ಬೆಂಗಳೂರು: ಬಿಜೆಪಿಯಲ್ಲಿ ಸಚಿವ ಸ್ಥಾನ ಸಿಗದೇ ಅಸಮಾಧಾನ ಹೊಂದಿರುವವರು ಬಂಡಾಯದ ಚಟುವಟಿಕೆಗಳಲ್ಲಿ ತೊಡಗುವ ಮುನ್ಸೂಚನೆ ಅರಿತ ಹೈಕಮಾಂಡ್, ಸಚಿವ ಸಂಪುಟ ವಿಸ್ತರಣೆಯತ್ತ ಗಮನ ಹರಿಸಿದೆ. ಹೀಗಾಗಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ನಾಳೆ (ಸೋಮವಾರ) ಸಚಿವ ಸ್ಥಾನದ ಆಕಾಂಕ್ಷಿತರ ಪಟ್ಟಿಯೊಂದಿಗೆ ದೆಹಲಿಗೆ ಬರುವಂತೆ ಸೂಚನೆ ನೀಡಿದೆ.
ಜೆ.ಪಿ.ನಡ್ಡಾ ಜೊತೆ ಸಮಾಲೋಚನೆ: ಸೋಮವಾರ ದೆಹಲಿಗೆ ತೆರಳುತ್ತಿರುವ ಸಂಗತಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಖಚಿತಪಡಿಸಿದ್ದಾರೆ. ಆದರೆ ಯಾವ ವಿಷಯದ ಮೇಲೆ ದೆಹಲಿಗೆ ಭೇಟಿ ನೀಡಲಾಗುತ್ತಿದೆ ಎಂಬ ಸಂಗತಿಯನ್ನು ಗೌಪ್ಯವಾಗಿಟ್ಟಿದ್ದಾರೆ. ಈಟಿವಿ ಭಾರತಕ್ಕೆ ಲಭ್ಯವಾಗಿರುವ ಮಾಹಿತಿ ಪ್ರಕಾರ, ಮುಖ್ಯಮಂತ್ರಿಗಳು ಸಚಿವ ಸಂಪುಟ ವಿಸ್ತರಣೆ ವಿಷಯವಾಗಿಯೇ ನಡ್ಡಾ ಬಳಿ ಸಮಾಲೋಚನೆ ನಡೆಸಲು ಬೆಳಗಾವಿ ಅಧಿವೇಶನದ ನಡುವೆಯೂ ದೆಹಲಿಗೆ ತೆರಳುತ್ತಿದ್ದಾರೆ.
ಈಶ್ವರಪ್ಪ, ಜಾರಕಿಹೊಳಿ ಅತೃಪ್ತಿ:ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳದೇ ಅನಗತ್ಯವಾಗಿ ವಿಳಂಬ ನೀತಿ ಅನುಸರಿಸುತ್ತಿರುವ ಬಗ್ಗೆ ಹಿರಿಯ ನಾಯಕ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಮತ್ತು ರಮೇಶ ಜಾರಕಿಹೊಳಿ ತೀವ್ರ ಅತೃಪ್ತಿ ವ್ಯಕ್ತಪಡಿಸಿ ಪಕ್ಷದ ಹೈಕಮಾಂಡ್ ಮತ್ತು ನಾಯಕತ್ವದ ವಿರುದ್ಧ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸುವ ಮುನ್ಸೂಚನೆ ನೀಡಿದ್ದರು.
ಈ ಬಗ್ಗೆ ಮಾಹಿತಿ ಪಡೆದ ಸಿಎಂ ಬೊಮ್ಮಾಯಿ ಇಬ್ಬರೂ ನಾಯಕರ ಜತೆ ಚರ್ಚಿಸಿ ಹೈಕಮಾಂಡ್ ಭೇಟಿ ಮಾಡಿ ಸಂಪುಟ ವಿಸ್ತರಣೆಗೆ ಗ್ರೀನ್ ಸಿಗ್ನಲ್ ಪಡೆದುಕೊಂಡು ಬರುವ ಆಶ್ವಾಸನೆ ನೀಡಿದ್ದಾರೆ.
ಮುಖ್ಯಮಂತ್ರಿಗಳ ಭರವಸೆ ಮೇರೆಗೆ ಬೆಳಗಾವಿ ಅಧಿವೇಶನದ ಕಾರ್ಯಕಲಾಪಗಳಿಂದ ದೂರ ಉಳಿದು ಮೌನ ಪ್ರತಿಭಟನೆ ನಡೆಸುತ್ತಿದ್ದ ಮಾಜಿ ಸಚಿವ ಈಶ್ವರಪ್ಪ ಮತ್ತು ರಮೇಶ ಜಾರಕಿಹೊಳಿಯವರು ತಮ್ಮ ಅಸಮಾಧಾನ ಮರೆತು ಬೆಳಗಾವಿ ಅಧಿವೇಶನದಲ್ಲಿ ಪಾಲ್ಗೊಂಡು ಗಮನ ಸೆಳೆದಿದ್ದಾರೆ.