ಬೆಂಗಳೂರು: ನಾಯಕತ್ವ ಬದಲಾವಣೆಯ ಗೊಂದಲದ ನಡುವೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಇಂದು ಮಹತ್ವದ ಸಚಿವ ಸಂಪುಟ ಸಭೆ ನಡೆಸಲಿದ್ದಾರೆ.
ಸಿಎಂ ರಾಜೀನಾಮೆ ಬಗ್ಗೆ ದಿನೇ ದಿನೆ ಕುತೂಹಲ ಹೆಚ್ಚಾಗುತ್ತಿದೆ. ಇದೇ ಜುಲೈ 26ಕ್ಕೆ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಎರಡು ವರ್ಷ ಪೂರೈಸಲಿದೆ. ಆ ಬಳಿಕ ಸಿಎಂ ಬಿಎಸ್ವೈ ಪದತ್ಯಾಗ ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಎಲ್ಲಾ ಸಚಿವರು, ಶಾಸಕರಲ್ಲಿ ನಾಯಕತ್ವ ಬದಲಾವಣೆಯ ಸಂಬಂಧ ಗೊಂದಲ, ಆತಂಕ ಮನೆ ಮಾಡಿದೆ. ಈ ನಿಟ್ಟಿನಲ್ಲಿ ಸಂಜೆ 4 ಗಂಟೆಗೆ ನಡೆಯಲಿರುವ ಸಚಿವ ಸಂಪುಟ ಸಭೆ ಮಹತ್ವ ಪಡೆದುಕೊಂಡಿದೆ.
ಸಿಎಂ ದೆಹಲಿ ಭೇಟಿ ಬಳಿಕ ನಡೆಯುತ್ತಿರುವ ಮೊದಲ ಸಚಿವ ಸಂಪುಟ ಸಭೆ ಇದಾಗಿದೆ. ಸಭೆಯಲ್ಲಿ ಸಿಎಂ ನಾಯಕತ್ವ ಬದಲಾವಣೆ, ಹೈಕಮಾಂಡ್ ಜೊತೆಗೆ ನಡೆದ ಸಮಾಲೋಚನೆ ಬಗ್ಗೆ ಸಂಪುಟ ಸಚಿವರಲ್ಲಿ ಪ್ರಸ್ತಾಪಿಸುವ ಸಾಧ್ಯತೆ ಇದೆ. ಸಚಿವ ಸಂಪುಟ ಸಭೆಯ ಅನೌಪಚಾರಿಕ ಮಾತುಕತೆ ವೇಳೆ ಸಿಎಂ ಸಚಿವರಿಗೆ ನಾಯಕತ್ವ ಬದಲಾವಣೆ ಸಂಬಂಧ ತಮ್ಮ ನಿಲುವು ತಿಳಿಸುವ ಸಾಧ್ಯತೆ ಹೆಚ್ಚಿದೆ. ಈ ಬಗ್ಗೆ ಹಲವು ಸಚಿವರಲ್ಲೂ ಗೊಂದಲ ಇದ್ದು, ಅವರೇ ವಿಷಯ ಪ್ರಸ್ತಾಪಿಸುವ ಸಾಧ್ಯತೆ ಇದೆ.
ಓದಿ : ರಾಜೀನಾಮೆ ಸುಳಿವು ನೀಡಿದ್ರಾ ಬಿಎಸ್ವೈ..? ಜು26ರ ಬಳಿಕ ಹೈಕಮಾಂಡ್ ಸೂಚನೆಯಂತೆ ಮುಂದಿನ ಕಾರ್ಯ ಎಂದ ಸಿಎಂ
ಹೈಕಮಾಂಡ್ ಮುಂದೆ ತಮ್ಮ ಪದತ್ಯಾಗದ ಇಂಗಿತ, ಜುಲೈ 25ರಂದು ಹೈ ಕಮಾಂಡ್ನಿಂದ ಬರುವ ಸಂದೇಶ, ತಮ್ಮ ಮುಂದಿನ ಹೆಜ್ಜೆ ಈ ಎಲ್ಲಾ ಗೊಂದಲಗಳ ಬಗ್ಗೆ ಸಿಎಂ ಯಡಿಯೂರಪ್ಪ ಸಂಪುಟ ಸಭೆಯಲ್ಲಿ ಸಚಿವರ ಜೊತೆ ಅನೌಪಚಾರಿಕವಾಗಿ ಮಾತನಾಡುವ ಸಾಧ್ಯತೆ ಇದೆ. ಹೀಗಾಗಿ, ಇಂದು ಸಂಜೆ ನಡೆಯುವ ಸಚಿವ ಸಂಪುಟ ಸಭೆ ಕುತೂಹಲ ಕೆರಳಿಸಿದೆ.
ಸಿಎಂ ಯಡಿಯೂರಪ್ಪ ಅವರ ನೇತೃತ್ವದಲ್ಲಿ ನಡೆಯುವ ಸಂಪುಟ ಸಭೆಯಲ್ಲಿ ಕಂದಾಯ ಇಲಾಖೆಯ ತಹಶೀಲ್ದಾರ್ ಹುದ್ದೆಗೆ ಇತರೆ ಇಲಾಖೆಯ ಅಧಿಕಾರಿಗಳನ್ನು ನೇಮಿಸುವ ಕುರಿತು ಚರ್ಚಿಸುವ ಸಾಧ್ಯತೆ ಇದೆ. ರಾಜ್ಯ ಸರ್ಕಾರಿ ನೌಕರರಿಗೆ ಆರೋಗ್ಯ ಸಂಜೀವಿನಿ ಯೋಜನೆ ಅಡಿಯಲ್ಲಿ ನಗದು ರಹಿತ ವೈದ್ಯಕೀಯ ಸೌಲಭ್ಯ ಒದಗಿಸುವುದು. ರಾಜ್ಯದ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಆರ್ಥಿಕವಾಗಿ ಹಿಂದುಳಿದ ಸಮುದಾಯಗಳಿಗೆ ವಸತಿ ಇಲಾಖೆ ಮೂಲಕ 6 ಲಕ್ಷದ ಮನೆ ನಿರ್ಮಾಣ ಮಾಡುವ ಕುರಿತು ಸಂಪುಟದಲ್ಲಿ ಚರ್ಚೆ ನಡೆಯುವ ಸಾಧ್ಯತೆ ಇದೆ.
ರಾಜ್ಯ ನಾಗರಿಕ ಸೇವಾ ನಿಯಮಗಳಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸೇವಾ ನಿಯಮಗಳ ವಿಧೇಯಕ ತಿದ್ದುಪಡಿ ಮಾಡುವ ಕುರಿತು ಚರ್ಚೆ ಸಾಧ್ಯತೆ ಇದೆ. ಸುಮಾರು 1,500 ಕೋಟಿ ರೂ.ಗೂ ಅಧಿಕ ಮೊತ್ತದ ವಿವಿಧ ಯೋಜನೆಗಳಿಗೆ ಅನುಮೋದನೆ ನೀಡಲಾಗುತ್ತದೆ ಎಂಬ ಮಾಹಿತಿ ತಿಳಿದು ಬಂದಿದೆ.