ಬೆಂಗಳೂರು: ಬೈಎಲೆಕ್ಷನ್‌ನಲ್ಲಿ ಗೆಲುವು ಸಾಧಿಸಿರುವ 11 ಮಂದಿ ಶಾಸಕರಲ್ಲಿ 9 ಶಾಸಕರಿಗೆ ಮಂತ್ರಿ ಭಾಗ್ಯ ಸಿಗಲಿದ್ದು, ಉಳಿದ ಇಬ್ಬರಿಗೆ ಪ್ರಮುಖ ನಿಗಮ, ಮಂಡಳಿ ಅಧ್ಯಕ್ಷ ಸ್ಥಾನ ನೀಡಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಚಿಂತನೆ ನಡೆಸಿದ್ದಾರೆ ಎಂಬ ಮಾಹಿತಿ ಇದೆ.
ಎಲೆಕ್ಷನ್‌ನಲ್ಲಿ ಗೆದ್ದ 11 ಶಾಸಕರ ಪೈಕಿ ಮಂತ್ರಿಸ್ಥಾನ ಸಿಗೋದು 9 ಶಾಸಕರಿಗೆ ಮಾತ್ರ. ಇಬ್ಬರು ನೂತನ ಶಾಸಕರಿಗೆ ಮಂತ್ರಿಗಿರಿ ಕೈ ತಪ್ಪುವುದು ಬಹುತೇಕ ಖಚಿತವಾಗಿದೆ. ಕಾಗವಾಡ ಶಾಸಕ ಶ್ರೀಮಂತ ಪಾಟೀಲ್ ಮತ್ತು ಅಥಣಿ ಶಾಸಕ ಮಹೇಶ್ ಕುಮಟಳ್ಳಿಗೆ ಸಚಿವ ಸ್ಥಾನ ಅನುಮಾನವಾಗಿದೆ. ಇಬ್ಬರಿಗೂ ಪ್ರಭಾವಿ ನಿಗಮ, ಮಂಡಳಿ ಹುದ್ದೆ ನೀಡಿ ಉಳಿದ 9 ನೂತನ ಶಾಸಕರ ಜೊತೆಗೆ ಅನರ್ಹ ಶಾಸಕ ಆರ್.ಶಂಕರ್ ಅವರಿಗೆ ಸಚಿವ ಸ್ಥಾನ ನೀಡಲು ಸಿಎಂ ನಿರ್ಧರಿಸಿದ್ದಾರೆ ಎಂಬ ಗುಮಾನಿ ರಾಜಕೀಯ ವಲಯದಲ್ಲಿ ಹರಿದಾಡುತ್ತಿದೆ.
ಬೆಳಗಾವಿ ಜಿಲ್ಲೆಗೆ ಅತೀ ಹೆಚ್ಚು ಮಂತ್ರಿಗಿರಿ ನೀಡಿದ್ದಾರೆ ಎನ್ನುವ ಆರೋಪ ಬರಲಿರುವ ಹಿನ್ನೆಲೆಯಲ್ಲಿ ಗೆದ್ದ ಅನರ್ಹರ ಪೈಕಿ ಶ್ರೀಮಂತ ಪಾಟೀಲ್ ಮತ್ತು ಮಹೇಶ್ ಕುಮಟಳ್ಳಿಗೆ ಸಚಿವ ಸ್ಥಾನದ ಬದಲು ನಿಗಮ, ಮಂಡಳಿ ಹುದ್ದೆ ನೀಡಲು ಸಿಎಂ ಚಿಂತನೆ ನಡೆಸಿದ್ದು, ಈ ಸಂಬಂಧ ರಮೇಶ್ ಜಾರಕಿಹೊಳಿ ಜೊತೆ ಮಾತನಾಡಿ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ ಎನ್ನಲಾಗಿದೆ.
ನೂತನ ಶಾಸಕರ ಜೊತೆಗೆ ಹಳಬರ ಪೈಪೋಟಿ ಕೂಡ ಜೋರಾಗಿದ್ದು 10 ಕ್ಕೂ ಹೆಚ್ಚು ಹಳೆಯ ಶಾಸಕರಿಂದ ಸಚಿವ ಸ್ಥಾನಕ್ಕೆ ಒತ್ತಡ ತರಲಾಗುತ್ತಿದೆ. ಇದರಲ್ಲಿ ಈ ಬಾರಿ ಇಬ್ಬರಿಗೆ ಮಾತ್ರ ಸಚಿವ ಸ್ಥಾನ ನೀಡುವ ಸಾಧ್ಯತೆ ಇದೆ. ಹಿರಿಯ ನಾಯಕ ಉಮೇಶ್ ಕತ್ತಿ ಮತ್ತು ರಾಜುಗೌಡರಿಗೆ ಸಚಿವ ಸ್ಥಾನ ನೀಡಲಾಗುತ್ತದೆ ಎಂದು ತಿಳಿದುಬಂದಿದೆ.
ಮುಂದಿನ ವಾರ ಸಿಎಂ ದೆಹಲಿಗೆ ತೆರಳುತ್ತಿದ್ದು ಹೈಕಮಾಂಡ್ ಭೇಟಿ ನಂತರ ಸಂಪುಟ ವಿಸ್ತರಣೆ ಮಾಡಲಾಗುತ್ತದೆ. ಡಿ.20ರ ನಂತರ ಸಂಪುಟ ವಿಸ್ತರಣೆ ಮಾಡಲಿದ್ದು ಒಟ್ಟು 12 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ದಟ್ಟವಾಗಿದೆ.