ಬೆಂಗಳೂರು:ಕರುನಾಡಿನ ಸಮಸ್ತ ಜನತೆಗೆ ಕಾಂಗ್ರೆಸ್ ನಾಯಕರು ಸ್ವಾತಂತ್ರ್ಯೋತ್ಸವ ಶುಭಾಶಯ ತಿಳಿಸಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಡಿಸಿಎಂ ಡಾ ಜಿ ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಮಾಜಿ ಸಚಿವರಾದ ಡಿ ಕೆ ಶಿವಕುಮಾರ್, ಹೆಚ್ ಕೆ ಪಾಟೀಲ್, ಎಂ ಬಿ ಪಾಟೀಲ್, ಸೇರಿದಂತೆ ಹಲವು ನಾಯಕರು ನೇರವಾಗಿ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಜನತೆಗೆ ಶುಭಾಶಯ ಕೋರಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಮೂಲಕ ಶುಭಕೋರಿದ್ದು, ಪರಿಪೂರ್ಣ ಸ್ವಾತಂತ್ರ್ಯ ಎಂದರೆ ಕೇವಲ ರಾಜಕೀಯ ಸ್ವಾತಂತ್ರ್ಯ ಅಲ್ಲ. ಸಾಮಾಜಿಕ ಸಮಾನತೆ, ಸಂಪತ್ತಿನ ಸಮಾನ ಹಂಚಿಕೆ, ಜಾತೀಯತೆ ನಿರ್ಮೂಲನೆ, ಕೋಮುವಾದ ಮತ್ತು ಧಾರ್ಮಿಕ ಅಸಹಿಷ್ಣುತೆಯ ಅಂತ್ಯವಷ್ಟೆ ನಿಜವಾದ ಸ್ವಾತಂತ್ರ್ಯ. ನಾಡ ಜನತೆಗೆ ಸ್ವಾತಂತ್ರ್ಯೋತ್ಸವದ ಶುಭಾಶಯಗಳು ಎಂದಿದ್ದಾರೆ.
ಮಾಜಿ ಡಿಸಿಎಂ ಡಾ. ಜಿ. ಪರಮೇಶ್ವರ್ ಟ್ವೀಟ್ ಮೂಲಕ ಶುಭಕೋರಿದ್ದು, ದೇಶಕ್ಕೀಗ 73 ವರ್ಷ. ಹಲವು ಮೈಲಿಗಲ್ಲುಗಳನ್ನು ದಾಟಿ ಲೋಕವೇ ನಿಬ್ಬೆರಗಾಗಿ ನೋಡುವಂತ ದೇಶವಾಗಿ ಭಾರತ ಮಾರ್ಪಟ್ಟಿದೆ. ಇನ್ನೂ ಅನೇಕ ಸವಾಲುಗಳಿಂದ ದೇಶವನ್ನು ಮುಕ್ತಗೊಳಿಸಬೇಕಿದೆ. ನಾವೆಲ್ಲರೂ ಜೊತೆಯಾಗಿ ಕೂಡಿ ಸುಭದ್ರ ಭಾರತವನ್ನು ಕಟ್ಟಬೇಕಿದೆ. ಎಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು ಎಂದು ತಿಳಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕೆಪಿಸಿಸಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಧ್ವಜಾರೋಹಣ ಸಮಾರಂಭದಲ್ಲಿ ನಾಡಿನ ಜನತೆಗೆ ಸ್ವಾತಂತ್ರ್ಯೋತ್ಸವದ ಶುಭಾಶಯ ಸಲ್ಲಿಸಿದ್ದು, ದೇಶ ಅಭಿವೃದ್ಧಿ ಪರವಾಗಿ ಕಾರ್ಯನಿರ್ವಹಿಸಲು ಜನತೆಗೆ ಒಳಿತಾಗಲಿ ಎಂದು ಹಾರೈಸಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಕೂಡ ಸಾಮಾಜಿಕ ಜಾಲತಾಣಗಳ ಮೂಲಕ ನಾಡಿನ ಜನತೆಗೆ ಶುಭಾಶಯ ತಿಳಿಸಿದ್ದಾರೆ.