ಬೆಂಗಳೂರು: ಆಡಳಿತ ಪಕ್ಷಕ್ಕೆ ಆಕ್ರೋಶ, ಹತಾಶೆ, ಆತಂಕ, ಅನುಕಂಪ ಇರಬೇಕು, ತಪ್ಪಲ್ಲ. ಆದರೆ, ಹೊಟ್ಟೆಯಲ್ಲಿರುವ ಅಸಹ್ಯವನ್ನೆಲ್ಲ ಬಾಯಲ್ಲಿ ಕಾರಿಕೊಳ್ಳುವ ವಿಕೃತಿ ಮಾತ್ರ ಇರಲೇಬಾರದು. ಹೀಗಂತ ಹೇಳಲು ನಾವು ಗಂಭೀರವಾಗಿ ವಿಷಾದಿಸುತ್ತೇವೆ. ನಾಮ ಹಾಕುವುದರಲ್ಲಿ ರಾಜ್ಯ ಕಾಂಗ್ರೆಸ್ ಪರಮ ನಿಸ್ಸೀಮ ಎಂದು ಜೆಡಿಎಸ್ ಹೇಳಿದೆ.
ನಾಮ ಹಾಕುವುದರಲ್ಲಿ ರಾಜ್ಯ ಕಾಂಗ್ರೆಸ್ ಪರಮ ನಿಸ್ಸೀಮ. ಒಂದೆಡೆ ಆದಾಯ ತೆರಿಗೆಯವರಿಗೆ #SST, #YST ಬಾಬ್ತುಗಳ ಕಂತೆ ಕಂತೆ ಹಣ ಸಿಕ್ಕಿದೆ. ಸಿಎಂ, ಡಿಸಿಎಂ ಪಟಾಲಂ ಪರಿಶ್ರಮದಿಂದ ಬಾಚಿದ್ದ ಪಾಪದ ಹಣ ಕೈ ತಪ್ಪಿದೆ. ಐಟಿ, ಇಡಿ ಕುಣಿಕೆ ಯಾರಿಗೆಲ್ಲ ಬಿಗಿದುಕೊಳ್ಳಲಿದೆಯೋ ಗೊತ್ತಿಲ್ಲ. ಇದರ ನಡುವೆ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ 5 ತಿಂಗಳು ತುಂಬುವ ಮೊದಲೇ ಬೆಳಗಾವಿ ಜ್ವಾಲೆ ಭುಗಿಲೆದ್ದಿದೆ. ಅಂತಃಪುರದ ಕಲಹ ಹಾದಿಬೀದಿಗಳಲ್ಲಿ ಮೂರು ಕಾಸಿಗೆ ಬಿಕರಿಯಾಗುತ್ತಿದೆ ಎಂದು ಲೇವಡಿ ಮಾಡಿದೆ.
ಕಾಂಗ್ರೆಸ್ ಭಾರತೀಯ ಅಸ್ಮಿತೆಯ ನೈಜ ಶತ್ರು, ದೇಶದ್ರೋಹಿಗಳ ಆಪ್ತಬಂಧು, ಹಸ್ತಿನಾವತಿಯಲ್ಲೇ ಅಡ್ರಸ್ಸಿಲ್ಲದ ಪಕ್ಷ, ಕರ್ನಾಟಕ ಜೋಡೋ ಬದಲು ಕಾವೇರಿ ತೋಡೋ ಎನ್ನುತ್ತಿದೆ. ಗೆಲ್ಲುವ ತನಕ ಜಾತ್ಯತೀತ, ಗೆದ್ದ ಮೇಲೆ ಜಾತಿಗಣಿತ! ಇದೇ ಅದರ ಮತ ಗಳಿಕೆಯ ಮೂಲ ಬಂಡವಾಳ. ತನ್ನ ಮುಖವನ್ನು ಕನ್ನಡಿಯಲ್ಲೂ ನೋಡಿಕೊಳ್ಳಲಾಗದ ಪಕ್ಷ. ಪರರ ಹಂಗಿನಲ್ಲಿಯೆ ಬದುಕುವ ಪರಾವಲಂಬಿ ಎಂದು ಟೀಕಿಸಿದೆ.
ಕಾಂಗ್ರೆಸ್ ತನಗಿರುವ ಬಿರುದು ಬಾವಲಿಗಳನ್ನು ಇನ್ನೊಬ್ಬರ ಹಣೆಗೆ ಕಟ್ಟುವ ಕೀಳು ಕಸುಬಿಗೆ ಕೈ ಹಾಕಿದೆ. ಗೋಮುಖವ್ಯಾಘ್ರವೇ ಈಗ ಕುಮಾರಸ್ವಾಮಿ ಅವರನ್ನು ಗೋಸುಂಬೆ ಎಂದು ನಿಂದಿಸುತ್ತಿದೆ. ಅಕ್ರಮ, ಅವ್ಯವಹಾರ, ಅನಾಚಾರ.. ಅಷ್ಟೇ ಅಲ್ಲ, ವಾಮಾಚಾರದ ವೀರನೇ ರಾಜ್ಯ ಕಾಂಗ್ರೆಸ್ ಸಾರಥಿ ಎಂದಿದೆ.
ಜಾತ್ಯತೀತತೆ ತನ್ನದೇ ಗುತ್ತಿಗೆ ಎಂದು ಕರ್ಣಕಠೋರ ಸುಳ್ಳು ಹೇಳುತ್ತಾ ಅದನ್ನು ಬಿಹಾರದ ನಿತೀಶ್ ಕುಮಾರ್ ಅವರ ಮನೆ ಹಿತ್ತಲಲ್ಲಿ ಹೂತು ಸಮಾಧಿ ಮಾಡಿದೆ ಕಾಂಗ್ರೆಸ್. ಈಗ ಜಾತಿ-ಜಾತಿ ಎನ್ನುತ್ತಾ ಜಾತಿಗಣಿತ ಎಂಬ ಅಪಾಯಕಾರಿ ಆಟ ಆರಂಭಿಸಿ ಚುನಾವಣೆಗೆ ಮುನ್ನವೇ ಟೂಲ್ ಕಿಟ್ ರೆಡಿ ಮಾಡಿಟ್ಟಿದೆ. ರಾಜ್ಯವನ್ನು ತುಷ್ಟೀಕರಣದ ಬಿಸಿತುಪ್ಪದಲ್ಲಿ ಬೇಯಿಸಲು ನಡೆಯುತ್ತಿರುವ ಟೂಲ್ ಕಿಟ್ ಕಾರ್ಯಾಗಾರದಲ್ಲಿ ಕೋಮು ಕುಂಡ ಸಿದ್ಧಪಡಿಸಿದೆ ಕೈ ಪಕ್ಷ.
ಕುಮಾರಸ್ವಾಮಿ ಅವರನ್ನು ವಚನ ಭ್ರಷ್ಟರು ಎನ್ನುತ್ತೀರಿ. ಮೈತ್ರಿ ಸರಕಾರ ತೆಗೆದು ಸೋನಿಯಾ ಗಾಂಧಿ, ರಾಹುಲ್ ಗಾಂಧಿಗೇ ಒಳಏಟು ಕೊಟ್ಟ ಸಿದ್ದಪುರುಷರನ್ನೇ ಸಿಎಂ ಮಾಡಿಕೊಂಡಿದ್ದೀರಿ. ಸಿಗ್ಗು, ಲಜ್ಜೆ ಇಲ್ಲವೇ? ಕಾಂಗ್ರೆಸ್ ಕಳ್ಳಸುಳ್ಳಿನ ಫ್ಯಾಕ್ಟರಿ. ಅಪ್ಪಟ ಅಸತ್ಯಗಳ ಅಡ್ಡೆ. ದೇಶದ್ರೋಹಿಗಳ ಪರವಿರುವ ಪಕ್ಷ. ಒಂದು ಸಮುದಾಯದ ತುಷ್ಠೀಕರಣದ ನಗದೀಕರಣವೇ ಅದರ ಅರ್ಥಶಾಸ್ತ್ರ. ವಿ.ಪಿ.ಸಿಂಗ್, ಚಂದ್ರಶೇಖರ್, ಹೆಚ್.ಡಿ.ದೇವೇಗೌಡರು, ಐಕೆ ಗುಜ್ರಾಲ್ ಸರಕಾರಗಳನ್ನು ಬಲಿ ಪಡೆದ ಪಕ್ಷ. ನಯವಂಚನೆ, ವಿಶ್ವಾಸದ್ರೋಹವೇ ಕಾಂಗ್ರೆಸ್ ಲಾಂಛನ. ಮೈತ್ರಿಯಿಂದ ಮದ್ರಾಸ್ ಐ ಬಂದ ಹಾಗೆ ಪತರಗುಟ್ಟುತ್ತಿದೆ.
ಕೆಲ ದಿನ ಕಾಯಿರಿ, ಅಂಗಿ ಹರಿದುಕೊಳ್ಳುವ ಸ್ಥಿತಿ ಯಾರಿಗೆ ಕಾದಿದೆಯೋ ನೋಡೋಣ. 135 ಶಾಸಕರಿದ್ದಾರೆ ಎಂದು ಬೀಗಿದ್ದೇ ಬಂತು. ಈಗ ಒಂದು ಪಾರ್ಟಿ, ಹತ್ತಾರು ಬಣ ಎನ್ನುವ ಕಾಂಗ್ರೆಸ್ ನ ಬುಡವೇ ಬಿದ್ದುಹೋಗುವ ಪರಿಸ್ಥಿತಿ ಸೃಷ್ಟಿ ಆಗುತ್ತಿದೆ. ಹತಾಶೆ, ಮತಿಭ್ರಮಣೆ ಯಾರಿಗೆ..? ಅರ್ಥವಾಗದಷ್ಟು ಅಜ್ಞಾನವೇ ನಿಮಗೆ?. ಜಾತ್ಯತೀತ ಎನ್ನುತ್ತ ಒಕ್ಕಲಿಗರನ್ನು ಎತ್ತಿಕಟ್ಟುವ ನೀಚ ಪ್ರಯತ್ನಕ್ಕೂ ಕೈ ಹಾಕಿದೆ ಕಾಂಗ್ರೆಸ್. ಒಕ್ಕಲಿಗರು ಹೀನ ಸಂಸ್ಕೃತಿಯುಳ್ಳವರು, ಸಂಸ್ಕೃತಿಹೀನರು ಎನ್ನುವ ಹೇಳಿಕೆ ಹಿಂದೆ ಇದೇ ಕಾಂಗ್ರೆಸ್ಸಿನ ಟೂಲ್ ಕಿಟ್ ಷಡ್ಯಂತ್ರ ಅಡಗಿದೆ ಎಂದು ಜೆಡಿಎಸ್ ಟೀಕಿಸಿದೆ.
ಇದನ್ನೂ ಓದಿ:ಕಾಂಗ್ರೆಸ್ ಸರ್ಕಾರದ ಎಟಿಎಂ ಕಲೆಕ್ಷನ್ನ ವಂಶಾವಳಿ ಹೆಸರಿನ ಪೋಸ್ಟರ್ ರಿಲೀಸ್ ಮಾಡಿದ ಕೇಸರಿ ಪಡೆ