ಕರ್ನಾಟಕ

karnataka

ETV Bharat / state

ಒಬಿಸಿ ಮೀಸಲು ಇಲ್ಲದೇ ಬಿಬಿಎಂಪಿ ಸೇರಿ ಯಾವುದೇ ಸ್ಥಳೀಯ ಸಂಸ್ಥೆ ಚುನಾವಣೆ ಮಾಡುವುದಿಲ್ಲ:  ಮಾಧುಸ್ವಾಮಿ - J. C. Madhu Swamy press meet

ಸ್ಥಳೀಯ ಚುನಾವಣೆಗೆ ವಿಚಾರವಾಗಿ ಮಧ್ಯಪ್ರದೇಶ, ಮಹಾರಾಷ್ಟ್ರ ಕೇಸ್​ಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮೇಲ್ಮನವಿ ಸಲ್ಲಿಸಲು ಚಿಂತಿಸಿದೆ. ಕಾನೂನು ತಜ್ಙರ ಜೊತೆ ಚರ್ಚಿಸಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.

State Cabinet Meeting
ಸಚಿವ ಮಾಧುಸ್ವಾಮಿ

By

Published : May 12, 2022, 9:49 PM IST

ಬೆಂಗಳೂರು:ಒಬಿಸಿ ಮೀಸಲಾತಿ ಇಟ್ಟುಕೊಂಡೇ ಚುನಾವಣೆ ಮಾಡುತ್ತೇವೆ. ಎಲ್ಲ ಚುನಾವಣೆಗೆ ಇದು ಅನ್ವಯವಾಗಲಿದೆ. ಭಕ್ತವತ್ಸಲ ಸಮಿತಿ ರಚನೆ ಮಾಡಿದ್ದೇವೆ. ಮೂರ್ನಾಲ್ಕು ತಿಂಗಳೊಳಗೆ ವರದಿ ಕೇಳಿದ್ದೇವೆ. ವರದಿ ನೀಡಿದ ನಂತರ ನಾವು ನಿರ್ಧಾರ ಮಾಡುತ್ತೇವೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಸ್ಪಷ್ಟಪಡಿಸಿದ್ದಾರೆ.

ವಿಧಾನಸೌಧದಲ್ಲಿ ಇಂದು ನಡೆದ ಸಚಿವ ಸಂಪುಟ ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಬಿಬಿಎಂಪಿ‌ ಚುನಾವಣೆ ನಡೆಸುವ ವಿಚಾರ ಸಂಪುಟ ಸಭೆಯಲ್ಲಿ ಚರ್ಚೆಯಾಗಲಿಲ್ಲ. ಆದರೆ, ಇಂದು ಬೆಳಗ್ಗೆ ಇದರ ಬಗ್ಗೆ ನಾವು ಚರ್ಚೆ ನಡೆಸಿದ್ದೇವೆ. ಸಿಎಂ, ಕಾನೂನು ತಜ್ಙರ ಜೊತೆ ಚರ್ಚಿಸಿದ್ದೇವೆ. ಮೀಸಲಾತಿ ಇಲ್ಲದೇ ಚುನಾವಣೆ ನಡೆಸಲ್ಲ ಎಂದು ಹೇಳಿದರು.

ಮಧ್ಯಪ್ರದೇಶ, ಮಹಾರಾಷ್ಟ್ರ ಕೇಸ್​ಗೆ ಸಂಬಂಧಿಸಿದಂತೆ ಸುಪ್ರೀಂ ಆದೇಶ ಮಾಡಿದೆ. ರಾಜ್ಯದಲ್ಲಿ ಕೆಲವು ತಾಂತ್ರಿಕ ಸಮಸ್ಯೆಗಳಿವೆ. 51 ಪಂಚಾಯಿತಿಗಳು ಟೌನ್​ಗೆ ಸೇರಿಸಿವೆ. ಈಗ ಗ್ರಾಮ ಪಂಚಾಯಿತಿ ಚುನಾವಣೆ ಮುಗಿದು ಹೋಗಿದೆ. ಬೆಂಗಳೂರಿಗೆ 110 ಹಳ್ಳಿಗಳನ್ನು ಸೇರಿಸಿದ್ದೇವೆ. ಈಗ ಟೌನ್ ನಡಿ ಚುನಾವಣೆ ನಡೆಸಲಾಗಲ್ಲ ಎಂದರು.

ಮೇಲ್ಮನವಿ:ಹೊಸ ತಾಲೂಕುಗಳನ್ನೂ ನಾವು ಮಾಡಿದ್ದೇವೆ. 11 ಸಾವಿರಕ್ಕೊಬ್ಬ ಸದಸ್ಯರಿರಬೇಕು. ಅದಕ್ಕಿಂತ ಕಡಿಮೆ ಜನರಿಗೆ ಸದಸ್ಯರಿರಬಾರದೆನ್ನಲಾಗಿದೆ. ಹಾಗಾಗಿ ಕ್ಷೇತ್ರ ಪುನರ್ ವಿಂಗಡಣೆ ಆಯೋಗ ಮಾಡಬೇಕು. ಜನಸಂಖ್ಯೆ ಆಧಾರದ ಮೇಲೆ ನಾವು ಮಾಡುತ್ತಿದ್ದೇವೆ. ನಮಗೆ ಮೂರ್ನಾಲ್ಕು ತಿಂಗಳು ಸಮಯಾವಕಾಶ ಬೇಕು. ಸುಪ್ರೀಂಕೋರ್ಟ್​ಗೆ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿದ್ದೇವೆ ಎಂದು ಸಚಿವರು ತಿಳಿಸಿದರು.

ಕಟ್ಟಡ ನಿರ್ಮಾಣಕ್ಕೆ ಟೌನ್ ಪ್ಲಾನಿಂಗ್ ಅನುಮತಿ ಕಡ್ಡಾಯವಲ್ಲ: ಪುರಸಭೆಯಲ್ಲಿ ಲೀಸ್ಟ್ ಪ್ರಾಪರ್ಟಿಗೆ ಅವಕಾಶ ನೀಡಲಾಗಿದೆ. ಕಟ್ಟಡ ನಿರ್ಮಾಣಕ್ಕೆ ಟೌನ್ ಪ್ಲಾನಿಂಗ್ ಅನುಮತಿ ಕಡ್ಡಾಯವಲ್ಲ. ಹೊಸದಾಗಿ ಕೆಲವು ಗ್ರಾಮಗಳು ಟೌನ್​ಗೆ ಸೇರಿವೆ. ಹೀಗಾಗಿ ಟೌನ್ ಪ್ಲಾನಿಂಗ್ ಅನುಮತಿ ಬೇಕಿತ್ತು. ಪ್ರಸ್ತುತ ಅದನ್ನು ತೆರವು ಮಾಡಲಾಗಿದೆ. ಸ್ಥಳೀಯ ಮಟ್ಟದಲ್ಲೇ ಅನುಮತಿಗೆ ಅವಕಾಶ ನೀಡಲಾಗಿದೆ ಎಂದರು.

ಸಂಪುಟ ಸಭೆಯ ಇತರ ಪ್ರಮುಖ ಅಂಶಗಳು:

  • ರೈತರಿಗೆ ಕೃಷಿ ಯಂತ್ರೋಪಕರಣಗಳ ಬಳಕೆಯನ್ನು ಪ್ರೋತ್ಸಾಹಿಸಲು ಹಾಗೂ ಇಂಧನ ವೆಚ್ಚದ ಭಾರವನ್ನು ಕಡಿಮೆ ಮಾಡಲು ಪ್ರತಿ ಎಕರೆಗೆ 250 ರೂ. ನಂತೆ ಗರಿಷ್ಠ ಐದು ಎಕರೆಗೆ ಡೀಸಲ್ ಸಹಾಯಧನ ನೀಡಲು 'ರೈತ ಶಕ್ತಿ' ಎಂಬ ಹೊಸ ಯೋಜನೆ ಅನುಷ್ಠಾನ ಮಾಡಲು ಸಂಪುಟ ಅನುಮೋದನೆ ನೀಡಿದೆ.
  • ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ವಡ್ವಾಳ್ ಪ್ರಾಥಮಿಕ ಕೇಂದ್ರವನ್ನು ಮಂಜೂರು ಮಾಡಿ ಅವಶ್ಯ ಸಿಬ್ಬಂದಿ ಮತ್ತು ಉಪಕರಣಗಳನ್ನು ಒದಗಿಸಲು ಅನುಮೋದನೆಗೆ ಒಪ್ಪಿಗೆ.
  • ಹಿಮೋಫೀಲಿಯಾ ಖಾಯಿಲೆಯಿಂದ ಬಳಲುತ್ತಿರುವ ರೋಗಿಗಳ ಚಿಕಿತ್ಸೆಗಾಗಿ ಅಗತ್ಯವಿರುವ ಆಂಟಿ ಹಿಮೋಫೀಲಿಯಾ ಔಷಧಗಳನ್ನು ಖರೀದಿಗೆ ಸಹಕಾರಕ್ಕೆ ಅನುಮೋದನೆ.
  • ಕರ್ನಾಟಕ ಭೂ ಕಂದಾಯ (ತಿದ್ದುಪಡಿ) ವಿಧೇಯಕ, 2022 ಕ್ಕೆ ಅನುಮೋದನೆ ನೀಡಲಾಗಿದೆ.
  • ಕರ್ನಾಟಕ ರಾಜ್ಯ ಉಗ್ರಾಣ ನಿಗಮವು ಕೈಗೆತ್ತಿಕೊಂಡಿರುವ ಅಪೂರ್ಣಗೊಂಡಿರುವ ಉಗ್ರಾಣಗಳ ಮತ್ತು ಮೂಲ ಕಾಮಗಾರಿ ಪೂರ್ಣಗೊಳಿಸಲು ರೂ.862.37ಕೋಟಿಗಳ ಪರಿಷ್ಕೃತ ಅಂದಾಜಿಗೆ ಅನುಮೋದನೆ.
  • ನಿವೃತ್ತ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಸೋಮರಾಜು ಅವರು ಕರ್ನಾಟಕ ಲೋಕಾಯುಕ್ತ ಸಂಸ್ಥೆಯಲ್ಲಿ ಅಪರ ನಿಬಂಧಕರು (ವಿಚಾರಣೆಗಳು) ಹುದ್ದೆಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದು, ಸದರಿಯವರ ಸೇವೆಯನ್ನು ದಿನಾಂಕ 17-01-2022ರಿಂದ ಇನ್ನೂ ಒಂದು ವರ್ಷದ ಅವಧಿಗೆ ಮುಂದುವರೆಸಲು ಅನುಮತಿ ನೀಡಲಾಗಿದೆ.
  • ಬೆಂಗಳೂರು ನಗರದ ಬಸವನಗುಡಿಯ ಶ್ರೀ ಕಾರಂಜಿ ಅಂಜನೇಯಸ್ವಾಮಿ ದೇವಾಲಯಕ್ಕೆ ಸೇರಿದ ಜಾಗದಲ್ಲಿ ಶೃಂಗೇರಿ ಶಾರದಪೀಠ ಇವರ ಸಹಭಾಗಿತ್ವದಲ್ಲಿ ಕಲ್ಯಾಣ ಮಂಟಪ ನಿರ್ಮಾಣ ಪೂರ್ಣಗೊಳಿಸಲು ಅನುಮತಿ ನೀಡುವ ಬಗ್ಗೆ ಹಾಗೂ 30 ವರ್ಷಗಳ ಅವಧಿಯಲ್ಲಿ 50:50 ಆದಾಯ ಹಂಚಿಕೆ ಬಗ್ಗೆ ಅನುಮೋದನೆ.
  • ಕುಡಿವ ನೀರು ಪೂರೈಕೆಗೆ ಸಂಪುಟ ಸಮ್ಮತಿ ನೀಡಿದ್ದು, ಅಪ್ಪರ್ ಭದ್ರಾದಿಂದ ಪೈಪ್ ಲೈನ್ ಮೂಲಕ ನೀರು ತರಲು 1300 ಕೋಟಿ ರೂ. ಅನುದಾನಕ್ಕೆ ಒಪ್ಪಿಗೆ ನೀಡಲಾಗಿದೆ ಹಾಗೇ ಚಿಕ್ಕಮಗಳೂರಿನ 146 ಹಳ್ಳಿಗಳು, ತರಿಕೇರಿಯೆ 156 ಹಳ್ಳಿಗಳು, ಅಜ್ಜಂಪುರ, ಹೊಸದುರ್ಗ 346 ಹಳ್ಳಿಗಳಿಗೆ ಭದ್ರಾಮೇಲ್ದಂಡೆ ಯೋಜನೆಯಡಿ ಕುಡಿಯುವ ನೀರು ಪೂರೈಕೆಗೆ ಸಂಪುಟದ ಸಮ್ಮತಿ.
  • ಅಟಲ್ ನಗರ ಪುನುರುತ್ಥಾನದಡಿ ನಗರ ಅಭಿವೃದ್ಧಿಗೆ 1 ಲಕ್ಷ ಮೇಲ್ಪಟ್ಟ ನಗರಗಳಲ್ಲಿ ಯುಜಿಡಿ ಕೆಲಸ. ಸುಮಾರು 287 ನಗರಗಳು ಇದಕ್ಕೆ ಸೇರಲಿವೆ. ಕೇಂದ್ರ, ರಾಜ್ಯದ ಪಾಲಿನಲ್ಲಿ ಕೆಲಸ ನಡೆಯಲಿವೆ. ಪ್ರಸ್ತುತ 927 ಕೋಟಿ ರೂ. ಮೀಸಲಿಡಲು ಒಪ್ಪಿಗೆ.
  • ವರ್ತೂರು ಕೋಡಿ ಪ್ಲೈ ಓವರ್ ರಸ್ತೆ ನಿರ್ಮಾಣಕ್ಕೆ 150.05 ಕೋಟಿ ರೂ. ವೆಚ್ಚ ಮಾಡಲು ಅನುಮತಿ. ಕೆಂಗಲ್-ದಶಾವರ-ಕಣ್ವಾ ರಸ್ತೆ ಅಭಿವೃದ್ಧಿಗೆ 28 ಕೋಟಿ ರೂ. ಹಣ ನೀಡಲು ಸಂಪುಟ ಸಮ್ಮತಿ.
  • ಬೆಂಗಳೂರಿನ ಆನಂದ್ ರಾವ್ ಸರ್ಕಲ್ ಬಳಿ ಪಿಪಿಎ ಮಾಡೆಲ್​ನಲ್ಲಿ ಅವಳಿ ಗೋಪುರ ನಿರ್ಮಾಣಕ್ಕೆ ಅನುಮತಿ ಮತ್ತು ಗಟ್ಟಿ ಬಸವಣ್ಣ ಏತನೀರಾವರಿ ಯೋಜನೆಗೆ ಒಪ್ಪಿಗೆ ನೀಡಲಾಗಿದೆ.

ಇದನ್ನೂ ಓದಿ:ಮತಾಂತರ ನಿಷೇಧ ಮಸೂದೆ: ಅನುಮೋದನೆಗೆ ರಾಜ್ಯಪಾಲರಿಗೆ ರವಾನಿಸಲು ರಾಜ್ಯ ಸಚಿವ ಸಂಪುಟ ನಿರ್ಧಾರ

ABOUT THE AUTHOR

...view details