಾಂಗ್ರೆಸ್ ಮುಖಂಡರು ಮತ್ತು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಮೋತಿಲಾಲ್ ವೋಹ್ರಾ ಅವರು ನಿಧನರಾದ ಸುದ್ದಿ ಕೇಳಿ ಅತೀವ ದುಃಖವುಂಟಾಯಿತು. ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತಾ, ಕುಟುಂಬ ವರ್ಗದವರಿಗೆ ಮತ್ತು ಸಹಸ್ರಾರು ಅಭಿಮಾನಿಗಳಿಗೆ ಈ ದುಃಖ ಸಹಿಸುವ ಶಕ್ತಿ ಸಿಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ. ಇವರು ಮಾತ್ರವಲ್ಲದೆ ಇನ್ನೂ ಅನೇಕ ಕಾಂಗ್ರೆಸ್ ನಾಯಕರು ಮೋತಿಲಾಲ್ ವೊಹ್ರಾ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.